ಮಡಿಕೇರಿ, ಫೆ. 28: ಮುಂದಿನ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಯೊಂದಿಗೆ, ತೀವ್ರ ಬಿಗಿ ಭದ್ರತೆಯ ನಡುವೆ ಜಿಲ್ಲೆಗೆ ತಂದಿರುವ ಆಧುನಿಕ ಮತಯಂತ್ರಗಳ ತಪಾಸಣೆಯು ಇಂದು ಇಲ್ಲಿನ ಪೊಲೀಸ್ ಮೈತ್ರಿ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ಉಪಸ್ಥಿತಿಯಲ್ಲಿ ಆರಂಭ ಗೊಂಡಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಚುನಾವಣಾಧಿಕಾರಿ ಈ ಸಂದರ್ಭ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಆಯೋಗದ ನಿರ್ದೇಶನದಂತೆ ಪ್ರವೇಶ ಪತ್ರ ಪಡೆದವರ ಹೊರತು ತಪಾಸಣಾ ಕೇಂದ್ರಕ್ಕೆ ಯಾರೊಬ್ಬರಿಗೂ ಪ್ರವೇಶವಿಲ್ಲವೆಂದು ಸ್ಪಷ್ಟಪಡಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದ ಭದ್ರತಾ ಕೊಠಡಿಯಿಂದ ಪೊಲೀಸ್ ರಕ್ಷಣೆಯಲ್ಲಿ; ಈಗಾಗಲೇ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳ ಬೆಂಗಾವಲಿನೊಂದಿಗೆ ಪೊಲೀಸ್ ಮೈತ್ರಿ ಭವನಕ್ಕೆ ತರಲಾಯಿತು. ಮೈತ್ರಿ ಸಭಾಂಗಣ ದೊಳಗೆ ಎಲ್ಲವನ್ನು ಲೋಹ ಶೋಧಕ ಯಂತ್ರದ್ವಾರದಿಂದ ಕೊಂಡೊಯ್ಯ ಲಾಯಿತು.
ಕೇಂದ್ರ ಪ್ರವೇಶಿಸುವ ಎಲ್ಲ ಸಿಬ್ಬಂದಿಗಳು ಮೊಬೈಲ್ ಕೂಡ ಒಳಗೊಯ್ಯದಂತೆ ತಾಕೀತು ಮಾಡಿರುವ ಚುನಾವಣಾಧಿಕಾರಿ ಗಳಿಂದ; ಅಲ್ಲಿನ ಪ್ರತಿಯೊಂದು ಅಂಶಗಳನ್ನು ಚಿತ್ರೀಕರಿಸಿಕೊಳ್ಳಲು ನಿಯೋಜಿಸಿರುವ ಇಬ್ಬರು ಛಾಯ ಗ್ರಾಹಕರಿಗೆ ಕಟ್ಟಪ್ಪಣೆ ನೀಡಲಾಗಿತ್ತು.
ಪ್ರಸಕ್ತ ಜಿಲ್ಲೆಯಲ್ಲಿ ಗುರುತಿಸಿರುವ ಸುಮಾರು 530 ಮತಗಟ್ಟೆಗಳಿಗೆ ಅವಶ್ಯವಿರುವ ಇವಿಎಂ ಮತಯಂತ್ರಗಳ ಸಹಿತ ಸುಮಾರು 180 ಹೆಚ್ಚುವರಿ ಮತಯಂತ್ರಗಳನ್ನು ಕೊಡಗಿಗೆ ತರಿಸಲಾಗಿದೆ; ಈ ಎಲ್ಲ ಮತಯಂತ್ರ ಗಳನ್ನು ಪ್ರಮುಖ ರಾಜಕೀಯ ಪಕ್ಷಗಳ ಅಧಿಕೃತ ಗುರುತು ಚೀಟಿ ಪಡೆದಿರುವ ಪ್ರತಿನಿಧಿಗಳ ಸಮ್ಮುಖ ತಪಾಸಣೆ ನಡೆಸಲಾಗುತ್ತಿದೆ.
ತಂತ್ರಜ್ಞರ ಆಗಮನ : ಜಿಲ್ಲೆಗೆ ಈಗಾಗಲೇ ಗುಜರಾತ್ ಹಾಗೂ ತಂಜಾವೂರಿನಿಂದ ತರಿಸಲಾಗಿರುವ ಈ ಮತಯಂತ್ರಗಳನ್ನು ತಪಾಸಣೆ ಗೊಳಪಡಿಸಲು, ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನಿಂದ ಇವಿಎಂ ಯಂತ್ರ ತಜ್ಞರ ಸಹಿತ ಸುಮಾರು 12 ಮಂದಿಯ ತಂಡ ಆಗಮಿಸಿದೆ. ಅವರುಗಳು ಜಿಲ್ಲಾ ಚುನಾವಣಾ ಧಿಕಾರಿಗಳ ಸಮ್ಮುಖ ಮತಯಂತ್ರಗಳ ತಪಾಸಣೆ ಹಾಗೂ ನಿರ್ವಹಣೆ ಕುರಿತ ಚುನಾವಣಾ ಸಿಬ್ಬಂದಿಗೆ ಮಾಹಿತಿ ಒದಗಿಸಲಿದ್ದಾರೆ.
ಒಟ್ಟಿನಲ್ಲಿ ಇಂದು ಮತಯಂತ್ರಗಳ ತಪಾಸಣೆ ಆರಂಭಗೊಂಡಿದ್ದು, ಪ್ರಮುಖ ರಾಜಕೀಯ ಪ್ರತಿನಿಧಿಗಳ ಸಮ್ಮುಖ ಚಾಲನೆ ದೊರೆತಿದೆ. ಒಂದೆಡೆ ಸೂಚಿತ ಅಭ್ಯರ್ಥಿಗಳಿಗೆ ಇಲ್ಲಿ ಮತದಾರ ತನ್ನ ಹಕ್ಕನ್ನು ಇ.ವಿ.ಎಂ. ಯಂತ್ರದ ನಿಗದಿತ ಗುಂಡಿವೊತ್ತುವ ಮೂಲಕ ಚಲಾಯಿಸಿದ ಬೆನ್ನಲ್ಲೇ ವಿವಿಪಿಎಟಿ ಯಂತ್ರದಲ್ಲಿ ತಾನು ಹಕ್ಕು ಚಲಾಯಿಸಿದ ಅಭ್ಯರ್ಥಿಯ ಚಿಹ್ನೆ ಮತ್ತು ಕ್ರಮ ಸಂಖ್ಯೆ ದಾಖಲಾಗಲಿದ್ದು, ಅದನ್ನು ಕೂಡ ಮತದಾರ ಖಾತರಿಪಡಿಸಿಕೊಳ್ಳಲು ಈ ಆಧುನಿಕ ಯಂತ್ರದಲ್ಲಿ ಸಾಧ್ಯವಿದೆ. ಪ್ರಸಕ್ತ ಚುನಾವಣಾ ಆಯೋಗವು ಮತ ಯಂತ್ರಗಳ ತಪಾಸಣೆಗೂ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದು, ಮಾಧ್ಯಮ ಮಂದಿಗೂ ಪ್ರವೇಶ ನಿರಾಕರಿಸಲಾಗಿದೆ.