ಮಡಿಕೇರಿ, ಮಾ. 2: ವೆಸ್ಟರ್ನ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಮೆನ್ಸ್‍ಕಾಂಪೌಂಡ್ ಮಡಿಕೇರಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೆ. 27 ರಂದು ಸೆಮಿಫೈನಲ್ಸ್ ಪಂದ್ಯದಲ್ಲಿ ಕೆವೈಸಿಸಿ ತಂಡವು ವಿಮಲ್ಸ್ ತಂದ ವಿರುದ್ಧ ಆಡುತ್ತಿದ್ದಾಗ ವಿಮಲ್ಸ್ ತಂಡದ ಆಟಗಾರರು ಕೊಡಗಿನ ರಿಶಿ ಬೋಪಣ್ಣ (ಸುಳ್ಯಕೊಡಿ ಚೆಟ್ಟಿಮನಿ) ತಳೂರು ವಿಕ್ಕಿ ಮತ್ತು ಪ್ರಿನ್ಸ್ ಪೂವಯ್ಯ ಈ ಮೂವರು ಆಟಗಾರರನ್ನು ಕೊಡಗಿನವರಲ್ಲವೆಂದು ಆಟವಾಡಲು ಅವಕಾಶ ನಿರಾಕರಿಸಿ ಅನ್ಯಾಯವೆಸಗಲಾಗಿದೆ ಎಂದು ಕೆವೈಸಿಸಿ ತಂಡದ ಆಟಗಾರರು ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಆಟಗಾರರು, ರಿಶಿ ಬೋಪಣ್ಣ 19 ವರ್ಷದೊಳಗಿನ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು, ಈ ಆಟಗಾರರನ್ನು ನಿರಾಕರಿಸಿ ಅವರಿಗೆ ಅವಮಾನ ಮಾಡಲಾಗಿದೆ. ಕೊಡಗಿನವರು ಎಂಬದಕ್ಕೆ ಜನನ ಪ್ರಮಾಣ ಪತ್ರ, ಆರ್‍ಟಿಸಿ ಹಾಗೂ ಗ್ರಾಮ ಪಂಚಾಯಿತಿಯು ವಾಸ ದೃಢೀಕರಣ ಪತ್ರ ನೀಡಿದ್ದರೂ ನಿರಾಕರಿಸಿರುವದು ಸರಕಾರಿ ಪ್ರಮಾಣ ಪತ್ರಕ್ಕೆ ಬೆಲೆಯಿಲ್ಲದಂತಾಗಿದೆ ಎಂದು ಆಪಾದಿಸಿದ್ದಾರೆ.
ಇನ್ನಾದರೂ ಪ್ರತಿಭಾವಂತ ಆಟಗಾರರಿಗೆ ಈ ರೀತಿ ಅನ್ಯಾಯವಾಗದಂತೆ ಸಂಘಟಕರು ಗಮನ ಹರಿಸುವಂತೆ ಕೋರಿದ್ದಾರೆ.