ಸೋಮವಾರಪೇಟೆ, ಫೆ. 28: ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲಿಸುತ್ತಿದ್ದ ಸವಾರರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಹೆಲ್ಮೆಟ್ ರಹಿತ ಚಾಲನೆಗಾಗಿ ಸವಾರರಿಂದ ದಂಡ ವಸೂಲಿ ಮಾಡಿದರು.

ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಣ್ಣ ಪಟ್ಟಣದ ಕಕ್ಕೆಹೊಳೆ, ಹಳೆ ಪೊಲೀಸ್ ಠಾಣೆ ಎದುರು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲಿಸುತ್ತಿದ್ದ ಸವಾರರನ್ನು ನಿಲ್ಲಿಸಿ, ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿದರಲ್ಲದೆ, ಸುಮಾರು 100ಕ್ಕೂ ಅಧಿಕ ಮಂದಿಯಿಂದ ದಂಡ ವಸೂಲಿ ಮಾಡಿದರು.

ಈ ಹಿಂದೆ ಸೋಮವಾರದಂದು ಮಾತ್ರ ಮಡಿಕೇರಿಯಿಂದ ಆಗಮಿಸುತ್ತಿದ್ದ ಇಂಟರ್‍ಸೆಪ್ಟರ್ ವಾಹನದೊಂದಿಗೆ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಇಲಾಖಾ ಜೀಪ್‍ನಲ್ಲಿಯೇ ತೆರಳಿ ದ್ವಿಚಕ್ರ ವಾಹನ ಸವಾರರ ದಾಖಲಾತಿಗಳನ್ನು ಪರಿಶೀಲಿಸಿದರು. ಹೆಲ್ಮೆಟ್ ಧಾರಣೆ ಕಡ್ಡಾಯವಾಗಿದ್ದು, ಪ್ರತಿಯೊಬ್ಬ ದ್ವಿಚಕ್ರ ಚಾಲಕನೂ ಶಿರಸ್ತ್ರಾಣ ಧರಿಸಬೇಕು. ಪ್ರತಿದಿನ ಪಟ್ಟಣದಲ್ಲಿ ಪೊಲೀಸರು ತಪಾಸಣೆ ನಡೆಸಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ಠಾಣಾಧಿಕಾರಿ ತಿಳಿಸಿದರು.