ಮಡಿಕೇರಿ, ಫೆ. 28: ಇಲ್ಲಿನ ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಕಾಮಗಾರಿ ವಿಳಂಬದಿಂದಾಗಿ, ಈ ತಿಂಗಳು ಮುಕ್ತಾಯ ಕಾಣುವದರೊಂದಿಗೆ ಜನಸೇವೆಗೆ ಬಸ್ ನಿಲ್ದಾಣ ಹಾಗೂ ಇಂದಿರಾ ಕ್ಯಾಂಟೀನ್ ಲಭ್ಯವಾಗಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರೈಸಲು ನಗರಸಭೆ ಮುಂದಾಗಿದೆ.
ಅದೇ ರೀತಿ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ಕೂಡ ತರಾತುರಿಯಲ್ಲಿ ಪೂರೈಸಲು ಕಸರತ್ತು ನಡೆಯುತ್ತಿದ್ದು, ನೆಲಮಳಿಗೆಯೊಂದಿಗೆ ಮೊದಲ ಅಂತಸ್ತು ಕೆಲಸವನ್ನು ಬಿರುಸಿನಿಂದ ಕೈಗೆತ್ತಿಕೊಳ್ಳಲಾಗಿದೆ. ಈ ಸಲುವಾಗಿ ರಸ್ತೆ ನಿರ್ಮಾಣ, ಚರಂಡಿ, ಶೌಚಾಲಯ ಇತ್ಯಾದಿ ಕಾಮಗಾರಿ ಭರದಿಂದ ಸಾಗಿದೆ.
ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ಘೋಷಣೆಯಾಗಲಿದೆ ಎಂಬ ಊಹೆಯ ನಡುವೆ ಫೆಬ್ರವರಿ ಕೊನೆಯೊಳಗೆ ಬಸ್ ನಿಲ್ದಾಣ ಲೋಕಾರ್ಪಣೆಗೆ ಪ್ರಯತ್ನ ನಡೆದಿತ್ತು. ಮೂಲಗಳ ಪ್ರಕಾರ ಮಾರ್ಚ್ 20ರ ಬಳಿಕವಷ್ಟೇ ಚುನಾವಣಾ ದಿನಾಂಕ ಘೋಷಣೆಯಾಗುವದಾಗಿ ಹೇಳಲಾಗುತ್ತಿದೆ. ಹೀಗಾಗಿ ಉದ್ಘಾಟನಾ ದಿನಾಂಕ ಕೂಡ
(ಮೊದಲ ಪುಟದಿಂದ) ಮುಂದೂಡಿರುವ ಜಿಲ್ಲಾ ಉಸ್ತುವಾರಿ ಸಚಿವರು, ಸಾಧ್ಯವಿರುವಷ್ಟು ಕಾಮಗಾರಿ ಪೂರೈಸಲು ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ನೂತನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ, ಸಾರಿಗೆ ಬಸ್‍ಗಳ ನಿಲುಗಡೆಗೆ ವ್ಯವಸ್ಥೆ, ಒಳಗೆ ಮತ್ತು ಹೊರ ಹೋಗುವ ಮಾರ್ಗಗಳ ರಸ್ತೆ ನಿರ್ಮಾಣ, ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ಇತ್ಯಾದಿ ಕೆಲಸಗಳು ಇಲ್ಲಿ ತ್ವರಿತಗತಿಯಲ್ಲಿ ಸಾಗತೊಡಗಿದೆ.
ಸಾಮಾಗ್ರಿ ಜೋಡಣೆ : ಇನ್ನೊಂದೆಡೆ ಇಂದಿರಾ ಕ್ಯಾಂಟೀನ್‍ನಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕುಡಿಯುವ ನೀರು, ಶೌಚಾಲಯ, ಸ್ವಸಹಾಯ ಪದ್ಧತಿಯೊಂದಿಗೆ ಆಹಾರ ಸ್ವೀಕರಿಸಲು ವ್ಯವಸ್ಥೆ, ಆಹಾರ ಸೇವನೆ ಬಳಿಕ ತಟ್ಟೆ ಲೋಟಗಳನ್ನು ಇರಿಸಲು ಪ್ರತ್ಯೇಕ ವಿಭಾಗ, ಹಿರಿಯ ನಾಗರಿಕರು, ಮಹಿಳೆಯರು, ವಿಶೇಷ ಚೇತನರಿಗೆ ಆದ್ಯತೆ ನೀಡಿ ಅನುಕೂಲತೆ ಕಲ್ಪಿಸಲಾಗುತ್ತಿದೆ.
ಈ ಸಂಬಂಧ ಈಗಾಗಲೇ ಆಧುನಿಕ ಉಪಕರಣಗಳನ್ನು ಆಹಾರ ತಯಾರಿಕೆಗಾಗಿ ಅಳವಡಿಸಲಾಗುತ್ತಿದೆ. ಸಾಮಗ್ರಿಗಳನ್ನು ಕೂಡ ಜೋಡಣೆಗೆ ದಾಸ್ತಾನುಗೊಳಿಸಿರುವದು ಕಂಡು ಬಂದಿದೆ. ಗ್ರಾಹಕರಿಗೆ ಮಿತ ಪ್ರಮಾಣದಲ್ಲಿ ನೀಡುವ ಆಹಾರ ಪದಾರ್ಥಗಳನ್ನು ತೂಕ ಮಾಪನದಿಂದ ಖಾತರಿಪಡಿಸಿಕೊಳ್ಳಲು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
ಒಟ್ಟಿನಲ್ಲಿ ಈ ತ್ವರಿತ ಕಾಮಗಾರಿ ಪೂರ್ಣಗೊಳಿಸಲು ಇಂದು ನಗರಸಭೆಯ ಪ್ರಬಾರ ಇಂಜಿನಿಯರ್ ಚನ್ನಕೇಶವ ಹಾಗೂ ಇತರರು ಖುದ್ದು ಸ್ಥಳದಲ್ಲಿ ಹಾಜರಿದ್ದು, ಗುತ್ತಿಗೆದಾರರಿಗೆ ನಿರ್ದೇಶನ ನೀಡುತ್ತಿದ್ದದ್ದು ಗೋಚರಿಸಿತು. ಮೂಲಗಳ ಪ್ರಕಾರ ಮಾರ್ಚ್ 6 ಅಥವಾ 15 ರೊಳಗೆ ಇಂದಿರಾ ಕ್ಯಾಂಟೀನ್ ಮತ್ತು ನೂತನ ಬಸ್ ನಿಲ್ದಾಣ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ.