ವೀರಾಜಪೇಟೆ, ಫೆ. 26: ರಕ್ತವೆಂಬುದು ಮನುಷ್ಯ ಶರೀರಕ್ಕೆ ಅತಿ ಅಮೂಲ್ಯವಾಗಿದ್ದು, ರಕ್ತದ ಹೊರತು ಮಾನವ ಜೀವಕ್ಕೆ ಉಳಿವಿಲ್ಲ ಎಂದು ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆನಂದ್ ಹೇಳಿದರು. ವೀರಾಜಪೇಟೆ ಸೈಂಟ್ ಆನ್ಸ್ ಪದವಿ ಕಾಲೇಜಿನ ರೆಡ್‍ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮೈಸೂರಿನ ಸೈಂಟ್‍ಜೋಸೆಫ್ ಆಸ್ಪತ್ರೆಯ ನೆರವಿನೊಂದಿಗೆ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಮತ್ತು ಅಂಗದಾನದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಬಿರವನ್ನು ಉದ್ಘಾಟಿಸಿದ ಶಿಕ್ಷಣ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕ ರೆ.ಫಾ. ಮದುಲೈ ಮುತ್ತು ಮಾತನಾಡಿ, ರಕ್ತದಾನವೆಂಬದು ಮಹತ್ತರ ಸೇವೆಯಾಗಿದೆ. ವ್ಯಕ್ತಿಯ ಆರೋಗ್ಯ ಸಮತೋಲನಕ್ಕೆ ರಕ್ತದಾನವು ಸಹಕಾರಿಯಾಗಲಿದೆ ಎಂದರು.

ಪ್ರಾಂಶುಪಾಲ ರೆ.ಫಾ. ಐಸಕ್ ರತ್ನಾಕರ್ ಮಾತನಾಡಿ, ಜೀವ ಉಳಿಸುವದು ರಕ್ತದಾನದ ಉದ್ದೇಶವಾಗಿದೆ. ಅದು ಪ್ರತಿಯೊಬ್ಬರ ವೈಯಕ್ತಿಕ ಹೊಣೆ ಎಂದು ಅರಿತಿರಬೇಕು ಎಂದರು. ರೆಡ್‍ಕ್ರಾಸ್ ಘಟಕದ ಅಧಿಕಾರಿ ಎ.ಪಿ. ಸಂಕೇತ್, ಎನ್.ಎಸ್.ಎಸ್. ಅಧಿಕಾರಿ ಹೆಚ್. ಆರ್. ಅರ್ಜುನ್ ಉಪಸ್ಥಿತರಿದ್ದರು. ಕಾಶಿಫಾ ಸ್ವಾಗತಿಸಿದರು. ಹುದಾ ತಮನ್ನಾ ನಿರೂಪಿಸಿದರು. ತನುಶ್ರೀ ವಂದಿಸಿದರು.