ಮಡಿಕೇರಿ, ಫೆ. 26: ಈ ಸಮಾಜದಲ್ಲಿ ಮಕ್ಕಳಿಲ್ಲವೆಂದು ಕೊರಗುವ ಮಂದಿ ಸಾಕಷ್ಟಿದ್ದಾರೆ. ಮಕ್ಕಳನ್ನು ಪಡೆಯುವದಕ್ಕಾಗಿ ದೇವರಿಗೆ ಪೂಜೆ, ಹರಕೆ ಕಟ್ಟಿಕೊಳ್ಳುವವರೂ ಲೆಕ್ಕವಿಲ್ಲದಷ್ಟು ಕಾಣಸಿಗುತ್ತಾರೆ.ಆದರೆ, ವಿಷಾದದ ಸಂಗತಿ ಎಂದರೆ ದೈವ ಸ್ವರೂಪಿಯಾದ ಮಗು ಹುಟ್ಟಿದ ತಕ್ಷಣ ಅದನ್ನು ತೊಟ್ಟಿಗೆ ಎಸೆಯುವ ದುಷ್ಟರು ನಮ್ಮ ನಡುವೆಯೆ ಇದ್ದಾರೆ.ಹೌದು.., ಹುಟ್ಟಿದ ಮಗು ಹೆಣ್ಣೆಂಬ ಕಾರಣಕ್ಕೆ, ಒಂದು ವೇಳೆ ಗಂಡು ಮಗುವಾದರೂ ಅದನ್ನು ಸಾಕಲು ಆಗುವದಿಲ್ಲ ಎಂಬ ಕಾರಣಕ್ಕೆ ರಸ್ತೆ ಬದಿಯಲ್ಲಿ ಅಥವಾ ಕಾನನದ ನಡುವೆ ಕಂದಮ್ಮನನ್ನು ಬಿಟ್ಟು ಕೈ ತೊಳೆದುಕೊಳ್ಳುವವರೂ ಸಮಾಜದಲ್ಲಿದ್ದಾರೆ.

ಅಕ್ರಮ ಸಂಬಂಧಕ್ಕೆ ಜನಿಸಿದ ಅದೆಷ್ಟೋ ಕಂದಮ್ಮಗಳು ಜನ್ಮದಾತರಿಗೆ

(ಮೊದಲ ಪುಟದಿಂದ) ಬೇಡವಾಗಿ ಮಣ್ಣು ಪಾಲಾಗಿರುವ ಘಟನೆಗಳು ಬಹಳಷ್ಟು ನಡೆದಿವೆ. ಇನ್ನು ಮುಂದೆ ಅಂತಹ ಶಿಶುಗಳು ರಕ್ಷಣೆಗೆ ‘ಮಮತೆಯ ತೊಟ್ಟಿಲು’ ಸಿದ್ಧವಾಗುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾರಿಗೂ ಬೇಡವಾದ ಶಿಶುಗಳ ರಕ್ಷಣೆಗಾಗಿ ‘ಮಮತೆಯ ತೊಟ್ಟಿಲು’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಇನ್ನು ಮುಂದೆ ‘ಮಮತೆಯ ತೊಟ್ಟಿಲು’ ಕಂದಮ್ಮಗಳಿಗೆ’ ಆಸರೆ ನೀಡಲಿದೆ.

ಈ ಯೋಜನೆಯನ್ವಯ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಒಂದೊಂದು ತೊಟ್ಟಿಲನ್ನು ಮಕ್ಕಳ ವಿಶೇಷ ದತ್ತು ಕೇಂದ್ರ, ಜಿಲ್ಲಾಸ್ಪತ್ರೆ ಹಾಗೂ ಬಾಲ ಮಂದಿರಗಳಲ್ಲಿ ಇಡಲಾಗುತ್ತದೆ.

ಮಗು ಬೇಡವೆಂದು ಎಸೆಯಲು ಮುಂದಾಗುವವರು ಆಸ್ಪತ್ರೆ, ಶೌಚಾಲಯ ಮತ್ತಿತರ ಕಡೆಗಳಲ್ಲಿ ಮಗುವನ್ನು ಬಿಟ್ಟು ಕಾಲ್ಕೀಳುವ ಮಂದಿ ಅಂತಹ ಮಗುವನ್ನು ತಂದು ಈ ಮಮತೆಯ ತೊಟ್ಟಿಲಿನಲ್ಲಿಟ್ಟು ತೆರಳಿದರೆ ಆ ಮಗುವಿಗೆ ಇಲಾಖೆ ಆಸರೆ ನೀಡುತ್ತದೆ.

ಮಗುವನ್ನು ಆ ತೊಟ್ಟಿಲಲ್ಲಿ ಇಟ್ಟ ಬಳಿಕ ಸಂಬಂಧಿಸಿದ ಆಸ್ಪತ್ರೆ, ಬಾಲಮಂದಿರ, ಮಕ್ಕಳ ದತ್ತು ಕೇಂದ್ರಕ್ಕೆ ‘ಸೈರನ್’ ಮೂಲಕ ಮಾಹಿತಿ ಸಿಗುತ್ತದೆ. ನಂತರ ಮಗುವನ್ನು ಸಂಬಂಧಿಸಿದವರು ವಶಕ್ಕೆ ಪಡೆದುಕೊಳ್ಳುತ್ತಾರೆ ಹೊರತು ಮಗುವನ್ನು ತಂದಿಟ್ಟವರಾರು ಎಂದು ಪತ್ತೆ ಹಚ್ಚುವ ಪ್ರಯತ್ನಕ್ಕೆ ಇಲಾಖೆ ಮುಂದಾಗುವದಿಲ್ಲ. ಆದ್ದರಿಂದ ಮಗು ಬೇಡ ಎನ್ನುವವರು ಈ ತೊಟ್ಟಿಲಿಗೆ ನಿಸ್ಸಂಕೋಚವಾಗಿ ಮಗುವನ್ನು ತಂದಿಡಬಹುದಾಗಿದೆ. ಸದ್ಯದಲ್ಲಿಯೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಇದು ಜಾರಿಗೆ ಬರಲಿದೆ.

ಒಂದಲ್ಲ ಒಂದು ಕಾರಣಕ್ಕೆ ಜನ್ಮತಾಳುವ ಯಾವದೇ ಮಗುವಿಗಾದರೂ ಬದುಕುವ ಹಕ್ಕಿದೆ. ಪೋಷಕರಿಂದ ಎಲ್ಲೆಂದರಲ್ಲಿ ಎಸೆಯಲ್ಪಟ್ಟು ನಾಯಿ ಮತ್ತಿತರರ ಪ್ರಾಣಿಗಳಿಗೆ ಕಂದಮ್ಮಗಳು ಬಲಿಯಾಗುವ ಬದಲು ಈ ತೊಟ್ಟಿಲಿನಲ್ಲಿ ತಂದಿಟ್ಟರೆ ಆ ಮಗು ಎಲ್ಲರಂತೆ ಬದುಕುವಂತಾಗುತ್ತದೆ. ಮಮತೆಯ ತೊಟ್ಟಿಲಿನಲ್ಲಿ ಮಗುವಿನ ಆರೋಗ್ಯ ರಕ್ಷಣೆಗೆ ಅಗತ್ಯವಾದ ‘ವ್ಯವಸ್ಥೆ’ ಅಡಕವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ತಿಳಿಸಿದ್ದಾರೆ

ಮಮತೆಯ ತೊಟ್ಟಿಲಿನ ಬಗ್ಗೆ ಹೆಚ್ಚಿನ ಮಾಹಿತಿ ಬಯಸುವವರು 08272-228800, 1098, 228220 ದೂರವಾಣಿಗಳನ್ನು ಸಂಪರ್ಕಿಸಬಹುದು.

-ಉಜ್ವಲ್ ರಂಜಿತ್