ವರದಿ : ರಫೀಕ್ ತೂಚಮಕೇರಿ
ಬೆಂಗಳೂರು, ಫೆ. 28: ಕರ್ನಾಟಕದ ವಿಧಾನ ಮಂಡಲದ ಇತಿಹಾಸದಲ್ಲಿ ವಿರೋಧಪಕ್ಷದ ನಾಯಕರಾಗಿ ಇಡೀ ನಾಡಿನ ಗಮನ ಸೆಳೆದಿದ್ದ ಹಿರಿಯ ಸಂಸದೀಯ ಪಟು ಎ.ಕೆ ಸುಬ್ಬಯ್ಯ ಅವರ ಸ್ಥಾನವನ್ನು ಅವರ ನಿವೃತ್ತಿಯ ನಂತರ ಶಾಸನ ಸಭೆಯಲ್ಲಿ ಮತ್ತ್ಯಾರು ತುಂಬಲಿಲ್ಲ. ರಾಜಕಾರಣದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವದು ತೀರಾ ಕಷ್ಟದ ಕೆಲಸವಾಗಿದ್ದರೂ ಶಾಸಕರಾಗಿ 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಸುಬ್ಬಯ್ಯ ಅವರ ಬದುಕಿನಲ್ಲಿ ಯಾವದೇ ಕಪ್ಪುಚುಕ್ಕೆಗಳಿಲ್ಲ. ಇದಕ್ಕೆ ಅವರಲ್ಲಿರುವ ಪ್ರಾಮಾಣಿಕತೆಯೇ ಮುಖ್ಯ ಕಾರಣ ಎಂದು ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರು ಹೇಳಿದರು.
‘ಎ.ಕೆ ಸುಬ್ಬಯ್ಯ ಅಭಿನಂದನಾ ಸಮಿತಿ’ ವತಿಯಿಂದ ಮಂಗಳವಾರ ಸಂಜೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ‘ಜ್ಞಾನಜ್ಯೋತಿ’ ಸಭಾಂಗಣದಲ್ಲಿ ನಡೆದ ಎ.ಕೆ ಸುಬ್ಬಯ್ಯನವರ ಅಭಿನಂದನಾ ಸಮಾರಂಭದಲ್ಲಿ ಸುಬ್ಬಯ್ಯ ಅವರಿಗೆ ‘ದಾರಿದೀಪ’ ಹೆಸರಿನ ಅಭಿನಂದನಾ ಗ್ರಂಥವನ್ನು ಸಮರ್ಪಿಸಿ ಮಾತನಾಡಿದ ಅವರು, ತಮ್ಮ ಹರಿತವಾದ ನಾಲಿಗೆ ಮೂಲಕ ಆಡಳಿತ ವರ್ಗಕ್ಕೆ ಸಿಂಹಸ್ವಪ್ನ ರಾಗಿದ್ದ ಎ.ಕೆ ಸುಬ್ಬಯ್ಯನವರು ನಿರ್ಭೀತಿಯ, ಅಪರೂಪದ, ರಾಜಕಾರಣಿ ಎಂದು ಬಣ್ಣಿಸಿದರು.
ತಮ್ಮ ಸಿದ್ಧಾಂತ ಮತ್ತು ವಿಚಾರಧಾರೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಇವರು, ಕರ್ನಾಟಕದಲ್ಲಿ ಗೌರವದಿಂದ ಕಾಣುವ ಹಿರಿಯ ರಾಜಕಾರಣಿಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ, ಯಶಸ್ವಿ ರಾಜಕಾರಣಿಯಾಗಿ ಸುಬ್ಬಯ್ಯ ಅವರು ರಾಜ್ಯದ ರಾಜಕಾರಣದಲ್ಲಿ ಮಾಡಿದ ಸಾಧನೆ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ಪಟ್ಟರು.
ರಾಜಿಯಾಗದ ರಾಜಕಾರಣಿ : ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದ ‘ಎ.ಕೆ ಸುಬ್ಬಯ್ಯ ಅಭಿನಂದನಾ ಸಮಿತಿ’ಯ ಅಧ್ಯಕ್ಷರೂ ರಾಜ್ಯದ ಹಿರಿಯ ನ್ಯಾಯವಾದಿ ಮತ್ತು ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರು, ಶಾಂತವೇರಿ ಗೋಪಾಲಗೌಡರ ನಂತರ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದ ಎ.ಕೆ. ಸುಬ್ಬಯ್ಯ ಅವರು ಅನ್ಯಾಯ ಮತ್ತು ಭ್ರಷ್ಟಾಚಾರದ ವಿಷಯದಲ್ಲಿ ‘ರಾಜಿಯಾಗದ ರಾಜಕಾರಣಿ’ಯಾಗಿ ನಾಡಿನ ರಾಜಕಾರಣದ ಪರಂಪರೆಗೆ ಅರ್ಥ ತುಂಬಿದರು ಎಂದರು.
ತಿಳಿಯದಂತೆ ಆರಾಧಕನಾದೆ : ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು ಮಾತನಾಡಿ, ಸುಬ್ಬಯ್ಯ ಅವರ ಮಾತಿನಿಂದ ಪ್ರೇರಣೆಗೊಂಡ ತಾನು ತನಗೆ ತಿಳಿಯದಂತೆ ಸುಬ್ಬಯ್ಯನವರ ಆರಾಧಕನಾಗಿದ್ದೇನೆ. ಕೆಲವೊಮ್ಮೆ ಸುಬ್ಬಯ್ಯನವರಂತೆ ಆಗಬೇಕು ಎಂದು ನಿರ್ಧರಿಸಿ ಮುನ್ನಡೆಯಲು ಮುಂದಾ ದಾಗ ಚುನಾವಣೆ ರಾಜಕಾರಣ ನೆನಪಿಗೆ ಬಂದು ನಿರ್ಧಾರದಿಂದ ವಾಪಾಸ್ಸು ಬಂದ ಸಂದರ್ಭ ಅನೇಕ ಬಾರಿ ನಡೆದಿದೆ ಎಂದು ಅವರು ಹೇಳಿದರು.
ನಾಡಿನ ನಾಯಕ : ಕಾರ್ಯಕ್ರಮದಲ್ಲಿ ಎ.ಕೆ. ಸುಬ್ಬಯ್ಯನವರ ಸಮಗ್ರ ಬರಹಗಳ ಗ್ರಂಥ ‘ಸೌಹಾರ್ದ ಸೆಲೆ’ ಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ದೇವನೂರು ಮಹಾದೇವ ಸುಬ್ಬಯ್ಯ ಅವರ ಮುಗ್ಧತೆಯ ಮತ್ತು ನಿರ್ಭೀತಿಯ ವ್ಯಕ್ತಿತ್ವ ಅತಿ ವಿಶಿಷ್ಟವಾದದ್ದು. ರಾಜಕಾರಣಿ ಗಳು ಆಯಾ ಪಕ್ಷದಲ್ಲಿ ನಾಯಕರಾಗಿ ಮಾನ್ಯತೆ ಪಡೆದಿರುತ್ತಾರೆ. ಆದರೆ ಎ.ಕೆ. ಸುಬ್ಬಯ್ಯ ಅವರು ಅವರ ವಿಶೇಷ ಗುಣಗಳ ಮೂಲಕ ನಾಡಿನ ನಾಯಕರಾಗಿದ್ದಾರೆ ಎಂದು ವಿಶ್ಲೇಷಿದರು.
‘ನಿರ್ಭೀತಿಯ ಹೆಜ್ಜೆ’ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಅವರು, ಎ.ಕೆ. ಸುಬ್ಬಯ್ಯ ಅವರ ಸಮಾಜಮುಖಿ ಚಿಂತೆನೆಯ ಜನಪರ ಹೋರಾಟವನ್ನು ಮುಂದುವರೆಸುವ ಹೊಣೆಗಾರಿಕೆ ಯುವ ಸಮೂಹದ ಮೇಲಿದೆ ಎಂದು ಅಭಿಪ್ರಾಯಪಟ್ಟರು.
‘ಒನ್ ಮ್ಯಾನ್ ಆರ್ಮಿ’ : ಮತ್ತೊಬ್ಬರು ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಮಾತನಾಡಿ, ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸಮರ್ಥವಾದ ವಿರೋಧ ಪಕ್ಷದ ನಾಯಕರಾಗಿ ‘ಒನ್ ಮ್ಯಾನ್ ಆರ್ಮಿ’ ಎಂದು ಕರೆಸಿಕೊಂಡಿದ್ದ ಎ.ಕೆ. ಸುಬ್ಬಯ್ಯ ಅವರ ಸಾಧನೆ ಅಸಾಧಾರಣವಾದದ್ದು. ಈ ಬಿರುದು ಸುಬ್ಬಯ್ಯ ಅವರನ್ನು ಹೊರತುಪಡಿಸಿದರೆ ಉಳಿದವ ರ್ಯಾರಿಗೂ ಇದುವರೆಗೂ ದಕ್ಕಿಲ್ಲ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಕೆ.ಜೆ. ಜಾರ್ಜ್ ಅವರು ಪ್ರಸಂಗಗಳ ‘ನಿರ್ಭೀತಿಯ ಹೆಜ್ಜೆ’, ಅವರ ಸಮಗ್ರ ಬರಹಗಳ ಸಂಪುಟ-1 ‘ಸೌಹಾರ್ದ ಸೆಲೆ’ ಸೇರಿದಂತೆ ಜೀವನ ಚರಿತ್ರೆ ‘ಫೀನಿಕ್ಸ್’, ಸಮಗ್ರ ಬರಹಗಳ ಸಂಪುಟ-2 ‘ಆರ್.ಎಸ್.ಎಸ್. ಅಂತರಂಗ ಮತ್ತು ಇತರ ಲೇಖನಗಳು’, (ಮರು ಮುದ್ರಣ) ಸಮಗ್ರ ಬರಹಗಳ ಸಂಪುಟ-3 ‘ದೇವರು ಮತ್ತು ಧರ್ಮ’, ಎ.ಕೆ ಸುಬ್ಬಯ್ಯನವರ ಶಾಸನಸಭೆಯ ಭಾಷಣ ಮತ್ತು ಚರ್ಚೆ: ಸಂಪುಟ-1 ‘ಮಾತಿನ ಮನೆಯಲ್ಲಿ ಸ್ಪಟಿಕದ ಸಲಾಕೆ’ ಹಾಗೂ ಎ.ಕೆ ಸುಬ್ಬಯ್ಯನವರ ಶಾಸನಸಭೆಯ ಭಾಷಣ ಮತ್ತು ಚರ್ಚೆ: ಸಂಪುಟ-2 ‘ನುಡಿಯೆಂಬದು ಉರಿಯ ಕೆಂಡ’ ಹೀಗೆ ಒಟ್ಟು 8 ಕೃತಿಗಳು ಲೋಕಾರ್ಪಣೆಗೊಂಡವು.
ಕಾರ್ಯಕ್ರಮದಲ್ಲಿ ಸಚಿವರುಗಳು, ಸಾಹಿತಿಗಳು, ವಕೀಲರು, ಕೊಡಗಿನ ಪ್ರತಿನಿಧಿಗಳೂ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.