ನಾಪೋಕ್ಲು, ಫೆ. 27: ಆನೆಗಳ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾದ ಘಟನೆ ಮರಂದೋಡದಲ್ಲಿ ಸಂಭವಿಸಿದೆ. ಮರಂದೋಡ ಗ್ರಾಮದ ಚಂಡೀರ, ಅಣ್ಣಮಂಡ, ನಿಡುಮಂಡ, ಅಣ್ಣಾಡಿಯಂಡ ಸೇರಿದಂತೆ ಹಲವು ಕುಟುಂಬಗಳ ತೋಟಗಳಿಗೆ ಒಂದು ಮರಿ ಸೇರಿದಂತೆ ಐದು ಆನೆಗಳ ಹಿಂಡು ಸತತ ಧಾಳಿ ನಡೆಸುತ್ತಿದ್ದು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಮಂಗಳವಾರ ಬೆಳಿಗ್ಗೆ ಅಣ್ಣಮಂಡ ನಂದ ಅವರ ಮನೆಯಂಗಳದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದ್ದು ಕುಟುಂಬಸ್ಥರು ಭಯಭೀತರಾಗಿದ್ದಾರೆ. ಆನೆಗಳ ಹಾವಳಿಯಿಂದ ಕಾಫಿ ಹಾಗೂ ಕಾಳುಮೆಣಸು ಕೊಯ್ಯಲು ಕಾರ್ಮಿಕರು ಬರುತ್ತಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಆನೆ ಧಾಳಿಗೆ ಹೆದರಿ ಶಾಲಾ ವಿದ್ಯಾರ್ಥಿಗಳನ್ನು ಪಟ್ಟಣದ ಶಾಲೆಯ ಸಮೀಪದ ಮನೆಗಳಲ್ಲಿ ವಾಸ್ತವ್ಯ ಕಲ್ಪಿಸುವಂತಾಗಿದೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೂ ಯಾವದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. - ದುಗ್ಗಳ