ಚೆಟ್ಟಳ್ಳಿ, ಫೆ. 28: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕಾದರೆ ಗುರಿ, ಶ್ರಮ, ಶಿಸ್ತುಬದ್ಧ ಜೀವನವನ್ನು ಬದುಕಿನಲ್ಲಿ ರೂಪಿಸಿ ಕೊಳ್ಳಬೇಕೆಂದು ಚೆಟ್ಟಳ್ಳಿ ಪ್ರೌಢಶಾಲೆಯ ಮಂಗಳ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ಶಿಕ್ಷಣ ನೀಡಿದ ಗುರುವಿನ ಮಹತ್ವ ಗುರುಶಿಷ್ಯರ ಸಂಬಂಧ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಪ್ರತಿಭೆಗೆ ಶ್ರಮ ಅತ್ಯಗತ್ಯವೆಂದರು. ಶಾಲೆ ಮುಖ್ಯ ಶಿಕ್ಷಕಿ ಕೆ. ತಿಲಕ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು-ಸಂಯಮದ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು. ಸಭಾ ಕಂಪನಕ್ಕೆ ಪ್ರತಿಭೆಗಳು ಅನಾವರಣಗೊಳ್ಳಲಿದೆ. ಶಿಕ್ಷಣದ ಮಹತ್ವ, ಕನ್ನಡ ಶಾಲೆಗಳ ಉಳಿಯುವಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಳ ತಯಾರಿಯ ಬಗ್ಗೆ ತಿಳಿಸಿದರು. ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪಿ.ಎಸ್. ಮಾಚಯ್ಯ ಮಾತನಾಡಿ, ವೃತ್ತಿ ಬದುಕಿನಲ್ಲಿ ತಾಳ್ಮೆಯನ್ನು ವಿದ್ಯಾರ್ಥಿಗಳು ಹೊಂದಲು ಶ್ರಮಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣದ ಬಗ್ಗೆ ವಿವರಿಸಿದರು.

ರಾಮಾಯಣ ಹಾಗೂ ಮಹಾಭಾರತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರವನನ್ನು ನೀಡಿದರು. ಅತಿಥಿಗಳಾಗಿ ಭಾಗವಹಿಸಿದ್ದ ಕರುಣ್ ಕಾಳಯ್ಯ ಕೊಡವ ಮಕ್ಕಡ ಕೂಟದಿಂದ ಪ್ರಕಟಿಸಿದ ಕೊಡಗಿನ ಹಲವು ವೀರ ಯೋಧರ ಪುಸ್ತಕಗಳನ್ನು ಶಾಲೆಯ ವಾಚನಾಲಯಕ್ಕೆ ನೀಡಿದರು ಅವರಿಗೆ ಶಾಲಾ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ಪಿ.ಎಸ್. ಮಾಚಯ್ಯ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಪದ್ಮಾವತಿ ವರದಿ ವಾಚಿಸಿ, ಶಾಲಾ ನಾಯಕ ಅರುಣ್ ಜೂಯಲ್ ವಂದಿಸಿದರು. ಶಿಕ್ಷಕಿ ಸುನಂದಾ ನಿರೂಪಿಸಿದರು. ಸ್ಥಳೀಯ ಪತ್ರಕರ್ತ ಲೂಹಿಸ್, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.