ಶ್ರೀಮಂಗಲ,ಫೆ. 27: ವೀರಾಜಪೇಟೆ ತಾಲೂಕು ವ್ಯಾಪ್ತಿಯ ಬಗರ್ ಹುಕ್ಕುಂನ ಸಕ್ರಮಿಕರಣದ (ಅಕ್ರಮ-ಸಕ್ರಮ) ನೂತನ ಹೆಚ್ಚುವರಿ ಸಮಿತಿಯ ಎರಡನೇ ಸಭೆಯಲ್ಲಿ ಅರ್ಜಿದಾರರ ಅರ್ಜಿಗಳನ್ನು ಪರಿಶೀಲಿಸಿ ಮೂರು ಅರ್ಹ ಫಲಾನುಭವಿಗಳಿಗೆ ಜಾಗ ಮಂಜೂರಾತಿಯ ದಾಖಲೆಯನ್ನು ನೀಡಲಾಯಿತು.
ಹೆಚ್ಚುವರಿ ಅಕ್ರಮ-ಸಕ್ರಮ ಸಮಿತಿಗೆ ಒಂದು ತಿಂಗಳ ಹಿಂದೆಯಷ್ಟೆ ರಾಜ್ಯ ಸರ್ಕಾರ ನೇಮಕ ಮಾಡಿದ ಅಧ್ಯಕ್ಷ ಮಿದೇರಿರ ನವೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಮಿದೇರಿರ ಅವರು ಅಕ್ರಮ-ಸಕ್ರಮ ಸಮಿತಿಗೆ ಅರ್ಹ ಫಲಾನುಭವಿಗಳು ನಿಯಮದಂತೆ ತಮ್ಮ ಸ್ವಾಧೀನದಲ್ಲಿ ತೋಟ ಮಾಡಿರುವ ಜಾಗವನ್ನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಪರಿಶೀಲಿಸಿ ತ್ವರಿತಗತಿಯಲ್ಲಿ ಜಾಗ ಮಂಜೂರು ಮಾಡಲಾಗುತ್ತಿದೆ. ಅರ್ಹ ಫಲಾನುಭವಿಗಳು ತಮ್ಮ ಬಾಕಿ ಉಳಿದಿರುವ ಅರ್ಜಿಗಳನ್ನು ಸಮಿತಿಯ ಸಭೆಯಲ್ಲಿಡುವಂತೆ ಸೂಚಿಸಿದರು.
ಈ ಸಂದರ್ಭ ಅಕ್ರಮ-ಸಕ್ರಮ ಸಮಿತಿಯ ಕಾರ್ಯದರ್ಶಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಸದಸ್ಯರಾದ ಪೋರೆರ ಎಂ.ಬಿದ್ದಪ್ಪ, ಹೆಚ್.ವಿ.ರಾಮದಾಸ್, ಮಚ್ಚರಂಡ ರೀಣಾ ಅವರ ಸಮಾಕ್ಷಮ ಹಾಗೂ ಅರ್ಜಿಗಳನ್ನು ಪರಿಶೀಲನೆ ಮಾಡಿ ಫಲಾನುಭವಿಗಳಿಗೆ ಪೈಸಾರಿ ಜಾಗ ಒತ್ತುವರಿ ಮಾಡಿಕೊಂಡು ಕೃಷಿ ಮಾಡಿರುವದನ್ನು ಖಾತರಿಪಡಿಸಿಕೊಂಡು ಜಾಗ ಮಂಜೂರಾತಿ ಮಾಡಿ ದಾಖಲೆಗಳನ್ನು ಹಸ್ತಾಂತರಿಸಲಾಯಿತು.