ಮಡಿಕೇರಿ, ಫೆ. 26 : ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾಗಿರುವ ಇತಿಹಾಸ ಪ್ರಸಿದ್ಧ ಎಮ್ಮೆಮಾಡುವಿನ ಸೂಫಿ ಶಹೀದ್ ಮತ್ತು ಸಯ್ಯಿದ್ ಹಸನ್ ಸಖಾಫ್‍ರವರ ಮಖಾಂ ಉರೂಸ್ ಸಮಾರಂಭ ಮಾ.2ರಿಂದ 9ರವರೆಗೆ ಜರುಗಲಿದೆ.ಸೋಮವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಮ್ಮೆಮಾಡುವಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಹುಸೈನ್ ಸಖಾಫಿ ಹಾಗೂ ಇತರರು, ಉರೂಸ್ ಅಂಗವಾಗಿ ಸಾಮೂಹಿಕ ವಿವಾಹ, ದ್ಸಿಕ್ರ್ ಹಲ್ಖ, ಧಾರ್ಮಿಕ ಪ್ರವಚನ, ಖತಂ ದುಆ, ಸಾಂಸಾರಿಕ, ರಾಜಕೀಯ , ಸಾಮೂಹಿಕ ಸಮ್ಮೇಳನ, ಪ್ರಾರ್ಥನಾ ಮಜ್ಲಿಸ್ ಮುಂತಾದ ಕಾರ್ಯ ಕ್ರಮಗಳು ಎಂಟು ದಿನಗಳ ಕಾಲ ಜರುಗಲಿದೆ ಎಂದು ಹೇಳಿದರು.
ಮಾ.2ರಂದು ಜುಮುಅಃ ನಂತರ ಮಾಟೂಲ್ ಳಿಯಾವುಲ್ ಮುಸ್ತಫ ಸಯ್ಯಿದ್ ಹಾಮಿದ್ ಕೋಯಮ್ಮ ತಂಙಳ್ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಲಿದ್ದು, ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‍ನ ಅಧ್ಯಕ್ಷ ಉಸ್ಮಾನ್ ಹಾಜಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಪಾಣಕ್ಕಾಡ್‍ನ ಸಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್ ಅವರು ಉರೂಸ್ ಉದ್ಘಾಟಿಸಲಿದ್ದಾರೆ. ಬಳಿಕ ಎರಡು ಜೋಡಿಗಳ ಸಾಮೂಹಿಕ ವಿವಾಹ ನಡೆಯಲಿದ್ದು, ಸಂಜೆ 7ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಮಾ.3ರಂದು ಪೂರ್ವಾಹ್ನ 10 ಗಂಟೆಗೆ
(ಮೊದಲ ಪುಟದಿಂದ) ಉಳ್ಳಾಲದ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರ ಅವರ ನೇತೃತ್ವದಲ್ಲಿ ದುಆ ಮಜ್ಲೀಸ್ ನಡೆಯಲಿದ್ದು, ರಾತ್ರಿ 8ಕ್ಕೆ ಕುಂಬೋಲ್ ಸಯ್ಯಿದ್ ಜಹ್‍ಪ್ಹರ್ ಸ್ವಾದಿಕ್ ತಂಙಳ್ ಅವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಖ ಜರುಗಲಿದೆ. ಮಾ.4ರಂದು ಸಂಜೆ 7ಕ್ಕೆ ಖತಂ ದುಆ ನಡೆಯಲಿದೆ ಎಂದು ನುಡಿದರು. ಮಾ.5ರಂದು ಮಧ್ಯಾಹ್ನ 12ಗಂಟೆಗೆ ಉರೂಸ್ ಸಮ್ಮೇಳನ ಮತ್ತು ಸಂಜೆ 4 ಗಂಟೆಯಿಂದ ಅನ್ನದಾನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಸಚಿವರುಗಳಾದ ಯು.ಟಿ.ಖಾದರ್, ತನ್ವೀರ್ ಸೇಠ್, ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾ. 6 ರಿಂದ 8 ರವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಧಾರ್ಮಿಕ ಪ್ರವಚನಗಳು ನಡೆಯಲಿದ್ದು, ಮಾ.9 ರಂದು ಸಮಾರೋಪ ಸಮ್ಮೇಳನ ನಡೆಯಲಿದೆ ಎಂದು ಪ್ರಮುಖರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ, ಸದಸ್ಯರಾದ ಸಿ.ಎಂ. ಮಾಯಿನೆ ಹಾಗೂ ಸಯ್ಯಿದ್ ಇಸಾಕ್ ಲತೀಫಿ ಅಲ್ ಹೈದ್ರೂಸಿ ಹಾಜರಿದ್ದರು.