ಮಡಿಕೇರಿ, ಫೆ. 27: ಕೊಡಗು ಜಿಲ್ಲೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಜರುಗಿದ ಹಲವು ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ.ಉಪ ನಿರ್ದೇಶಕರಾಗಿ ಅಧಿಕಾರ ಸ್ವೀಕಾರಮಡಿಕೇರಿ: ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾಗಿ (ಡಿ.ಡಿ.ಪಿ.ಐ.) ಮಂಜುಳಾ ಅವರು ಅಧಿಕಾರ ಸ್ವೀಕರಿಸಿದರು.ಈ ಸಂದರ್ಭ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಖಜಾಂಚಿ ಕೆ.ಎಂ. ದಿನೇಶ್, ಸಂಘದ ವಿಭಾಗಿಯ ಸಂಘಟನಾ ಕಾರ್ಯದರ್ಶಿ ಎಂ. ರಂಗಸ್ವಾಮಿ, ಪದಾಧಿಕಾರಿಗಳಾದ ಎಸ್. ನಾಗರಾಜ್, ಎ.ಸಿ. ಮಂಜುನಾಥ್, ನವೀನ್ ಕುಮಾರ್ ಇದ್ದರು. ಇವರು ಈ ಮೊದಲು ಮೈಸೂರು ಜಿಲ್ಲೆಯಲ್ಲಿ ಡಿಡಿಪಿಐ ಯಾಗಿ ಸೇವೆ ಸಲ್ಲಿಸುತ್ತಿದ್ದರು.ಮುಳ್ಳೂರು ಶಾಲೆಗೆ ಭೇಟಿಒಡೆಯನಪುರ: ಶನಿವಾರಸಂತೆ ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೊಡಗು ಜಿಲ್ಲೆ ಪರಿಸರ ಮಿತ್ರ ಮೌಲ್ಯ ಮಾಪನ ತಂಡ ಭೇಟಿ ನೀಡಿ ಪರಿಸರ ಸ್ನೇಹಿ ಕಾರ್ಯಕ್ರಮವನ್ನು ಪರಿಶೀಲಿಸಿ ಸಹ ಶಿಕ್ಷಕ ಸಿ.ಎಸ್. ಸತೀಶ್ ಮತ್ತು ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿತು. ಶಾಲೆಯಲ್ಲಿ ಹಳೆ ಪ್ಲಾಸ್ಟಿಕ್ ಕಾಗದ ರಟ್ಟು ಲೋಹಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನು ತಯಾರಿಸುತ್ತಿರುವದನ್ನು ತಂಡ ವೀಕ್ಷಿಸಿ ಪ್ರಶಂಶಿಸಿತು.
ಈ ಸಂದರ್ಭ ಪರಿಸರ ಮಿತ್ರ ಕಾರ್ಯಕ್ರಮ ಯೋಜನೆಯ ಕೊಡಗು ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮ್‍ಕುಮಾರ್ ಮಾತನಾಡಿದರು. ಈ ಸಂದರ್ಭ ತಂಡವು ಶಾಲಾ ಹಿಂಭಾಗದಲ್ಲಿ ವಿದ್ಯಾರ್ಥಿಗಳಿಗೆ ಜೈವಿಕ ಗೊಬ್ಬರಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸ್ಥಾಪಿಸಿರುವ ಕಾಂಪೋಸ್ಟ್ ಮತ್ತು ಎರೆಗೊಬ್ಬರ ಘಟಕಗಳನ್ನು ವೀಕ್ಷಿಸಿತು. ಶಾಲೆಯ ಭೌತಿಕ ಪರಿಸರ ನೀರಿನ ವ್ಯವಸ್ಥೆ, ವಸ್ತುಗಳ ಪುನರ್‍ಬಳಕೆ, ಗಾಳಿ ಮಣ್ಣಿನ ಆರೋಗ್ಯ ಶಾಲಾ ಸ್ವಚ್ಛತೆ, ಶಾಲಾ ಕೈತೋಟ ಮುಂತಾದ ವ್ಯವಸ್ಥೆಯನ್ನು ಪರಿಶೀಲಿಸಿತು.
ಪರಿಸರ ಮಿತ್ರ ಮೌಲ್ಯ ಮಾಪನ ಕಾರ್ಯಕ್ರಮದಡಿಯಲ್ಲಿ ಈ ಶಾಲೆಯು ಜಿಲ್ಲೆಯಲ್ಲಿ ಅತ್ಯುತ್ತಮ ಶಾಲೆ ಎಂದು ಗುರುತಿಸಿಕೊಂಡಿರುವ ಹಿನ್ನೆಲೆ ಪರಿಸರ ಮಿತ್ರ ಪ್ರಶಸ್ತಿಯೊಂದಿಗೆ ರೂ. 30 ಸಾವಿರ ನೀಡಲಾಗುತ್ತದೆ. ತಂಡವೂ ಈ ಶಾಲೆಯನ್ನು ಪರಿಶೀಲಿಸಿ ಪ್ರಶಸ್ತಿಗಾಗಿ ಮೌಲ್ಯಮಾಪನ ನಡೆಸಿದೆ. ತಂಡದಲ್ಲಿ ಪರಿಸರ ಮಿತ್ರ ಕಾರ್ಯಕ್ರಮ ಯೋಜನೆಯ ಕೆ. ಮೂರ್ತಿ, ಬಿಆರ್‍ಪಿ ರಂಜಿತ್ ಮತ್ತು ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಹಾಜರಿದ್ದರು.
ಪ್ರೊ. ಸಿ.ಎಂ. ಧರ್ಮಪ್ಪಗೆ ಸನ್ಮಾನ
ಸೋಮವಾರಪೇಟೆ: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಚಿಕ್ಕ ಅಳುವಾರದ ಜ್ಞಾನಕಾವೇರಿ ಸ್ನಾತಕ್ಕೋತ್ತರ ಕೇಂದ್ರದಲ್ಲಿ ನಡೆದ “ವಚನ ಕ್ರಾಂತಿಯ ಪುನರುತ್ಥಾನ’ ರಾಜ್ಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ಸರ್ವಾಧ್ಯಕ್ಷ ಪ್ರೊ. ಸಿ.ಎಂ. ಧರ್ಮಪ್ಪ ಅವರನ್ನು ಸನ್ಮಾನಿಸಲಾಯಿತು.
ಅರಮೇರಿ-ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬಸವಪಟ್ಟಣದ ಸ್ವತಂತ್ರ ಬಸವಲಿಂಗಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಶನಿವಾರಸಂತೆ ಶಿಡಿಗಳಲೆ ಮಠಾಧೀಶ ಇಮ್ಮಡಿ ಶಿವಲಿಂಗ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
‘ಪಠ್ಯದೊಂದಿಗೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಿ’
ವೀರಾಜಪೇಟೆ: ವ್ಯಕ್ತಿ ಯಶಸ್ಸು ಗಳಿಸಬೇಕಾದರೆ ಅವರ ವರ್ತನೆಗಳು ಸರಿಯಾಗಿರಬೇಕು. ಸಾಮಾನ್ಯವಾಗಿ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೊಂಭತ್ತು ಭಾಗ ಯಶಸ್ವಿಯಾಗುತ್ತಾರೆ. ಆದರೆ ಜೀವನದಲ್ಲಿ ಸೋಲು ಅನುಭವಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಡಾ. ಬೈಜು ಆ್ಯಂಟೋನಿ ಹೇಳಿದರು.
ವೀರಾಜಪೇಟೆ ಸರಕಾರಿ ಕಾಲೇಜಿನ ದಶಮಾನೋತ್ಸವದ ಹಾದಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಒಂದು ವೇದಿಕೆ. ಈ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿದ್ದ ವಾಣಿಜ್ಯ ಶಾಸ್ತ್ರದ ಮುಖ್ಯಸ್ಥ ಪ್ರೊ. ವೇಣುಗೋಪಾಲ್ ಕಾರ್ಯಕ್ರಮದ ರೂಪುರೇಷೆ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಮಂಜುನಾಥ್ ಸ್ವಾಗತಿಸಿದರು. ವೇದಿಕೆಯಲ್ಲಿ ವಾಣಿಜ್ಯ ಸಂಘದ ಅಧ್ಯಕ್ಷ ರುಚಿತ್ ಕುಮಾರ್ ಮತ್ತು ಸಂಯೋಜಕ ಷಫಿಕ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಾವ್ಯ ಮತ್ತು ರೀಶಾನ ನಿರೂಪಿಸಿದರು. ವಾಣಿಜ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುನೀತ ವಂದಿಸಿದರು.
ರಕ್ತದಾನ-ಏಡ್ಸ್ ಜಾಗೃತಿ ಶಿಬಿರ
ಮಡಿಕೇರಿ: ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್‍ಕ್ರಾಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ಹಾಗೂ ಏಡ್ಸ್ ಜಾಗೃತಿ ಶಿಬಿರ ತಾ. 28 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ವಹಿಸಲಿದ್ದು, ಉದ್ಘಾಟನೆಯನ್ನು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ನೆರವೇರಿಸಲಿದ್ದಾರೆ. ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರಿಯದರ್ಶಿನಿ, ಏಡ್ಸ್ ನಿಯಂತ್ರಣ ಘಟಕ ಜಿಲ್ಲಾ ಮೇಲ್ವಿಚಾರಕಿ ಕೂಪದಿರ ಸುನೀತ ಮುತ್ತಣ್ಣ ಇತರರು ಪಾಲ್ಗೊಳ್ಳಲಿದ್ದಾರೆ.ಶಿಕ್ಷಕ ಜೋಯಪ್ಪರಿಗೆ ಬೀಳ್ಕೊಡುಗೆ
ಸುಂಟಿಕೊಪ್ಪ: ಮಾದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಶಾಂತಳ್ಳಿ ಜೋಯಪ್ಪ ಹುಟ್ಟುಹಬ್ಬದ ದಿನವೇ ನಿವೃತ್ತಿ ಹೊಂದಿದ್ದು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸಮಾರಂಭದಲ್ಲಿ ಸೋಮವಾರಪೇಟೆ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಮಾಲತಿ ಸನ್ಮಾನಿಸಿದರು. ಸೋಮವಾರಪೇಟೆ ತಾಲೂಕು ಶಿಕ್ಷಣ ಸಂಯೋಜಕ ಕೆ. ಮೂರ್ತಿ ಶಿಕ್ಷಕ ಜೋಯಪ್ಪ ಅವರ ಸೇವಾ ನಿಷ್ಠೆಯನ್ನು ನೆನಪಿಸಿಕೊಂಡರು.
ಶಿಕ್ಷಣ ಇಲಾಖೆಯ ವಸಂತ ಕುಮಾರ್, ಸತ್ಯನಾರಾಯಣ, ಹೆಚ್.ಎಂ. ವೆಂಕಟೇಶ್ ಹಾಗೂ ಶಾಲಾಭಿವೃದ್ಧಿ ಸಮಿತಿ. ಅಧ್ಯಕ್ಷ ಹಸೈನಾರ್, ಅಂಗನವಾಡಿ ಶಿಕ್ಷಕಿ ಜಯಂತಿ, ಶಾಲಾ ಸಹ ಶಿಕ್ಷಕಿಯರುಗಳಾದ ಶೋಭಾ, ಪೊನ್ನಮ್ಮ, ಜ್ಞಾನೇಶ್ವರಿ, ಮಮತಾ, ಸುನೀತಾ ಹಾಗೂ ಶಾಲಾ ಮಕ್ಕಳು ಇದ್ದರು.
ವಿಜ್ಞಾನ ಮೇಳ ಕಾರ್ಯಕ್ರಮ
ಮಡಿಕೇರಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ಮೇಳ ಕಾರ್ಯಕ್ರಮ ತಾ. ಫೆಬ್ರವರಿ 28 ರಂದು ಬೆಳಿಗ್ಗೆ 10.15 ಕ್ಕೆ ಕಾಲೇಜು ಸಭಾಂಗದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಹಿರಿಯ ವೈಜ್ಞಾನಿಕಾಧಿಕಾರಿ ಡಾ. ಎ.ಎಂ. ರಮೇಶ್ ಉದ್ಘಾಟನೆ ಮಾಡಲಿದ್ದು, ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಜಯಚಾಮರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಿ. ಮನೋಜ್ ಕುಮಾರ್, ರಾಣಿ ಚೆನ್ನಮ್ಮ ವಿ.ವಿ.ಯ ಪ್ರಾಧ್ಯಾಪಕ ಡಾ. ಜೆ. ಮಂಜಣ್ಣ ಇತರರು ಪಾಲ್ಗೊಳ್ಳಲಿದ್ದಾರೆ.
ವಿಕಲಚೇತನನಿಗೆ ಕಿಟ್ ವಿತರಣೆ
ಸುಂಟಿಕೊಪ್ಪ: ಮಾದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಕೆ.ಎಸ್. ಸೂರಜ್ ಅವರಿಗೆ ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ವಿತರಿಸಲಾಗುವ ವಿಕಲಚೇತನರ ಬ್ರೈಲ್ ಲಿಪಿಯ ಕಿಟ್‍ನ್ನು ಸೋಮವಾರಪೇಟೆ ತಾಲೂಕು ಕ್ಷೇತ್ರ ಸಮನ್ಯಯಾಧಿಕಾರಿ ಮಾಲತಿ ವಿತರಿಸಿದರು.
ಮಾದಾಪುರದ ಜಂಬೂರು ನಿವಾಸಿಗಳಾದ ಕೆ.ಎಸ್. ಸುದೀಶ್ ಮತ್ತು ಜಯಂತಿ ಅವರ ಪುತ್ರ ಸೂರಜ್ ಪ್ರಸ್ತುತ ಕೂಡಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ವಿದ್ಯಾರ್ಥಿಗಳಿಗೆ ಪರಿಸರ ಪಯಣ
ಸುಂಟಿಕೊಪ್ಪ: ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕೊಡಗು ಇಕೋ ಕ್ಲಬ್ ವತಿಯಿಂದ ಕುಶಾಲನಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪೊಲೀಸ್ ಪಡೆ (ಸ್ಟುಡೆಂಟ್ ಪೊಲೀಸ್ ಕೆಡೆಟ್)ಯ ವಿದ್ಯಾಥಿಗಳು ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮದ ಶ್ರೀ ಭದ್ರಕಾಳಿ ದೇವರಕಾಡಿಗೆ ಭೇಟಿ ನೀಡಿ ಪರಿಸರ ಪಯಣ ಕಾರ್ಯಕ್ರಮದಡಿ ಅದ್ಯಯನ ನಡೆಸಿದರು.
ಮೊದಲಿಗೆ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಪೆರೇಡ್ ನಡೆಸಿದ ವಿದ್ಯಾರ್ಥಿಗಳ ತಂಡವು ಕಮ್ಯೂನಿಟಿ ಪೊಲೀಸ್ ಅಧಿಕಾರಿ ಸದಾಶಿವಯ್ಯ ಎಸ್. ಪಲ್ಲೇದ್ ನೇತೃತ್ವದಲ್ಲಿ ಕೆದಕಲ್ ದೇವರಕಾಡಿಗೆ ಭೇಟಿ ನೀಡಿತು.
ದೇವರಕಾಡಿನ ಜೀವ ವೈವಿದ್ಯ ಮತ್ತು ಪರಿಸರ ವ್ಯವಸ್ಥೆ ಕುರಿತು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಸಂಚಾಲಕ ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್ ಮಾಹಿತಿ ನೀಡಿದರು.
ಸಹಾಯಕ ಸಮುದಾಯ ಪೊಲೀಸ್ ಅಧಿಕಾರಿ ಎಂ.ಬಿ. ತುಳಸಿ ಹಾಗೂ ಪೊಲೀಸ್ ಇಲಾಖೆಯ ಪೆರೇಡ್ ನಿರ್ದೇಶಕ ಕೆ.ಆರ್. ಜಗದೀಶ್ ಮಾತನಾಡಿದರು. ವಿದ್ಯಾರ್ಥಿ ಪೊಲೀಸ್ ಕೆಡೆಟ್‍ಗಳಾದ ದೀಕ್ಷಾ, ದೀಕ್ಷಿತ್ ಮತ್ತು ಭೂಮಿಕಾ ಅವರು ದೇವರಕಾಡಿನ ಪರಿಸರ ಅಧ್ಯಯನದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.ವಿಚಾರ ಸಂಕೀರಣ ಉದ್ಘಾಟನೆ
ವೀರಾಜಪೇಟೆ: ದಂತ ವಿದ್ಯಾಸಂಸ್ಥೆಗಳ ಸಂಶೋಧನೆಯಲ್ಲಿ ವಿಶ್ವಕ್ಕೆ ಭಾರತದ ಪಾಲು ಹತಾಶದಾಯಕ, ಭಾರತ ದೇಶವು ಅತಿ ಹೆಚ್ಚಿನ ದಂತ ವೈದ್ಯಕೀಯ ವಿದ್ಯಾಸಂಸ್ಥೆಗಳನ್ನು ಹೊಂದಿದ್ದರೂ ವಿವಿಧ ರೀತಿಯ ಅಸ್ತಿತ್ವದಲ್ಲಿರದ ಹಾಗೂ ವಿದ್ಯಾಸಂಸ್ಥೆಗಳಿಗೆ ಆಶಾಭಂಗವಾಗುವ ಸರಕಾರದ ನೀತಿ ನಿಯಮಗಳಿಂದ ಸಂಶೋಧನೆಯಲ್ಲಿ ಪ್ರಗತಿ ಶೂನ್ಯ ಬೆಳವಣಿಗೆ ಉಂಟಾಗಿದೆ. ಏಳು ದಶಕಗಳಿಂದ ಈ ಅಸಮರ್ಥತೆಯನ್ನು ಸರಿಪಡಿಸಲು ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ ಎಂದು ಕೊಡಗು ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸುನೀಲ್ ಮುದ್ದಯ್ಯ ಹೇಳಿದರು.
ಅಂತರ್ರಾಷ್ಟ್ರೀಯ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಂಸ್ಥೆ (ಐಡಿಯಾ) ಕೊಡಗು ದಂತ ವೈದ್ಯಕೀಯ ಸಂಸ್ಥೆಯ ಸಹಯೋಗದೊಂದಿಗೆ ಅಂತರ್ರಾಷ್ಟ್ರೀಯ ವಿಚಾರ ಸಂಕೀರಣ ‘ಕ್ವೆಸ್ಟ್ 2018’ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾದ ವಿಚಾರ ಸಂಕೀರಣವನ್ನು ಉದ್ಘಾಟಿಸಿದ ಜಪಾನ್ ಅಸೋಸಿಯೇಶನ್‍ನ ನಿರ್ದೇಶಕ ಮಂಡಳಿಯ ಸದಸ್ಯ ಪ್ರೊ. ಸಥೋಷಿ ನಾಗಸಕ ಅವರು ದೇಶದ ದಂತ ವಿದ್ಯಾಸಂಸ್ಥೆಗಳಲ್ಲಿ ವಿಚಾರ ಸಂಕೀರಣಗಳನ್ನು ಏರ್ಪಡಿಸುವದರಿಂದ ಸಂಶೋಧನೆಯಲ್ಲಿ ಪ್ರಗತಿಯನ್ನು ಕಾಣಬಹುದು ಎಂದು ಹೇಳಿದರು.
ಸಮಾರಂಭದಲ್ಲಿ ಜಪಾನ್ ಸುರುಮಿ ಯೂನಿವರ್ಸಿಟಿಯ ಪ್ರೊ. ಆರ್ತೊಡಾನಿಕ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ, ಉಪ ಪ್ರಾಂಶುಪಾಲ ಡಾ. ಜಿತೇಶ್ ಜೈನ್, ಡಾ. ಶಾಂತಲಾ, ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿ ಶೃಂಗ ಪಾಲ್ಗೊಂಡಿದ್ದರು. ಪ್ರಾರ್ಥನಾ ನಿರೂಪಿಸಿದರು.
ಅಂತರ್ರಾಷ್ಟ್ರೀಯ ಮಟ್ಟದ ಎರಡು ದಿನಗಳ ವಿಚಾರ ಸಂಕೀರಣದಲ್ಲಿ ಮೊದಲ ದಿನ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಶೋಧನೆಗಳ ವಿಚಾರವನ್ನು ಹಂಚಿಕೊಂಡರು.
ಕಿಡ್ಸ್ ಪ್ಯಾರಡೈಸ್ ವಾರ್ಷಿಕೋತ್ಸವ
ಮಡಿಕೇರಿ: ಇಲ್ಲಿನ ಐ.ಟಿ.ಐ. ಹಿಂಭಾಗದಲ್ಲಿರುವ ಕಿಡ್ಸ್ ಪ್ಯಾರಡೈಸ್ ಪೂರ್ವ ಪ್ರಾಥಮಿಕ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ ತಾ. 6 ರಂದು ಶಾಲಾ ಆವರಣದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9.15 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೂಡಕಂಡಿ ದಯಾನಂದ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್, ಡಾ. ಮನೋಹರ್ ಪಾಟ್ಕರ್, ಡಾ. ಜಯಲಕ್ಷ್ಮಿ ಪಾಟ್ಕರ್ ಅವರುಗಳು ಭಾಗವಹಿಸಲಿದ್ದಾರೆ.
ಡ್ರಾಯಿಂಗ್‍ನಲ್ಲಿ ಪ್ರಥಮ
ಸೋಮವಾರಪೇಟೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಕಳೆದ ನವೆಂಬರ್‍ನಲ್ಲಿ ನಡೆಸಲಾದ ಡ್ರಾಯಿಂಗ್ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಎನ್.ಆರ್. ನೇಹ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈಕೆ ಕುಶಾಲನಗರದ ಕಾವೇರಿ ಕಲಾ ಪರಿಷತ್‍ನಲ್ಲಿ ಚಿತ್ರಕಲಾ ವಿದ್ಯಾರ್ಥಿನಿಯಾಗಿದ್ದು, ಫಾತಿಮಾ ಶಾಲೆಯ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಸೋಮವಾರಪೇಟೆಯ ಹಾನಗಲ್ಲು ರವೀಂದ್ರ ಮತ್ತು ಸುಧಾ ದಂಪತಿಗಳ ಪುತ್ರಿ.
ಡಾಕ್ಟರೇಟ್ ಪುರಸ್ಕಾರ
ಕುಶಾಲನಗರ: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಅತಿಥಿ ಉಪನ್ಯಾsಸಕಿಯಾಗಿರುವ ಸೋಮಕ್ಕ ಮಾದಾಪುರ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕನ್ನಡ ತತ್ವಪದಗಳಲ್ಲಿ ಪ್ರಭುತ್ವದ ಪರಿಕಲ್ಪನೆ’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ ಲಭಿಸಿದೆ.
ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್
ಮಡಿಕೇರಿ: ಮಂಗಳೂರು ವಿಶ್ವ ವಿದ್ಯಾನಿಲಯದ 2017 ನೇ ಸಾಲಿನಲ್ಲಿ ನಡೆದ ಎಂ.ಎ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಜಿ. ಪವಿತ್ರ ಅವರು ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಮೂಲತಃ ಪುತ್ತೂರಿನ ನಿವಾಸಿಯಾಗಿರುವ ಇವರು ಪ್ರಸ್ತುತ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಎಂ.ಎ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಉಪನ್ಯಾಸ-ಸಂವಾದ ಕಾರ್ಯಕ್ರಮ
ಸೋಮವಾರಪೇಟೆ: ಯಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರಿನ ರೆಸ್ಕ್ಯೂ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ನೈತಿಕ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.
ರೆಸ್ಕ್ಯೂ ಸಂಸ್ಥೆಯ ಸಂಯೋಜಕಿ ಶೃತಿ ಮಾತನಾಡಿ, ಸಾಮಾಜಿಕ ಜಾಲತಾಣಗಳಿಗೆ ವಿದ್ಯಾರ್ಥಿಗಳು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದರು. ಸಂಸ್ಥೆಯ ಸಂಯೋಜಕ ಮಧು ಅಂತರ್‍ಜಾಲದ ದುರ್ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಈ. ಐಪು ವಹಿಸಿದ್ದರು. ವೇದಿಕೆಯಲ್ಲಿ ಪ್ರಾಧ್ಯಾಪಕರುಗಳಾದ ಶ್ರೀಧರ್, ಕಮಲಾಕ್ಷ ಬಲ್ಯಾಯ, ಕ್ರೀಡಾ ಸಮಿತಿ ಸಂಚಾಲಕ ಹೆಚ್.ಎಸ್. ರಾಜು, ಎನ್‍ಎಸ್‍ಎಸ್ ಸಂಚಾಲಕ ಎಂ.ಎಸ್. ಪ್ರವೀಣ್ ಕುಮಾರ್, ಕೆ.ಹೆಚ್. ಧನಲಕ್ಷ್ಮೀ, ರೆಡ್ ರಿಬ್ಬನ್ ಸಂಚಾಲಕ ಎಂ.ಎಸ್. ಶಿವಮೂರ್ತಿ ಉಪಸ್ಥಿತರಿದ್ದರು.