ಮಡಿಕೇರಿ, ಫೆ. 28: ಕಳೆದ ಜನವರಿ 31ರಂದು ಗಾಳಿಬೀಡು ಸನಿಹದ ಕೂಟುಹೊಳೆಯಲ್ಲಿ ಶವ ದೊರೆತ ಪ್ರಕರಣ ತಿರುವು ಪಡೆದುಕೊಂಡಿದ್ದು, ಕೊಲೆ ಮೊಕದ್ದಮೆ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಇಲ್ಲಿನ ನ್ಯಾಯಾಲಯ ಗ್ರಾಮಾಂತರ ಪೊಲೀಸರಿಗೆ ಆದೇಶಿಸಿದೆ. ಪ್ರಕರಣದ ಕುರಿತು ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನೀಡಿದ ದೂರುಗಳನ್ನು ಪೊಲೀಸರು ಸ್ವೀಕರಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.

ಕಳೆದ ಜನವರಿ 31ರಂದು ಗಾಳಿಬೀಡು ಸನಿಹದ ಕೂಟುಹೊಳೆ ಯಲ್ಲಿ ಮೊಣ್ಣಂಗೇರಿ ನಿವಾಸಿ ಯಾಲದಾಳು ಪ್ರಭು ಎಂಬವರು ಈಜಲು ತೆರಳಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವದಾಗಿ ಆತನ ಜೊತೆಗೆ ಪಾರ್ಟಿ ಮಾಡಿದ ಸ್ನೇಹಿತರು ನೀಡಿದ ದೂರಿನನ್ವಯ ಗ್ರಾಮಾಂತರ ಪೊಲೀಸರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವದಾಗಿ ಪ್ರಕರಣ ದಾಖಲಿಸಿದ್ದರು. ಆದರೆ ಮೃತದೇಹದ ಬಾಯಿ, ತುಟಿಗಳಲ್ಲಿ, ಕುತ್ತಿಗೆಯಲ್ಲಿ ಗಾಯಗಳಾಗಿದ್ದು, ಕಿವಿಯಿಂದ ರಕ್ತ ಬರುತ್ತಿದ್ದುದು, ಅಲ್ಲದೆ ಮೃತದೇಹದಲ್ಲಿ ನೀರು ಕುಡಿದ ಯಾವದೇ ಸೂಚನೆ ಗಳಿಲ್ಲದ್ದರಿಂದ ಮೃತರ ಕುಟುಂಬಸ್ಥರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆದರೆ ಪೊಲೀಸರು ಸ್ವೀಕರಿಸಲು ನಿರಾಕರಿಸಿದ್ದರಿಂದ ವಕೀಲ ಡಾ. ಮನೋಜ್ ಬೋಪಯ್ಯ ಅವರ ಮೂಲಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.

ವೈ.ಪಿ. ಪೂಣಚ್ಚ ಅವರು ಸಲ್ಲಿಸಿರುವ ದೂರಿನಲ್ಲಿ ಅದೇ ಗ್ರಾಮದ ಅಮ್ಮಣಿಚಂಡ ಚೇತನ್, ಕೋಚನ ಕಿಶೋರ್ ಕುಮಾರ್, ಕೋಚನ ರಚನ್, ಯಾಲದಾಳು ಶರತ್ ಹಾಗೂ ಮಲಯಾಳಿ ಚೇತನ್ ಎಂಬವರುಗಳನ್ನು ಆರೋಪಿಗಳ ನ್ನಾಗಿಸಿ, ಈ ಐವರು ಸೇರಿ ಪ್ರಭುವನ್ನು ಕರೆಸಿ ಕೊಂಡು ಕೊಲೆ ಮಾಡಿರುವದಲ್ಲದೆ, ದೂರು ನೀಡಲು ಮುಂದಾದವರ ಮೇಲೆ ಬೆದರಿಕೆಯೊಡ್ಡಿ ಸಾಕ್ಷಿ ನಾಶ ಮಾಡಲು ಯತ್ನಿಸಿರುವದಾಗಿ ತಿಳಿಸಲಾಗಿದೆ.

ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲ ಯದ ನ್ಯಾಯಾಧೀಶರಾದ ಶರ್ಮಿಳಾ ಪ್ರಭು ಅವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 307, ಸಾಕ್ಷಿ ನಾಶಕ್ಕೆ ಸಂಬಂಧಿಸಿದಂತೆ 207ರಂತೆ ಮೊಕದ್ದಮೆ ದಾಖಲಿಸಿ ಮಾರ್ಚ್ 31ರೊಳಗಡೆ ಸಂಪೂರ್ಣ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣದ ಬಗ್ಗೆ ನ್ಯಾಯಾಲಯ ಮೊಕದ್ದಮೆ ದಾಖಲಿಸುವಂತೆ ತೀರ್ಪು ನೀಡಿತ್ತು. ಇದೀಗ ಜಿಲ್ಲೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ. ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರ ಬರಲಿದೆ.