ಸೋಮವಾರಪೇಟೆ,ಫೆ.28: ಕಳಪೆ ಗುಣಮಟ್ಟದ ಕಾಮಗಾರಿಯ ವಿರುದ್ಧ ಪ್ರಶ್ನಿಸಿ, ಸ್ಥಳೀಯರಲ್ಲಿ ಜಾಗೃತಿ ಮೂಡಿಸಿ ಪ್ರತಿಭಟನೆ ನಡೆಸಿದ್ದೂ ಅಲ್ಲದೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಕೇಂದ್ರ ಸರ್ಕಾರಕ್ಕೆ ದೂರು ನೀಡಿ ಬಿಸಿ ಮುಟ್ಟಿಸಿದ ಹಿನ್ನೆಲೆ ಇದೀಗ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರ ಸ್ವಂತ ಹಣದಿಂದ ಕೈಗೊಂಡಿರುವ ಸನ್ನಿವೇಶಕ್ಕೆ ಯಡವನಾಡು-ಸಜ್ಜಳ್ಳಿ-ಕಾಜೂರು ರಸ್ತೆ ಸಾಕ್ಷಿಯಾಗಿದೆ.
ಜನರ ತೆರಿಗೆ ಹಣ ಸರ್ಕಾರಕ್ಕೆ ತಲುಪಿ, ಜನೋಪಕಾರಕ್ಕೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳು ಕಳಪೆಯಾದ ಸಂದರ್ಭ ಪ್ರಶ್ನಿಸದೇ ಸುಮ್ಮನಿದ್ದರೆ ಜನಸಾಮಾನ್ಯರಿಗೆ ಪ್ರಯೋಜನವಾಗುವದಿಲ್ಲ ಎಂಬದನ್ನು ಅರಿತ ಮಾಹಿತಿ ಹಕ್ಕು ಕಾರ್ಯಕರ್ತರ ಪಡೆ, ಕಳಪೆ ಕಾಮಗಾರಿಯ ವಿರುದ್ಧ ಬೆಂಬಿಡದೇ ಹೋರಾಟ ಮಾಡಿದ್ದರಿಂದ ಇದೀಗ ರಸ್ತೆ ಕಾಮಗಾರಿ ಪುನರ್‍ನಿರ್ಮಾಣಗೊಳ್ಳುತ್ತಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಐಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಯಡವನಾಡು-ಕಾಜೂರು ರಸ್ತೆಯನ್ನು ರೂ. 5.63 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. 2017ರ ಮೇ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಕಾಮಗಾರಿ ನಡೆದು ಒಂದೆರಡು ತಿಂಗಳಿನಲ್ಲಿಯೇ ರಸ್ತೆಯ ಅಲ್ಲಲ್ಲಿ ಗುಂಡಿ ಬಿದ್ದಿತು.
ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್‍ಕುಮಾರ್ ಅವರು ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ದೆಹಲಿಯಲ್ಲಿರುವ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೆಹಲಿಯಿಂದ 1.11.2017ರಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬಂದಿದ್ದು, ತಕ್ಷಣ ಕಳಪೆ ಕಾಮಗಾರಿಯ ವಿರುದ್ಧ ಕ್ರಮ ವಹಿಸುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಗ್ರಾಮೀಣ ರಸ್ತೆಗಳ ಇಲಾಖೆಗೆ ನಿರ್ದೇಶನ ನೀಡಿದ್ದರು. ಪರಿಣಾಮ ಇಲಾಖೆಯ ಗುಣ ನಿಯಂತ್ರಣ ಅಧಿಕಾರಿ ಎಂ.ಎಸ್. ವೆಂಕಟೇಶ್ ಅವರು ಸ್ಥಳ ಪರಿಶೀಲನೆ ನಡೆಸಿ, ರಸ್ತೆ ಕಾಮಗಾರಿ ಕಳಪೆಯಾಗಿರುವನ್ನು ಖಚಿತಪಡಿಸಿದರು.
ಯಡವನಾಡು-ಕಾಜೂರುವರೆಗಿನ ಸುಮಾರು 6 ಕಿ.ಮೀ. ದೂರದ ರಸ್ತೆಯಲ್ಲಿ (ಆಯ್ದ ಜಾಗಗಳಲ್ಲಿ) ಸುಮಾರು ಒಂದೂವರೆ ಕಿ.ಮೀ. ರಸ್ತೆ ಕಳಪೆಯಾಗಿರುವ ಬಗ್ಗೆ ಎಂ.ಎಸ್. ವೆಂಕಟೇಶ್ ಅವರು ಪರಿಶೀಲಿಸಿದರು. ಗ್ರೇಡ್-2 ಮತ್ತು ಗ್ರೇಡ್-3 ಜಲ್ಲಿ ಕಲ್ಲನ್ನು ನಿಗದಿತ ಪ್ರಮಾಣದಲ್ಲಿ ಹಾಕದೇ ಇರುವ ಕಡೆಗಳಲ್ಲಿ, ರಸ್ತೆಯನ್ನು ಸಂಪೂರ್ಣವಾಗಿ ಕಿತ್ತು ಹೊಸದಾಗಿ ಕಾಮಗಾರಿ ನಡೆಸುವಂತೆ ಗುತ್ತಿಗೆದಾರ ದಿನೇಶ್ ಅವರಿಗೆ ಸೂಚಿಸಿದ್ದರು. ಅದರಂತೆ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದ್ದು, ಸುಮಾರು 7 ರಿಂದ 8 ಕಡೆಗಳಲ್ಲಿ ಕಳಪೆಯಾಗಿದ್ದ ರಸ್ತೆಯನ್ನು ಕಿತ್ತು ತೆಗೆಯಲಾಗಿದೆ.
ಇದರೊಂದಿಗೆ ಸುಮಾರು 600 ಮೀಟರ್ ಕಾಂಕ್ರೀಟ್ ರಸ್ತೆಯನ್ನೂ ನಿರ್ಮಿಸಿರಲಿಲ್ಲ. ಈ ಬಗ್ಗೆಯೂ ಸಂಬಂಧಿಸಿದವರಿಗೆ ದೂರು ನೀಡಿ 2 ಬಾರಿ ಪ್ರತಿಭಟನೆ ನಡೆಸಿದ ನಂತರ ರಸ್ತೆ ನಿರ್ಮಿಸಲಾಗಿದೆ. ಒಟ್ಟಾರೆ ಕಳಪೆ ಕಾಮಗಾರಿಯ ವಿರುದ್ಧ ಕಾನೂನು ಭಾಗದಲ್ಲಿ ನಡೆಸಿದ ಹೋರಾಟಕ್ಕೆ ಜಯ ಲಭಿಸಿದ್ದು, ಗುತ್ತಿಗೆದಾರರು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ ಎಂದು ಶಾಂತಳ್ಳಿ ಗ್ರಾ.ಪಂ. ಅದ್ಯಕ್ಷರೂ ಆಗಿರುವ ಬಗ್ಗನ ಅನಿಲ್‍ಕುಮಾರ್ ಸಮಾಧಾನ ವ್ಯಕ್ತಪಡಿಸಿದ್ದಾರೆ.