ಮಡಿಕೇರಿ, ಫೆ. 27: ಕರ್ನಾಟಕ ವಿಧಾನಸಭೆಗೆ ಮುಂದಿನ ತಿಂಗಳ ಅಂತ್ಯದೊಳಗೆ ಯಾವದೇ ಸಮಯದಲ್ಲಿ ಚುನಾವಣೆ ಘೋಷಣೆಯಾಗುವ ಸಂಭವವಿದ್ದು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ರಾಜ್ಯ ಚುನಾವಣಾಧಿಕಾರಿಗಳು ಎಲ್ಲೆಡೆ ಪೂರ್ವ ತಯಾರಿ ನಡೆಸುತ್ತಿದ್ದು, ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ.
ಆ ಬೆನ್ನಲ್ಲೇ ಜಿಲ್ಲಾ ಮಟ್ಟದಲ್ಲೂ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಕೊಡಗು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಪ್ರಮುಖ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮಾತುಕತೆಯೊಂದಿಗೆ ಚುನಾವಣಾ ನೀತಿ ಸಂಹಿತೆ ಪರಿಪಾಲನೆ ಕುರಿತು ಸಂದೇಶ ರವಾನೆಯಾಗಿದೆ.
ಈ ನಡುವೆ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಪೂರ್ಣವಾಗಿ ಚುನಾವಣೆ ಎದುರಿಸಲು ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಮುಂಚಿತವಾಗಿ ಕೈಗೊಳ್ಳಲಾಗುತ್ತಿದ್ದು, ಪ್ರತಿಯೊಂದು ಮತಗಟ್ಟೆಯ ಸ್ಥಿತಿಗತಿ, ಅನುಕೂಲಗಳು ಮತ್ತು ಕೊರತೆಗಳ ಪಟ್ಟಿ ತಯಾರಿಸಿ ಮೂಲಭೂತ ಸೌಕರ್ಯಗಳೊಂದಿಗೆ ದುರಸ್ಥಿ ಕೈಗೊಳ್ಳಲು ಆಯಾ ಹಂತದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈಗಾಗಲೇ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅವಶ್ಯವಿರುವ ಆಧುನಿಕ ತಂತ್ರಜ್ಞಾನದಿಂದ ಕೂಡಿರುವ ಮತಯಂತ್ರಗಳನ್ನು ಕೂಡ, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈಚೆಗೆ ಚುನಾವಣೆ ನಡೆದಿರುವ ಗುಜರಾತ್ ಹಾಗೂ ತಮಿಳುನಾಡಿನ ತಂಜಾವೂರಿನಿಂದ ಬಿಗಿ ಭದ್ರತೆ ನಡುವೆ ಇಲ್ಲಿಗೆ ತರಿಸಿಕೊಳ್ಳಲಾಗಿದ್ದು, ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಈ ರೀತಿಯ ಮತಯಂತ್ರಗಳನ್ನು ಅಗತ್ಯಕ್ಕೆ ತಕ್ಕಂತೆ ಹಾಗೂ ದೋಷಗಳು ಕಂಡುಬಂದರೆ ಮತದಾನ ಸಂದರ್ಭ ತಕ್ಷಣ ಮಾರ್ಪಾಡುಗೊಳಿಸಲು ಅನುಕೂಲವಾಗುವಂತೆ ಹೆಚ್ಚುವರಿ ಸಂಗ್ರಹಗೊಳಿಸಲಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ.
530 ಮತಗಟ್ಟೆಗಳು: ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಸರಿ ಸುಮಾರು 530 ಮತಗಟ್ಟೆಗಳಿದ್ದು, ಒಟ್ಟು 4,24,495 ಮತದಾರರಿದ್ದಾರೆ ಎಂದು ಅಂಕಿ ಅಂಶ ಲಭಿಸಿವೆ. ಇದರೊಂದಿಗೆ ನೂತನ ಹಾಗೂ ಯುವ ಮತದಾರರ ಸೇರ್ಪಡೆ ಪ್ರಕ್ರಿಯೆಯೂ ನಡೆದಿದೆ. ಅಲ್ಲದೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಈಗಿನ ಮಾಹಿತಿ ಪ್ರಕಾರ 2,11,860 ಮಂದಿ ಮತದಾರರಿದ್ದಾರೆ.
(ಮೊದಲ ಪುಟದಿಂದ) ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,12,635 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ.
ಅಂತೆಯೇ ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಡಮಕಲ್‍ನಿಂದ ಕೊಡ್ಲಿಪೇಟೆಯ ತನಕ 266 ಮತಗಟ್ಟೆಗಳಿದ್ದು, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕರಿಕೆಯಿಂದ ಕುಟ್ಟ ತನಕ 264 ಮತಗಟ್ಟೆಗಳಿವೆ. ಈ ಮತಗಟ್ಟೆಗಳಲ್ಲಿ ಸುರಕ್ಷಿತ ಮತಗಟ್ಟೆಗಳು, ಸಾಮಾನ್ಯ ಮತಗಟ್ಟೆಗಳು, ಸೂಕ್ಷ್ಮ ಮತಗಟ್ಟೆಗಳು, ಅತೀ ಸೂಕ್ಷ್ಮ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬಿಗಿ ಭದ್ರತೆ ನಡುವೆ ಕಣ್ಗಾವಲು ಇರಿಸುವಂತೆ ಮತಗಟ್ಟೆಗಳನ್ನು ವಿಂಗಡಿಸಲಾಗುತ್ತಿದೆ.
ಮತಯಂತ್ರ ಪರಿಶೀಲನೆ : ಈಗಾಗಲೇ ಭಾರೀ ಭದ್ರತೆಯಲ್ಲಿ ತರಿಸಲಾಗಿರುವ ಮತಯಂತ್ರಗಳನ್ನು ಸಧ್ಯದಲ್ಲೇ ಜಿಲ್ಲಾ ಚುನಾವಣಾಧಿಕಾರಿ ಗಳು ಹಾಗೂ ಪ್ರಮುಖ ರಾಜಕೀಯ ಪ್ರತಿನಿಧಿಗಳ ಸಮಕ್ಷಮ ತೀರಾ ಕಟ್ಟುನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಸಂದರ್ಭ ಕೇವಲ ಜಿಲ್ಲಾ ಚುನಾವಣಾಧಿಕಾರಿಗಳು ದೃಢೀಕರಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಿತ ಭದ್ರತಾ ವ್ಯವಸ್ಥೆ ನೋಡಿಕೊಳ್ಳುವವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ಸಂಬಂಧ ಗುರುತು ಚೀಟಿ ಇತ್ಯಾದಿ ರೂಪುಗೊಳಿಸಲಾಗುತ್ತಿದೆ.
ಪ್ರತಿ ಹಂತದಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಸಿದ್ಧತಾ ಪ್ರಕ್ರಿಯೆಗಳು ನಡೆಯುತ್ತಿದ್ದು, ಈ ಹಿಂದಿನ ಎಲ್ಲಾ ಚುನಾವಣೆ ಗಳಿಗಿಂತಲೂ ಮುಂಬರಲಿರುವ ಚುನಾವಣೆ ಗ್ರಾಮೀಣ ಹಂತದಲ್ಲಿ ಕೂಡ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಜರುಗಲಿದೆ ಎಂದು ಮೂಲಗಳಿಂದ ‘ಶಕ್ತಿ’ಗೆ ಮಾಹಿತಿ ಲಭಿಸಿದೆ.
ಆ ದಿಸೆಯಲ್ಲಿ ಪ್ರತಿಯೊಂದು ಮತಗಟ್ಟೆಯನ್ನು ದುರಸ್ಥಿಗೊಳಿಸಿ ಬಾಗಿಲು, ಬೆಳಕು, ನೀರು, ಮೂಲಭೂತ ಸೌಕರ್ಯದೊಂದಿಗೆ ಆ ಪ್ರದೇಶದ ದೈನಂದಿನ ವಾತಾವರಣಕ್ಕೆ ತಕ್ಕಂತೆ ಭದ್ರತಾ ಕ್ರಮಗಳನ್ನು ಅನುಸರಿಸಲಾಗುವದು ಎಂದು ಗೊತ್ತಾಗಿದೆ. ತೀರಾ ವೃದ್ಧರು, ಅಂಗವಿಕಲರು, ಅಂಧ ಮತದಾರರಿಗೆ ಕೂಡ ಕಾನೂನಿನಡಿಯಲ್ಲಿ ಮುಕ್ತ ಮತದಾನಕ್ಕೆ ಅಗತ್ಯ ವ್ಯವಸ್ಥೆ ರೂಪಿಸಲಾಗುತ್ತಿದೆ.
ಇಂತಹ ಸಣ್ಣ ಪುಟ್ಟ ವಿಷಯಗಳನ್ನು ಗಣನೆಗೆ ತೆಗೆದುಕೊಂಡಿರುವ ಚುನಾವಣಾ ಆಯೋಗ, ಯಾವದೇ ಲೋಪಗಳಿಗೆ ಅವಕಾಶವಾಗದ ರೀತಿಯ ಆಧುನಿಕ ತಂತ್ರಜ್ಞಾನ ಬಳಕೆಯ ಮತಯಂತ್ರದೊಂದಿಗೆ, ರಾಜ್ಯದಲ್ಲಿ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಮತಯಂತ್ರಗಳ ಮೇಲೆ ಕೇಂದ್ರ ಸ್ಥಳದಿಂದಲೇ ನಿಗಾವಹಿಸಲು ‘ಇಟಿಎಸ್ ಸಾಪ್ಟ್‍ವೇರ್’ ಬಳಸಲಿರುವದಾಗಿ ತಿಳಿದು ಬಂದಿದೆ. ಅಲ್ಲದೆ, ಜಿಲ್ಲಾ ಚುನಾವಣಾಧಿಕಾರಿಗಳು ಯಾರೇ ಚುನಾವಣಾ ಸಂಹಿತೆಗೆ ಭಂಗವೆಸಗಿದರೆ, ನಿರ್ಧಾಕ್ಷಿಣ್ಯ ಕ್ರಮ ಅನುಸರಿಸುವ ಅಧಿಕಾರ ಹೊಂದಿರುತ್ತಾರೆ ಎಂದು ಮೂಲಗಳು ಖಚಿತಪಡಿಸಿವೆ.
ತಂತ್ರಜ್ಞರ ಬಳಕೆ : ಈಗಾಗಲೇ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ತರಿಸಲಾಗಿರುವ ಮತಯಂತ್ರಗಳ ನಿಖರ ಸಮರ್ಪಕತೆಯನ್ನು ಪ್ರತ್ಯಕ್ಷ ಪರಿಶೀಲಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನ ನುರಿತ ತಜ್ಞರು ಬಂದಿದ್ದು, ಅವರುಗಳ ಸಮ್ಮುಖ ಚುನಾವಾಧಿಕಾರಿಗಳು ಈ ಮತಯಂತ್ರಗಳ ಬಳಕೆ ಹಾಗೂ ನಿರ್ವಹಣೆ ಬಗ್ಗೆ ಸಂಬಂಧಪಟ್ಟ ಸಿಬ್ಬಂದಿಗಳಿಗೆ ತಾ. 28 ರಂದು (ಇಂದು) ಮಾಹಿತಿ ರವಾನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಒಂದೆಡೆ ಕಸರತ್ತು ನಡೆಸುತ್ತಿದ್ದರೆ, ಚುನಾವಣಾ ಸಮರ ಎದುರಿಸುವ ದಿಕ್ಕಿನಲ್ಲಿ ಆಡಳಿತಯಂತ್ರ ಕೂಡ ಪ್ರತಿತಂತ್ರದಲ್ಲಿ ವ್ಯಾಪಕ ಸಿದ್ಧತೆಗೆ ಮುಂದಾಗಿರುವದು ಗೋಚರಿಸುತ್ತಿದೆ.