ಸೋಮವಾರಪೇಟೆ, ಫೆ. 27: ಸರ್ಕಾರಗಳು ಯಾವದೇ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರೂ ಅದನ್ನು ಜನರಿಗೆ ತಲಪಿಸುವವರು ಆಡಳಿತ ಯಂತ್ರದ ಭಾಗವಾಗಿರುವ ಸರ್ಕಾರಿ ಅಧಿಕಾರಿಗಳು. ಸರ್ಕಾರದ ಕಾರ್ಯಯೋಜನೆಗಳ ಅನುಷ್ಠಾನದಲ್ಲಿ ಇವರ ಜವಾಬ್ದಾರಿ ನಿರ್ವಹಣೆ ಅತೀ ಮುಖ್ಯ. ಇಂತಹ ಜವಾಬ್ದಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಅದರ ನೇರ ಪರಿಣಾಮ ಸಾರ್ವಜನಿಕರ ಮೇಲೆ ಬೀಳುತ್ತದೆ. ಇಂತಹದೇ ನಿರ್ಲಕ್ಷ್ಯಕ್ಕೆ ಇದೀಗ ಸಾರ್ವಜನಿಕರು ಬೆಲೆ ತೆರುತ್ತಿದ್ದು, ಹಕ್ಕು ಪತ್ರಕ್ಕಾಗಿ ತಾಲೂಕು ಕಚೇರಿಗೆ ಅಲೆದಲೆದು ಸುಸ್ತಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಪೈಸಾರಿ ಸೇರಿದಂತೆ ಇನ್ನಿತರ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೃಷಿ, ಮನೆ ನಿರ್ಮಿಸಿಕೊಂಡಿರುವ ಮಂದಿ ಹಕ್ಕುಪತ್ರಕ್ಕಾಗಿ ತಾಲೂಕು ಕಚೇರಿಗೆ ಎಡತಾಕುತ್ತಿದ್ದರೂ ಸಂಬಂಧಿಸಿದ ಆಡಳಿತ ಈ ಬಗ್ಗೆ ಹೆಚ್ಚು ಗಮನಹರಿಸಿದಂತೆ ಕಂಡುಬಂದಿಲ್ಲ. ಪರಿಣಾಮ ಇಂದಿಗೂ ಅಕ್ರಮ ಸಕ್ರಮ ಹಾಗೂ 94ಸಿ ಮತ್ತು 94 ಸಿಸಿ ಅಡಿಯಲ್ಲಿ ಒಟ್ಟು 14,652 ಮಂದಿಯ ಅರ್ಜಿಗಳು ತಾಲೂಕು ಕಚೇರಿಯಲ್ಲೇ ಕೊಳೆಯುತ್ತಿವೆ.

ಕರ್ನಾಟಕವನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಾಂತಿಕಾರಿ ಕ್ರಮ ಎಂದೇ ಕರೆಯಲ್ಪಡುತ್ತಿರುವ ಸಿ ಮತ್ತು ಡಿ ಜಾಗಕ್ಕೂ ಹಕ್ಕುಪತ್ರ ವಿತರಿಸುವ ನಿರ್ದೇಶನ ಇಲ್ಲಿನ ತಾಲೂಕು ಕಚೇರಿಗೆ ಇಂದಿಗೂ ತಲಪಿಲ್ಲ. ಈ ಬಗ್ಗೆ ತಾಲೂಕು ಕಚೇರಿಯವರನ್ನು ಪ್ರಶ್ನಿಸಿದರೆ ಸಿ ಮತ್ತು ಡಿ ಜಾಗಕ್ಕೆ ಸಂಬಂಧಿಸಿದಂತೆ ಇಂದಿಗೂ ಗೊಂದಲವಿದೆ. ಅಧಿಕೃತ ಆದೇಶ ಬಂದಿಲ್ಲ ಎಂದಷ್ಟೇ ಹೇಳುತ್ತಿದ್ದಾರೆ.

ಅದೇನೇ ಇದ್ದರೂ ಸಹ ಇದುವರೆಗೆ ಸೋಮವಾರಪೇಟೆ ತಾಲೂಕು ಕಚೇರಿಗೆ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಒಟ್ಟು 14,647 ಅರ್ಜಿಗಳು, ಅಕ್ರಮ ಸಕ್ರಮ ಯೋಜನೆಯಡಿ 50 ಮತ್ತು 53ರಡಿ 14,061 ಅರ್ಜಿಗಳು ಸಲ್ಲಿಕೆಯಾಗಿವೆ.

ಇದರಲ್ಲಿ 13,180 ಅರ್ಜಿಗಳು 94 ಸಿ ಹಾಗೂ 1467 ಅರ್ಜಿಗಳು 94 ಸಿಸಿ ಅಡಿಯಲ್ಲಿ ಸಲ್ಲಿಕೆಯಾಗಿದ್ದು, 94ಸಿ ಗೆ ಸಂಬಂಧಿಸಿದಂತೆ 1,357, 94 ಸಿಸಿ ಗೆ ಸಂಬಂಧಿಸಿದಂತೆ 488 ಸೇರಿದಂತೆ ಒಟ್ಟು 1,845 ಮಂದಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ.

ಫಾರಂ 50 ಮತ್ತು 53 ಅಡಿಯಲ್ಲಿ ಅಕ್ರಮ ಸಕ್ರಮ ಸಮಿತಿಗೆ ಒಟ್ಟು 14,061 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 8,510 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಅರ್ಜಿ 50 ಅಡಿಯಲ್ಲಿ 2,003 ಹಾಗೂ 53 ಅಡಿಯಲ್ಲಿ 3,548 ಅರ್ಜಿಗಳು ಸೇರಿದಂತೆ ಒಟ್ಟು 5,551 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.

ತಾಲೂಕು ಕಚೇರಿಯ ಅಧಿಕೃತ ಮಾಹಿತಿ ಪ್ರಕಾರ 94 ಸಿ ಅಡಿ 3631 ಅರ್ಜಿಗಳು, 94 ಸಿಸಿ ಅಡಿಯಲ್ಲಿ 197 ಅರ್ಜಿಗಳು ಸೇರಿದಂತೆ ಒಟ್ಟು 3828 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಈ ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ವಿವಿಧ ಕಾರಣ ನೀಡಿ 3701 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಒಂದೇ ಜಾಗಕ್ಕೆ ಎರಡೆರಡು ಅರ್ಜಿ ಸಲ್ಲಿಸಿರುವವರು, ಈ ಹಿಂದೆಯೇ ಹಕ್ಕುಪತ್ರ ಪಡೆದಿರುವವರು, ಮೀಸಲು ಅರಣ್ಯ, ಕೆರೆ, ರಸ್ತೆ, ತೋಡು ಒತ್ತುವರಿ, ಊರುಡುವೆ, ಹೊಸ ಮನೆಗೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವ ಮಂದಿಯ ಅರ್ಜಿಗಳನ್ನು ತಿರಸ್ಕರಿಸಿರುವದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಯೋಜನೆಯಡಿ ಮನೆ ಕಂದಾಯ ರಶೀದಿಯನ್ನು ತಾಲೂಕು ಕಚೇರಿಗೆ ಸಲ್ಲಿಸದೇ ಇರುವವರು, ಸರ್ಕಾರ ನಿಗದಿಪಡಿಸಿದ ಶುಲ್ಕ ಪಾವತಿಸದೇ ಇರುವವರ ಅರ್ಜಿಗಳ ವಿಲೇವಾರಿಗೆ ಬಾಕಿ ಉಳಿದಿದೆ. 94ಸಿ ಅಡಿಯಲ್ಲಿ 30/40 ನಿವೇಶನಕ್ಕೆ 1 ಸಾವಿರ, 40/60 ನಿವೇಶನಕ್ಕೆ 2 ಸಾವಿರ, 50/80 ನಿವೇಶನಕ್ಕೆ ರೂ. 3 ಸಾವಿರ ಸರ್ಕಾರಿ ಶುಲ್ಕ ಪಾವತಿಸಬೇಕಿದೆ. 94 ಸಿಸಿ ಅಡಿಯಲ್ಲಿರುವ 30/40 ಅರ್ಜಿಗಳಿಗೆ 10,400 ಶುಲ್ಕ ಪಾವತಿಸಬೇಕಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.50ರಷ್ಟು ವಿನಾಯಿತಿ ಇದೆ.

94 ಸಿ ಗೆ ಸಂಬಂಧಿಸಿದಂತೆ ತಾಲೂಕು ಕಚೇರಿಯಲ್ಲಿ 4883 ಅರ್ಜಿಗಳು ಪರಿಶೀಲನೆಗೆ ಬಾಕಿ ಉಳಿದಿದ್ದು, ಇದರಲ್ಲಿ 1800ಕ್ಕೂ ಅಧಿಕ ಅರ್ಜಿಗಳು ಸಿ ಮತ್ತು ಡಿ ಜಾಗಕ್ಕೆ ಸಂಬಂಧಿಸಿದ್ದಾಗಿವೆ. ಸುಮಾರು 550ಕ್ಕೂ ಅಧಿಕ ಅರ್ಜಿಗಳು ಗೋಮಾಳಕ್ಕೆ ಸಲ್ಲಿಕೆಯಾಗಿವೆ. 94 ಸಿಸಿ ಗೆ ಸಂಬಂಧಿಸಿದಂತೆ 390 ಅರ್ಜಿಗಳು ಸಲ್ಲಿಕೆಯಾಗಿದ್ದು ಇದರಲ್ಲಿ 180ಕ್ಕೂ ಅಧಿಕ ಅರ್ಜಿಗಳು ಸಿ ಮತ್ತು ಡಿ ಜಾಗಕ್ಕೆ ಸಂಬಂಧಿಸಿದ್ದಾಗಿವೆ. ಒಟ್ಟಾರೆ ಎರಡೂ ವಿಭಾಗದಲ್ಲಿ ಒಟ್ಟು 5273 ಅರ್ಜಿಗಳು ಬಾಕಿ ಉಳಿದಿವೆ.

ಸಿ ಮತ್ತು ಡಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಕೃಷಿ ಕೈಗೊಂಡಿರುವವರಿಗೆ ಹಕ್ಕುಪತ್ರ ನೀಡುವಂತೆ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಿದ್ದು, ಕಂದಾಯ ಸಚಿವರೇ ಸ್ವತಃ ನಿರ್ದೇಶನ ನೀಡಿದ್ದರೂ ಸಹ ತಾಲೂಕು ಕಚೇರಿಯ ಅಧಿಕಾರಿಗಳಲ್ಲಿ ಜಿಜ್ಞಾಸೆ ಬಗೆಹರಿದಿಲ್ಲ.

ಸಿ ಮತ್ತು ಡಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಕೃಷಿ ಕೈಗೊಂಡಿರುವವರಿಗೆ ಹಕ್ಕುಪತ್ರ ನೀಡಲು ಸಿದ್ದವಿದ್ದರೂ ಇದೇ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ 30/40 ನಿವೇಶನ ನೀಡಲು ಹಿಂದೇಟು ಹಾಕುತ್ತಿರುವದು ಕಂಡುಬಂದಿದೆ.

ಕೃಷಿ ಜಾಗದ ಹಕ್ಕುಪತ್ರಕ್ಕಾಗಿ 50 ಮತ್ತು 53 ಅಡಿ ಅರ್ಜಿ ಸಲ್ಲಿಸಿದ್ದು, ಮನೆ ನಿವೇಶನಕ್ಕೆ 94 ಸಿ ಮತ್ತು 94 ಸಿಸಿ ಅಡಿ ಅರ್ಜಿ ಸ್ವೀಕೃತವಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಸಿ ಮತ್ತು ಡಿ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ತೀರ್ಮಾನವಾಗಿದೆಯಾದರೂ ಮನೆ ನಿವೇಶನಕ್ಕೆ ಹಕ್ಕುಪತ್ರ ನೀಡುವಂತೆ ಯಾವದೇ ಅಧಿಕೃತ ಆದೇಶ ಬಂದಿಲ್ಲ ಎಂದು ತಾಲೂಕು ಕಚೇರಿಯ ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ.

ಈ ಎರಡೂ ಯೋಜನೆಯಲ್ಲಿ ತಾಲೂಕು ತಹಶೀಲ್ದಾರ್‍ರೇ ಸ್ವತಃ ಹಕ್ಕುಪತ್ರ ನೀಡುವ ಅಧಿಕಾರ ಹೊಂದಿದ್ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ತಾಲೂಕು ಕಚೇರಿ ಕಾರ್ಯನಿರ್ವಹಿಸದಿರುವದು ಮೇಲ್ನೋಟಕ್ಕೆ ಕಂಡುಬಂದಿದೆ. ಸಲ್ಲಿಕೆಯಾದ 14,647 ಅರ್ಜಿಗಳ ಪೈಕಿ 3701 ಅರ್ಜಿಗಳು ತಿರಸ್ಕøತಗೊಂಡು ಇಂದಿಗೂ 5273 ಅರ್ಜಿಗಳು ಬಾಕಿ ಉಳಿದುಕೊಂಡಿರುವದೇ ಇದಕ್ಕೆ ಸಾಕ್ಷಿಯಾಗಿದೆ. ಹಕ್ಕುಪತ್ರ ವಿತರಿಸಲು 3,828 ಅರ್ಜಿಗಳು ಸಿದ್ಧವಿದ್ದರೂ ವಿವಿಧ ಕಾರಣಕ್ಕಾಗಿ ವಿಲೇವಾರಿಯಾಗಿಲ್ಲ.

ಒಟ್ಟಾರೆ ಅಕ್ರಮ ಸಕ್ರಮ ಹಾಗೂ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಒಟ್ಟು 28,708 ಅರ್ಜಿಗಳು ತಾಲೂಕು ಕಚೇರಿಗೆ ಸಲ್ಲಿಕೆಯಾಗಿದ್ದು, ಇದರಲ್ಲಿ 10,355 ಮಂದಿಗೆ ಮಾತ್ರ ಕೃಷಿ ಹಾಗೂ ನಿವೇಶನದ ಹಕ್ಕುಪತ್ರ ನೀಡಲಾಗಿದೆ. 14,652 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.

ಒತ್ತುವರಿ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರವನ್ನು ವಿತರಿಸಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಪದಾಧಿಕಾರಿಗಳು ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಧರಣಿಯನ್ನೂ ನಡೆಸಿದ್ದಾರೆ.

ದಾಖಲೆಗಳು ಅಗತ್ಯ

ಕೃಷಿಕರು ಒಂದಿಲ್ಲೊಂದು ಸಮಸ್ಯೆಗಳಿಗೆ ಸಿಲುಕುತ್ತಿದ್ದು ಸರ್ಕಾರದ ಯಾವದೇ ಸೌಲಭ್ಯ ಪಡೆಯಬೇಕಿದ್ದರೂ ದಾಖಲಾತಿಗಳು ಅತೀ ಅಗತ್ಯ. ಇತ್ತೀಚೆಗಂತೂ ಅನಾವೃಷ್ಟಿ, ಬರಗಾಲ, ಕಾಡಾನೆ ಹಾವಳಿಯಿಂದ ಬೆಳೆ ನಷ್ಟದೊಂದಿಗೆ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ.

ಕೃಷಿ ಸೇರಿದಂತೆ ಇತರ ಸಾಲಕ್ಕಾಗಿ ಬ್ಯಾಂಕ್‍ಗಳಿಗೆ ಎಡತಾಕಿದರೂ ಜಾಗದ ದಾಖಲೆಗಳಿಲ್ಲದೇ ಸಾಲ ದೊರೆಯುವದಿಲ್ಲ. ಸರ್ಕಾರದ ಸೌಲಭ್ಯಗಳಿಗೆ ಕೈಚಾಚಿದರೂ ದಾಖಲೆಗಳಿಲ್ಲದೇ ಕೈಸೇರುತ್ತಿಲ್ಲ. ಇಂತಹ ಸಂದಿಗ್ಧತೆಯಲ್ಲಿ ಕೃಷಿಕರು ಹಕ್ಕುಪತ್ರಕ್ಕಾಗಿ ತಾಲೂಕು ಕಚೇರಿಗೆ ಅಲೆದು ಸುಸ್ತಾಗುತ್ತಿದ್ದಾರೆ. ವಾರಕ್ಕೊಮ್ಮೆಯಾದರೂ ಅಕ್ರಮ ಸಕ್ರಮ ಸಮಿತಿ ಸಭೆ ಕರೆದು ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕಿದೆ. 94 ಸಿ ಮತ್ತು ಸಿ.ಸಿ. ಅಡಿಯಲ್ಲಿ ನಿವೇಶನಕ್ಕೆ ದಾಖಲೆ ಒದಗಿಸಲು ಮುಂದಾಗಬೇಕಿದೆ. ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಈ ಬಗ್ಗೆ ಗಮನ ಹರಿಸಬೇಕಿದೆ.

ಅರ್ಜಿಗಳು ನಾಪತ್ತೆ?

ಈ ಮಧ್ಯೆ ಕಳೆದ ಹಲವು ವರ್ಷಗಳ ಹಿಂದೆ ಹಕ್ಕುಪತ್ರಕ್ಕಾಗಿ ತಾಲೂಕು ಕಚೇರಿಗೆ ಸಲ್ಲಿಕೆಯಾಗಿದ್ದ ಹಲವಷ್ಟು ಅರ್ಜಿಗಳು ಕಚೇರಿಯಿಂದಲೇ ನಾಪತ್ತೆಯಾಗಿರುವ ಬಗ್ಗೆಯೂ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವವರು ಯಾರು? ರೈತರ ಸಂಕಷ್ಟಗಳಿಗೆ ಸ್ಪಂದಿಸುವವರಾರು? ಹಕ್ಕುಪತ್ರಗಳ ಶೀಘ್ರ ವಿಲೇವಾರಿಗೆ ಮುಂದಾಗುವವರಾರು? ಎಂಬ ಪ್ರಶ್ನೆಗಳು ಕೃಷಿಕರನ್ನು ಕಾಡುತ್ತಲೇ ಇದೆ.

? ವಿಜಯ್ ಹಾನಗಲ್