(ವರದಿ-ವನಿತಾ ಚಂದ್ರಮೋಹನ್)

ಕುಶಾಲನಗರ, ಫೆ 26: ಬೇಸಿಗೆ ಆರಂಭದಲ್ಲಿಯೇ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಳ್ಳುತ್ತಿರುವ ದೃಶ್ಯ ಗೋಚರಿಸಿದೆ. ಬಿಸಿಲಿನ ಬೇಗೆ ಏರುತ್ತಿರುವ ಬೆನ್ನಲೇ ನದಿ ಬಹುತೇಕ ಬತ್ತಿ ಹೋಗುತ್ತಿದ್ದು ನದಿಯಲ್ಲಿರುವ ಬಂಡೆಗಳು ಮಾತ್ರ ಕಂಡು ಬರುತ್ತಿವೆ. ನದಿ ಪಾತ್ರದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಹಾಗೂ ಕೃಷಿಗೆ ನೀರೆತ್ತುವ ಮೂಲಕ ಜಲಮೂಲಗಳು ಬತ್ತಿ ಹೋಗುತ್ತಿರುವದು ಇದಕ್ಕೆ ಪ್ರಮುಖ ಕಾರಣ ಎನ್ನಬಹುದು.

ಕುಶಾಲನಗರ ವ್ಯಾಪ್ತಿಯಲ್ಲಿ ಗಡಿ ಭಾಗದಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ದಿನಕಳೆದಂತೆ ನೀರಿನ ಹರಿವು ಕ್ಷೀಣಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಎದುರಾಗಲಿದೆ ಎನ್ನುವದು ಸ್ಥಳೀಯ ನಾಗರಿಕರ ಆತಂಕವಾಗಿದೆ.

ಪ್ರವಾಸಿ ಕೇಂದ್ರವಾಗಿರುವ ದುಬಾರೆ ವ್ಯಾಪ್ತಿಯಲ್ಲಿ ಕೂಡ ನೀರಿನ ಹರಿವಿನ ಕೊರತೆ ಗೋಚರಿಸುತ್ತಿದ್ದು ಪ್ರವಾಸಿಗರು ದೋಣಿ ಬಳಸದೆ ನದಿಯನ್ನು ದಾಟಿ ಸಾಕಾನೆ ಶಿಬಿರಕ್ಕೆ ತೆರಳುತ್ತಿರುವ ದೃಶ್ಯ ಕಾಣಬಹುದು. ಕಳೆದ ಎರಡು ದಶಕಗಳಿಂದ ಇದೇ ಪ್ರಥಮ ಬಾರಿಗೆ ಇಂತಹ ದೃಶ್ಯ ಕಂಡುಬಂದಿದೆ ಎನ್ನುತ್ತಾರೆ ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಪ್ರಮುಖರಾದ ಮುರಳೀಧರ್. ಈ ಬಾರಿ ಕಾವೇರಿ ನದಿ ಬತ್ತಿ ಹೋಗುವ ಸೂಚನೆಗಳು ಕಂಡುಬರುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಸಿಲು ಏರತೊಡಗಿದ ನಡುವೆಯೇ ಕಾವೇರಿ ನದಿ ತಟದ ಎರಡು ಭಾಗಗಳ ತೋಟಗಳು, ಕೃಷಿ ಚಟುವಟಿಕೆಗಳಿಗೆ ಭಾರೀ ಅಶ್ವಶಕ್ತಿಯ ಪಂಪ್‍ಸೆಟ್‍ಗಳನ್ನು ಬಳಸಿ ನೀರೆತ್ತುತ್ತಿರುವದು ನೀರಿನ ಹರಿವು ಕ್ಷೀಣಗೊಳ್ಳಲು ಇನ್ನೊಂದು ಕಾರಣ ಎಂದು ತಿಳಿದುಬಂದಿದೆ. ಕಾವೇರಿ ನದಿಯಿಂದ ಕುಶಾಲನಗರ ವ್ಯಾಪ್ತಿಯಿಂದ ಪಿರಿಯಾಪಟ್ಟಣಕ್ಕೆ ಕುಡಿಯುವ ನೀರಿಗಾಗಿ 75 ಅಶ್ವಶಕ್ತಿಯ ಎರಡು ಪಂಪ್‍ಸೆಟ್‍ಗಳಲ್ಲಿ ನಿರಂತರ ನೀರು ಹಾಯಿಸುತ್ತಿರುವದು. ಜೊತೆಗೆ ಕುಶಾಲನಗರ ಪಟ್ಟಣಕ್ಕೆ ಕೂಡ ಇದೇ ಪ್ರಮಾಣದ ನೀರಿನ ಅವಶ್ಯಕತೆ ಇರುವದರಿಂದ ಮುಂದಿನ ದಿನಗಳಲ್ಲಿ ನೀರಿಗಾಗಿ ಪರಿತಪಿಸಬೇಕಾದ ಸ್ಥಿತಿ ಸೃಷ್ಟಿಯಾಗಬಹುದು ಎನ್ನುತ್ತಾರೆ ಸ್ಥಳೀಯ ನಾಗರಿಕರು. ಇದರೊಂದಿಗೆ ಅಂತರ್ಜಲ ಮಟ್ಟ ಕೂಡ ಕುಸಿತದೊಂದಿಗೆ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ.

ಕುಶಾಲನಗರ ಪಟ್ಟಣ ಸೇರಿದಂತೆ ಮುಳ್ಳುಸೋಗೆ ವ್ಯಾಪ್ತಿಯ 25 ಸಾವಿರ ನಾಗರೀಕರಿಗೆ ಕುಡಿವ ನೀರು ಒದಗಿಸಲು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ನೀರು ಸರಬರಾಜು ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಬೈಚನಹಳ್ಳಿ ಬಳಿಯ ಪಂಪ್‍ಹೌಸ್‍ನಿಂದ ಕಾವೇರಿ ನೀರು ಹಾಯಿಸಲಾಗುತ್ತಿದ್ದು ಪಟ್ಟಣದ ಜನರಿಗೆ ಎರಡು ದಿನಕ್ಕೊಮ್ಮೆ ಕುಡಿವ ನೀರು ಒದಗಿಸಲಾಗುತ್ತಿದೆ. ಇನ್ನೊಂದೆಡೆ ಹೆಬ್ಬಾಲೆ ಬಳಿ ಕಾವೇರಿ ನದಿಯಿಂದ ನೀರು ಹಾಯಿಸಿ ಶಿರಂಗಾಲದಿಂದ ಕೂಡಿಗೆ ತನಕ ಹಲವು ಹಳ್ಳಿಗಳಿಗೆ ನೀರಿನ ಕೊರತೆ ಎದುರಾಗುವ ಸಾಧ್ಯತೆ ಅಧಿಕ ಎನ್ನಬಹುದು.

ಕುಶಾಲನಗರ ಪಟ್ಟಣದಲ್ಲಿ ಕೆಲವು ಬಡಾವಣೆಗಳಲ್ಲಿ ಇರುವ ಕೊಳವೆ ಬಾವಿಗಳನ್ನು ದುರಸ್ತಿ ಮಾಡಲಾಗಿದ್ದು ಪರ್ಯಾಯವಾಗಿ ಕುಡಿವ ನೀರಿನ ವ್ಯವಸ್ತೆ ಕಲ್ಪಿಸಲಾಗುತ್ತಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ನದಿ ನೀರಿನ ದುರ್ಬಳಕೆ ಮಾಡದಂತೆ ಎಚ್ಚರವಹಿಸಬೇಕಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಜನರಲ್ಲಿ ಮನವಿ ಮಾಡಿದ್ದಾರೆ. ನದಿ ನೀರನ್ನು ಕಲುಷಿತಗೊಳಿಸದೆ ಸ್ವಚ್ಛವಾಗಿ ಉಳಿಯುವಂತೆ ಮಾಡುವಲ್ಲಿ ನಾಗರಿಕರು ಕೈಜೋಡಿಸಬೇಕು ಎಂದು ಅವರು ಕೋರಿದ್ದಾರೆ.