ಸಿದ್ದಾಪುರ, ಫೆ. 26 : ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಗ್ರಾ.ಪಂ ನೆಲ್ಯಹುದಿಕೇರಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಸಿದ್ದಾಪುರ ನಗರ ಪತ್ರಕರ್ತರ ಸಂಘ ಹಾಗೂ ಡೋಮಿನಸ್ ಕಲಾ ಕ್ರೀಡಾ ಯೋಜನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಕಾವೇರಿ ನದಿ ಸ್ವಚ್ಛತಾ ಕಾರ್ಯಕ್ರಮ ನೆಲ್ಯಹುದಿಕೇರಿಯಲ್ಲಿ ನಡೆಯಿತು. ಕಾವೇರಿ ನದಿಯ ದಡ ಹಾಗೂ ಸುತ್ತಮುತ್ತಲ ಪರಿಸರದಲ್ಲಿದ್ದ ಕಸ, ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಲಾಯಿತು. ಕಾವೇರಿ ನದಿಯ ಬಳಿ ಕೋಳಿ ಸೇರಿದಂತೆ ಇತರ ತ್ಯಾಜ್ಯವನ್ನು ರಾಶಿಗಟ್ಟಲೆ ಹಾಕಲಾಗಿದ್ದು, ಸ್ವಚ್ಛಗೊಳಿಸಲು ಬಂದ ಕಾರ್ಯಕರ್ತರು ಮೂಗು ಮುಚ್ಚಿಕೊಂಡು ಸೇತುವೆಯ ಬಳಿಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು, ಮದ್ಯದ ಹಾಗೂ ನೀರಿನ ಬಾಟಲಿಗಳನ್ನು ತೆಗೆದು ಶುಚಿಗೊಳಿಸಿದರು. ನದಿ ದಡದಲ್ಲಿ ಹಳೆಯ ಬಟ್ಟೆಗಳು, ಗಾಜಿನ ಚೂರುಗಳು, ತೆಂಗಿನಕಾಯಿ ಸೇರಿದಂತೆ ಇತರೆ ತ್ಯಾಜ್ಯಗಳು ತುಂಬಿದ್ದು, ಬಹುತೇಕ ತ್ಯಾಜ್ಯಗಳನ್ನು ತೆಗೆದು ನದಿ ದಡ ಶುಚಿಗೊಳಿಸಿದರು.
ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗಣೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನದಿಗಳನ್ನು ಸ್ವಚ್ಛತೆಯಿಂದ ಕಾಪಾಡಬೇಕು. ದಿನ ಬಳಕೆಯ ತ್ಯಾಜ್ಯಗಳನ್ನು ಮನೆಗಳಲ್ಲಿಯೇ ವಿಲೇವಾರಿ ಮಾಡಿದರೆ ಮಾಲಿನ್ಯ ಕಡಿಮೆಯಾಗಲಿದೆ. ಗ್ರಾಮಸ್ಥರ ಸಹಕಾರವಿಲ್ಲದಿದ್ದರೆ ಸ್ವಚ್ಛತೆ ಅಸಾಧ್ಯ ಎಂದರು. ಅಭಿವೃದ್ಧಿ ಹೆಸರಿನಲ್ಲಿ ಮಾಲಿನ್ಯ ಹೆಚ್ಚಿಸಬಾರದು. ಸ್ವಚ್ಛ ಭಾರತವು ಗ್ರಾಮ ಮಟ್ಟದಿಂದಲೆ ಆಗಬೇಕು ಎಂದರು. ಗ್ರಾ.ಪಂ ಸದಸ್ಯ ಎ.ಕೆ ಹಕ್ಕಿಂ ಮಾತನಾಡಿ, ಕಾವೇರಿ ನದಿಯು ಇತ್ತೀಚಿಗಿನ ದಿನಗಳಲ್ಲಿ ಕಲುಷಿಗೊಳ್ಳುತ್ತಿದ್ದು, ನದಿ ನೀರು ಕುಡಿಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನದಿಯನ್ನು ಸಾರ್ವಜನಿಕರ ಸಹಾಯವಿಲ್ಲದೆ ಸ್ವಚ್ಛ ಮಾಡುವದು ಸಾಧ್ಯವಿಲ್ಲ. ಈಗಾಗಲೇ ಅಂತರ್ಜಲ ಮಟ್ಟವು ಕುಸಿದಿದ್ದು, ಮುಂದಿನ ದಿನಗಳಲ್ಲಿ ನೀರಿಗೆ ತೊಂದರೆ ಯಾಗಲಿದೆ. ಮುಂದಾಲೋಚನೆ ಯಿಂದ ನದಿಗಳ ಸಂರಕ್ಷಣೆ ಅತ್ಯಗತ್ಯ ಎಂದರಲ್ಲದೆ ಗ್ರಾ.ಪಂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಿದೆ ಎಂದರು. ಗ್ರಾ.ಪಂ ಉಪಾಧ್ಯಕ್ಷೆ ಸಫಿಯಾ ಮಾತನಾಡಿ, ಕಾವೇರಿ ನದಿಯ ನೀರು ತೀರ್ಥವಾಗಿದ್ದು, ಹಿಂದಿ ನಿಂದಲೂ ಕುಡಿಯಲು ಬಳಸುತ್ತಿ ದ್ದೇವೆ. ಆದರೇ ಇತ್ತೀಚೆಗಿನ ದಿನ ಗಳಲ್ಲಿ ನದಿಯ ನೀರು ಕುಡಿಯಲು ಯೋಗ್ಯವಿಲ್ಲದಾಗಿದೆ. ಮಹಿಳೆಯರು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕಿವಿ ಮಾತು ಹೇಳಿದರು.
ಸಿದ್ದಾಪುರ ನಗರ ಪತ್ರಕರ್ತರ ಸಂಘದ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ದೇಶದಲ್ಲಿ ನದಿಗಳನ್ನು ದೇವರೆಂದು ಪೂಜಿಸುತ್ತಿದ್ದು, ಕಾವೇರಿ ನದಿಯು ದಕ್ಷಿಣ ಭಾರತದ ಜೀವನದಿಯಾಗಿದೆ. ಆದರೇ ಇದೀಗ ಜೀವನದಿಯು ಕಲುಷಿತಗೊಳ್ಳುತ್ತಿದ್ದು, ತ್ಯಾಜ್ಯಗಳು ನದಿ ಸೇರುತ್ತಿವೆ. ಲಕ್ಷಾಂತರ ಮಂದಿ ಕುಡಿಯಲು ಬಳಸುತ್ತಿರುವ ಕಾವೇರಿ ನದಿಯ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ನದಿಯನ್ನು ಕಲುಷಿತಗೊಳಿಸದಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಪಾಸ್ತಾವಿಕ ಮಾತನಾಡಿದ ಕಾವೇರಿ ಸ್ವಚ್ಚತಾ ಆಂದೋಲನದ ಸಂಚಾಲಕ ಚಂದ್ರಮೋಹನ್ ಕಾವೇರಿ ನದಿಯು ಮಲೀನ ಗೊಳ್ಳುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಜಿಲ್ಲೆಯ ತಲಕಾವೇರಿಯಿಂದ ಹೆಬ್ಬಾಲೆಯವರೆಗೂ ನದಿ ಹರಿಯುವ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆ.ಹರೀಶ್ ಮಾತನಾಡಿದರು. ಈ ಸಂದರ್ಭ ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ. ಎನ್. ವಾಸು, ಡೋಮಿನಸ್ ಕಲಾ ಕ್ರೀಡಾ ಯೋಜನಾ ಸಮಿತಿಯ ಅಧ್ಯಕ್ಷ ಶೌಕತ್, ಪ್ರಮುಖರಾದ ಶಿಯಾಬ್, ಧರ್ಮಸ್ಥಳ ಸಂಘದ ಪ್ರಮುಖರಾದ ವಾರಿಜಾ ಭರತ್, ಪ್ರಮೀಳಾ ಸೇರಿದಂತೆ ಇನ್ನಿತರರು ಇದ್ದರು.