ಮಡಿಕೇರಿ, ಫೆ. 26: ತಿತಿಮತಿ ಬಳಿ ಹೆಬ್ಬಾಲೆ ಭದ್ರಗೊಳ ಹಾಡಿಯ ನಿವಾಸಿಗಳು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಇಂದು ಕೂಡ ಮುಂದುವರಿದಿದೆ. ಇಲ್ಲಿನ ಗಾಂಧಿ ಮಂಟಪ ಎದುರು ನಡೆಸುತ್ತಿರುವ ಮುಷ್ಕರವನ್ನು ಬೇಡಿಕೆ ಈಡೇರಿಸುವ ತನಕ ಮುಂದುವರೆಸಲಿರುವದಾಗಿ ಇಂದು ಕೂಡ ಪ್ರತಿಭಟನಾನಿರತರು ಘೋಷಿಸಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಇಂದು ಮುಷ್ಕರ ನಿರತರನ್ನು ಭೇಟಿಯಾದರು. ಈ ಸಂದರ್ಭ ಮಾತನಾಡಿದ ಅವರು, ಹಾಡಿ ನಿವಾಸಿಗಳ ಹೋರಾಟಕ್ಕೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸ್ಪಂದನ ನೀಡದಿರುವದು ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತ ಸೌಲಭ್ಯ ವಂಚಿತರಿಗೆ ಸೌಲಭ್ಯ ಒದಗಿಸಬೇಕಾ ದುದು ಆಡಳಿತ ವ್ಯವಸ್ಥೆಯ ಕರ್ತವ್ಯ ಎಂದರಲ್ಲದೆ, ಹಾಡಿ ವಾಸಿಗಳ ಹೋರಾಟಕ್ಕೆ ಕಾನೂನಾತ್ಮಕ ಬೆಂಬಲ ನೀಡುವದಾಗಿ ಭರವಸೆಯಿತ್ತರು. ಈ ಸಂದರ್ಭ ಹಾಡಿಯ ಪ್ರಮುಖ ಸುಬ್ರಮಣಿ ಮತ್ತಿತರರು ಇದ್ದರು.