ಗೋಣಿಕೊಪ್ಪ ವರದಿ, ಫೆ. 28: ಕೊಡವ ಭಾಷೆಯ ಪ್ರಥಮ ಸಾಹಿತ್ಯಕಾರ ಅಪ್ಪಚ್ಚಕವಿಗೆ ಸರ್ಕಾರ ವಿಶೇಷ ಗೌರವ ನೀಡಬೇಕು ಎಂಬ ಮೂರು ನಿರ್ಣಯಗಳ ಮೂಲಕ ಒತ್ತಾಯಿಸಲಾಯಿತು.

ಅಖಿಲ ಕೊಡವ ಸಮಾಜ, ಇಗ್ಗುತಪ್ಪ ಕೊಡವ ಸಂಘ ಸಹಯೋಗದಲ್ಲಿ ಇಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ಆಯೋಜಿ ಸಿದ್ದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150 ನೇ ಜನ್ಮೋತ್ಸ ವದಲ್ಲಿ ತೆಗೆದುಕೊಳ್ಳಲಾಯಿತು.

ಸೆಪ್ಟೆಂಬರ್ 21 ರಂದು ನಡೆಯುವ ಅಪ್ಪಚ್ಚಕವಿ ಜನ್ಮೋತ್ಸವ ವನ್ನು ಜಿಲ್ಲಾಡಳಿತ ಆಚರಿಸುವಂತಾಗ ಬೇಕು, ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಕವಿಯ ಹುಟ್ಟೂರು ನಾಪೋಕ್ಲು ಸರ್ಕಾರಿ ಕಾಲೇಜಿಗೆ ಅಪ್ಪಚಕವಿ ಹೆಸರು ಹಾಕುವದು ಮತ್ತು ಮೈಸೂರು ಅಥವಾ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕವಿಯ ಹೆಸರಿನಲ್ಲಿ ವಿಶೇಷ ಪೀಠ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಲಾಯಿತು.

ಬೆಂಗಳೂರು ವಿಶ್ವ ವಿದ್ಯಾಲಯದ ನಿವೃತ ಪ್ರೊಫೆಸರ್ ಡಾ. ಕಲ್ಯಾಟಂಡ ಬಿ. ಚಿಣ್ಣಪ್ಪ ಮಾತನಾಡಿ, ಕುವೆಂಪು, ದಾ. ರಾ ಬೇಂದ್ರೆಯಂತಹ ಮಹಾನ್ ಕವಿಗಳು ವಿಶ್ವ ವಿದ್ಯಾಲಯ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು. ಆದರೆ ಕೇವಲ 4 ತರಗತಿ ಶಿಕ್ಷಣ ಪಡೆದ ಹರದಾಸ ಅಪ್ಪಚ್ಚಕವಿ ವಿಶ್ವ ವಿದ್ಯಾಲಯ ದಲ್ಲಿ ಸೇರದ ಕೊಡವ ಭಾಷೆಯಲ್ಲಿ ಸಾಹಿತ್ಯ ರಚಿಸಿ ಬೆಳೆದವರು. ಹರದಾಸ ಅಪ್ಪಚ್ಚಕವಿ ಬುದ್ದಿಮತ್ತೆಯಲ್ಲಿ ಸೂಪರ್ ಜೀನಿಯಸ್ ಆಗಿದ್ದವರು ಎಂದು ಬಣ್ಣಿಸಿದರು.

ಪ್ರೊ. ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಮಾತನಾಡಿ, ಕೊಡವ ಸಾಹಿತ್ಯದ ಪಿತಾಮಹ ಅಪ್ಪಚ್ಚಕವಿ ವಿಶ್ವಶ್ರೇಷ್ಠ ಕವಿಯಾಗಿದ್ದರೂ ಅವರಿಗೆ ಒಳ್ಳೆಯ ಬಿರುದುಗಳು ದೊರೆಕಿಲ್ಲ. ಹೊರದೇಶದ ಕವಿಗಳಾಗಿದ್ದರೆ ಅವರಿಗೆ ದೊಡ್ಡ ಬಿರುದು ಲಭಿಸುತ್ತಿತ್ತು. ಅವರಿಗೆ ವಿಶ್ವಶ್ರೇಷ್ಠ ಬಿರುದು ಲಭಿಸುವವರೆಗೆ ಒತ್ತಡ ಹೇರಬೇಕಾಗಿದೆ ಎಂದರು.

ಈ ಸಂದರ್ಭ ಇಗ್ಗುತಪ್ಪ ಕೊಡವ ಸಂಘ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ, ಕಾರ್ಯದರ್ಶಿ ಅಜ್ಜಿಕುಟ್ಟೀರ ದೇವಯ್ಯ, ಕಾವೇರಿ ಮಹಿಳಾ ಸಮಾಜ ಅಧ್ಯಕ್ಷೆ ಕಟ್ಟೇರ ಉತ್ತರೆ ಅಪ್ಪಚ್ಚು, ಅಖಿಲ ಕೊಡವ ಸಮಾಜ ನಿರ್ದೇಶಕಿ ಮೂವೇರ ರೇಖಾ ಪ್ರಕಾಶ್, ಪ್ರ. ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ, ಜನ್ಮೋತ್ಸವ ಸಮಿತಿ ಸಂಚಾಲಕ ಅಡ್ಡಂಡ ಕಾರ್ಯಪ್ಪ ಉಪಸ್ಥಿತರಿದ್ದರು.

ಜನ್ಮೋತ್ಸವ ಸಮಿತಿ ಸಂಚಾಲಕ ಅಡ್ಡಂಡ ಕಾರ್ಯಪ್ಪ ಅವರು ಕವಿಕಾವ್ಯ ನಿರೂಪಣೆ ಮೂಲಕ ಗಮನ ಸೆಳೆದರು.

ಕಲಾವಿದರುಗಳಾದ ಆಂಗೀರ ಕುಸುಮ್ ಮಾದಪ್ಪ, ಮದ್ರೀರ ಸಂಜು ಬೆಳ್ಯಪ್ಪ, ತಬಲ ಚಂದ್ರ ಹಾಗೂ ವಿ. ಟಿ. ಶ್ರೀನಿವಾಸ್ ಸಂಯೋಜನೆ ಮೂಲಕ ಅಪ್ಪಚ್ಚಕವಿ ಕಾವ್ಯಲೋಕಕ್ಕೆ ಕರೆದುಕೊಂಡು ಹೋದ ಅನುಭವ ನೀಡಿದರು.

ಅಪ್ಪಚ್ಚಕವಿ ಬರೆದಿರುವ 4 ನಾಟಕಗಳಲ್ಲಿ ನೀಡಿರುವ ಕಾವ್ಯಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಕಾವ್ಯಗಳನ್ನು ಪ್ರಸ್ತುತಪಡಿಲಾಯಿತು.

ವರದಿ : ಸುದ್ದಿಪುತ್ರ