ಮಡಿಕೇರಿ, ಫೆ. 26: ಎಐಸಿಸಿ ಮಹಿಳಾ ಘಟಕದ ಸಭೆ ಮಡಿಕೇರಿಯ ಹೊಟೇಲೊಂದರಲ್ಲಿ ನಡೆದಿದೆ. ಎಐಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ, ಕೊಡಗು-ಮೈಸೂರು ಜಿಲ್ಲಾ ಉಸ್ತುವಾರಿ ಮಹಿಳಾ ಘಟಕದ ಪ್ರಮುಖರು ಪಾಲ್ಗೊಂಡಿದ್ದ ಸಭೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷರಾದಿಯಾಗಿ ಪದಾಧಿಕಾರಿಗಳು, ಜಿಲ್ಲೆಯಿಂದ ಚುನಾವಣಾ ಆಕಾಂಕ್ಷಿಗಳಾಗಿರುವ ಮಹಿಳಾ ಪ್ರಮುಖರ ಗೈರು ಹಾಜರಾತಿಯಲ್ಲಿ ಸಭೆ ನಡೆದಿರುವದಾಗಿ ತಿಳಿದು ಬಂದಿದೆ. ರಾಜ್ಯ ನಾಯಕಿಯರ ಅಸಹಾಕಾರ ದಿಂದ ಅಸಮಾಧಾನಿತರಾದ ಜಿಲ್ಲಾ ನಾಯಕಿಯರು ಪಾಲ್ಗೊಳ್ಳಲಿಲ್ಲವೆಂಬ ಅಂಶ ತಿಳಿದು ಬಂದಿದೆ.

ಎಐಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜಾನೆಟ್ ಡಿಸೋಜಾ ಅವರ ಸಮ್ಮುಖದಲ್ಲಿ ಇಲ್ಲಿನ ಹೊಟೇಲ್ ವ್ಯಾಲಿವ್ಯೂನಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮುಂಬರುವ ಚುನಾವಣೆ ಸಂಬಂಧ ಮಹಿಳಾ ಕಾರ್ಯಕರ್ತೆಯರನ್ನು ಸಂಘಟಿಸುವದು ಹಾಗೂ ಅಭ್ಯರ್ಥಿ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಉದ್ದೇಶವಾಗಿತ್ತು. ಆದರೆ ಸಭೆಯಲ್ಲಿ ಜಿಲ್ಲಾಧ್ಯಕ್ಷೆ ಪುಷ್ಪಲತಾ ಅವರನ್ನೂ ಒಳಗೊಂಡಂತೆ ಯಾವದೇ ಪದಾಧಿಕಾರಿಗಳು ಭಾಗಿಯಾಗಿರಲಿಲ್ಲ. ರಾಜ್ಯ ನಾಯಕರು ಅಧ್ಯಕ್ಷರಲ್ಲಿ ಸಭೆ ನಡೆಸುವ ಬಗ್ಗೆ ವಿಚಾರ ಪ್ರಸ್ತಾಪಿಸಿದ ಸಂದರ್ಭ ಅಧ್ಯಕ್ಷರು ತನಗೆ ಆರೋಗ್ಯ ಸರಿಯಿಲ್ಲದಿದ್ದು, ಇನ್ನೊಂದು ದಿನ ಸಭೆ ನಡೆಸುವ ಬಗ್ಗೆ ತಿಳಿಸಿದ್ದಾರೆ.

ಆದರೆ, ರಾಜ್ಯ ನಾಯಕಿಯರು ಬಲ ಪ್ರದರ್ಶಿಸುವ ನಿಟ್ಟಿನಲ್ಲಿ ಜಿಲ್ಲಾ ಸಮಿತಿಯನ್ನು ಕಡೆಗಣಿಸಿ ಯಾರಿಗೂ ಮಾಹಿತಿ ನೀಡದೆ ಸಭೆ ನಡೆಸಿರುವದಾಗಿ ಕಾಂಗ್ರೆಸ್ ಪ್ರಮುಖರು ಹೇಳುತ್ತಾರೆ. ರಾಜ್ಯ ನಾಯಕಿಯರ ಕೋರಿಕೆ ಮೇರೆಗೆ ಕಾಂಗ್ರೆಸ್ ಪ್ರಮುಖರೋರ್ವರು ಕೆಲವು ಮಹಿಳೆಯರನ್ನು ಸಭೆಗೆ ಕರೆ ತಂದಿರುವದಾಗಿ ತಿಳಿದು ಬಂದಿದೆ.

ಚುನಾವಣೆ ಸಮೀಪಿಸುತ್ತಿರುವ ಈ ಕಾಲಘಟ್ಟದಲ್ಲಿ ಹೊಂದಾಣಿಕೆಯಿಂದ ಪಕ್ಷ ಸಂಘಟಿಸುವ ಬದಲಿಗೆ ಈ ರೀತಿ ‘ಪ್ರದರ್ಶನ’ದ ಸಭೆ ನಡೆಸುವ ಔಜಿತ್ಯವಾದರೂ ಏನೆಂಬದು ಕಾಂಗ್ರೆಸ್ಸಿಗರ ಪ್ರಶ್ನೆ...!?