ಮಡಿಕೇರಿ, ಫೆ. 27: ಫಿ.ಮಾ. ಕಾರ್ಯಪ್ಪ ಕಾಲೇಜು ವತಿಯಿಂದ ಇಲ್ಲಿನ ಸಾಯಿ ಟರ್ಫ್ ಮೈದಾನದಲ್ಲಿ ನಡೆದ ಪಿ.ವಿ.ಎಸ್. ಜ್ಞಾಪಕಾರ್ಥ ಬಾಲಕರ ಅಂತರ ಕಾಲೇಜು ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ ರನ್ನರ್ ಅಪ್ ಪ್ರಶಸ್ತಿ ಗಳಿಸಿಕೊಂಡಿದೆ.

ಇಂದು ನಡೆದ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳು ಉತ್ತಮ ಆಟ ಪ್ರದರ್ಶಿಸುವದ ರೊಂದಿಗೆ ಆಟದ ಪೂರ್ಣಾವಧಿ ಯಲ್ಲಿ 1-1 ಗೋಲುಗಳಿಂದ ಸಮಾನಂತರ ಕಾಯ್ದುಕೊಂಡವು. ಮೂರ್ನಾಡು ಪರ ತಮ್ಜಾಲ್, ಗೋಣಿಕೊಪ್ಪ ಪರ ಸಚಿನ್ ಗೋಲು ಗಳಿಸಿದರು. ನಂತರ ಟೈ ಬ್ರೇಕರ್ ಅವಕಾಶ ನೀಡಲಾಗಿ ಇದರಲ್ಲಿ ಮೂರ್ನಾಡು ತಂಡ 3-2 ಗೋಲುಗಳ ಅಂತರದಿಂದ ವಿಜಯಮಾಲೆ ಧರಿಸಿಕೊಂಡಿತು. ಮೂರ್ನಾಡು ಪರ ಪ್ರಜ್ವಲ್, ಪುನಿತ್, ನಜೀರ್ ಗೋಲು ಬಾರಿಸಿದರೆ, ಗೋಣಿಕೊಪ್ಪ ಪರ ಬೋಪಣ್ಣ ಹಾಗೂ ಉತ್ತಯ್ಯ ಗೋಲು ಗಳಿಸಿದರು.

ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಮೂರ್ನಾಡು ತಂಡ ಮಡಿಕೇರಿ ಎಫ್.ಎಂ.ಸಿ. ಕಾಲೇಜು ತಂಡವನ್ನು 1-0 ಗೋಲಿನಿಂದ ಮಣಿಸಿ ಪೈನಲ್‍ಗೇರಿತು. ಮೂರ್ನಾಡು ಪರ ತಮ್ಜಾಲ್ ಗೋಲು ದಾಖಲಿಸಿದರು.

ಮತ್ತೊಂದು ಸೆಮಿಫೈನಲ್‍ನಲ್ಲಿ ಗೋಣಿಕೊಪ್ಪ

(ಮೊದಲ ಪುಟದಿಂದ) ತಂಡ ವೀರಾಜಪೇಟೆ ಕಾವೇರಿ ಕಾಲೇಜು ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಗೋಣಿಕೊಪ್ಪ ಪರ ಉತ್ತಯ್ಯ, ವಿಘ್ನೇಶ್, ಕಾರ್ಯಪ್ಪ ಗೋಲು ಬಾರಿಸಿದರೆ, ವೀರಾಜಪೇಟೆ ಪರ ಸುರನ್ ಗೋಲ್ ದಾಖಲಿಸಿದರು.

ಬೆಸ್ಟ್ ಹಾಲ್ಫ್ ಆಟಗಾರನಾಗಿ ಮೂರ್ನಾಡುವಿನ ಅಯ್ಯಣ್ಣ, ಉತ್ತಮ ಗೋಲ್‍ಕೀಪರ್ ಆಗಿ ಮೂರ್ನಾಡುವಿನ ದಿಲನ್, ಬೆಸ್ಟ್ ಡಿಫೆಂಡರ್ ಆಗಿ ಗೋಣಿಕೊಪ್ಪ ಸೋಮಣ್ಣ, ಬೆಸ್ಟ್ ಫಾರ್ವಡ್ ಆಟಗಾರನಾಗಿ ವೀರಾಜಪೇಟೆಯ ಬೋಪಣ್ಣ ಬಹುಮಾನ ಪಡೆದುಕೊಂಡರು.

ಎಫ್.ಎಂ. ಕಾಲೇಜು ಪ್ರಾಂಶುಪಾಲೆ ಪಾರ್ವತಿ, ಕ್ರೀಡಾ ಇಲಾಖೆ ಸಂಯೋಜಕ ಸುರೇಶ್, ಫಾರ್ಮರ್ಸ್ ಕ್ಲಬ್‍ನ ನವೀನ್, ಕಾಲೇಜಿನ ಉಪನ್ಯಾಸ ಪ್ರದೀಪ್, ಪವನ್ ಕೃಷ್ಣ ಅವರುಗಳು ಬಹುಮಾನ ವಿತರಿಸಿದರು.

ಉದ್ಘಾಟನೆ : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವತಿಯಿಂದ ಎರಡು ದಿನಗಳ ಕಾಲ ನಗರದ ಸಾಯಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಅಂತರ ಕಾಲೇಜು ಪಿ.ವಿ.ಎಸ್. ಜ್ಞಾಪಕಾರ್ಥ ಬಾಲಕರ ಹಾಕಿ ಪಂದ್ಯಾಟಕ್ಕೆ ಅಂತರ್ರಾಷ್ಟ್ರೀಯ ಹಾಕಿಪಟು ಎಸ್.ವಿ. ಸುನೀಲ್ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಫ್‍ಎಂಕೆಎಂಸಿ ಕಾಲೇಜು ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ವಹಿಸಿದ್ದರು.

ಪಂದ್ಯಾಟದಲ್ಲಿ ಕೊಡಗು, ಮಂಗಳೂರು, ಮೈಸೂರು ಸೇರಿದಂತೆ 12ಕ್ಕೂ ಹೆಚ್ಚು ತಂಡಗಳು ಭಾಗªಹಿಸಿದ್ದವು.

ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣ ವಿಭಾಗದ ಪ್ರಮುಖ ಸುರೇಶ್, ಹೋಂಡಾ ಶೋ ರೂಂ ಮ್ಯಾನೇಜರ್ ನಿತಿನ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕರಾದ ಸುರೇಶ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ಪಂದ್ಯಾವಳಿ ವಿವರ : ಮೈಸೂರು ಜೊಸೇಫ್ ಹಾಗೂ ವೀರಾಜಪೇಟೆ ಸೆಂಟ್ ಆ್ಯಂನ್ಸ್ ನಡುವೆ ನಡೆದ ಮೊದಲ ಪಂದ್ಯಾಟದಲ್ಲಿ ಮೈಸೂರು ಜೋಸೆಫ್ 1-0 ಅಂತರದಿಂದ ಜಯಗಳಿಸಿತು. ತಂಡದ ಪರ ಪಿ.ಪಿ. ಮುತ್ತಣ್ಣ ಒಂದು ಗೋಲು ಗಳಿಸಿದರು. ಎರಡನೇ ಪಂದ್ಯಾಟದಲ್ಲಿ ಮೈಸೂರು ವಿಕಾಸ್ ತಂಡ ಮಂಗಳೂರಿನ ಸೆಂಟ್ ಅಲೋಶಿಯಸ್ ತಂಡವನ್ನು 5-0 ಗೋಲುಗಳ ಅಂತರದಿಂದ ಜಯಿಸಿತು.

ಪೊಲಿಟಿಕ್ಸ್ ಗೋಣಿಕೊಪ್ಪ ಹಾಗೂ ಎಫ್‍ಜಿಸಿ ಮೂರ್ನಾಡು ತಂಡದ ನಡುವಣ ಪಂದ್ಯಾಟದಲ್ಲಿ ಗೋಣಿಕೊಪ್ಪ ತಂಡವನ್ನು ಎಫ್‍ಜಿಸಿ ತಂಡ 4-0 ಅಂತರದಿಂದ ಮಣಿಸುವಲ್ಲಿ ಸಫಲವಾಯಿತು. ಜಿಎಫ್‍ಜಿಸಿ ಶನಿವಾರಸಂತೆ ಹಾಗೂ ಸಿಸಿವಿ ತಂಡದ ನಡುವಿನ ಪಂದ್ಯಾಟದಲ್ಲಿ ಸಿಸಿವಿ ತಂಡ ಶನಿವಾರಸಂತೆ ತಂಡವನ್ನು 5-0 ಅಂತರದಿಂದ ಮಣಿಸಿತು.

ಎಫ್‍ಎಂಕೆಎಂಸಿ ಬಿ ಹಾಗೂ ಮೈಸೂರು ಜೋಸೆಫ್ ನಡುವಣ ಪಂದ್ಯಾಟದಲ್ಲಿ ಜೋಸೆಫ್ ತಂಡವನ್ನು ಎಫ್‍ಎಂಕೆಎಂಸಿ ಬಿ ತಂಡ 2-0 ಅಂತರದಲ್ಲಿ ಮಣಿಸಿತು.