ಡಿವೈಎಸ್‍ಪಿ ಗಣಪತಿ ಪ್ರಕರಣದ ವರದಿ ಸಲ್ಲಿಕೆ

ಬೆಂಗಳೂರು, ಫೆ.26 : ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ವಿಚಾರಣೆ ನಡೆಸಲು ರಚಿಸಿದ್ದ ನ್ಯಾ.ಕೆ.ಎನ್. ಕೇಶವನಾರಾಯಣ ಅವರ ನೇತೃತ್ವದ ಆಯೋಗ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಂದು ವರದಿ ಸಲ್ಲಿಸಿದೆ. 320 ಪುಟಗಳ ವರದಿಯಲ್ಲಿ 48 ಸಾಕ್ಷಿಗಳು ಹಾಗೂ ಇಬ್ಬರು ತನಿಖಾಧಿಕಾರಿಗಳ ವಿಚಾರಣೆ ನಡೆಸಿರುವ ಮಾಹಿತಿ ಒಳಗೊಂಡಿದೆ. 2016ರ ಜು.7ರಂದು ಮಂಗಳೂರು ಡಿವೈಎಸ್‍ಪಿ ಎಂ.ಕೆ.ಗಣಪತಿ ಮಡಿಕೇರಿಯ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿವ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ. ಪ್ರಸಾದ್ ನನ್ನ ಸಾವಿಗೆ ಕಾರಣ ಎಂದು ಗಣಪತಿ ಸಾವಿಗೆ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಸೋಮವಾರಪೇಟೆ ತಾಲೂಕಿನ ರಂಗಸಮುದ್ರದ ಗಣಪತಿ ಮಂಗಳೂರು ಐಜಿ ಕಚೇರಿಗೆ ವರ್ಗವಾಗಿದ್ದರು. ಅವರ ಮೊಬೈಲ್, ಕಂಪ್ಯೂಟರ್‍ನಲ್ಲಿದ್ದ ದಾಖಲೆಗಳನ್ನು ನಾಶ ಮಾಡಿರುವದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಸಚಿವ ಜಾರ್ಜ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿತ್ತು.

ನಲಪಾಡ್ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು, ಫೆ.26 : ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ಫೆ.27 ಕ್ಕೆ ಮುಂದೂಡಿದ್ದು, ಇದರಿಂದ ಜಾಮೀನು ನಿರೀಕ್ಷೆಯಲ್ಲಿದ್ದ ಎ1 ಆರೋಪಿ ಮೊಹಮ್ಮದ್ ನಲಪಾಡ್ ಕಣ್ಣೀರು ಹಾಕಿದ್ದಾನೆ. ಪ್ರಕರಣ ಸಂಬಂಧ 63ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆದಿದ್ದು ಜಾಮೀನು ಅರ್ಜಿಗೆ ಹೆಚ್ಚುವರಿ ಆಕ್ಷೇಪಣೆ ಅರ್ಜಿ ಸಲ್ಲಿಸಲು ನ್ಯಾಯಾಧೀಶರು ಆದೇಶಿಸಿದ್ದರು. ಅಂತೆ ವಿದ್ವತ್ ಪರ ವಕೀಲ ಶ್ಯಾಮ್ ಸುಂದರ್ ಅವರು ನಲಪಾಡ್ ಗೆ ಜಾಮೀನು ನೀಡದಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ನಲಪಾಡ್ ವಕೀಲ ಟಾಮಿ ಸೆಬಾಸ್ಟಿಯನ್ ಜಾಮೀನು ನೀಡುವಂತೆ ನ್ಯಾಯಧೀಶರಲ್ಲಿ ಮನವಿ ಮಾಡಿದರು. ಇನ್ನು ವಾದ-ವಿವಾದ ನಡುವೆ ಕೋರ್ಟ್ ಸಮಯ ಮುಗಿದಿದ್ದರಿಂದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.

ಮಾ.1 ರಿಂದ ಪಿಯುಸಿ ಪರೀಕ್ಷೆಗಳು ಆರಂಭ

ಮಡಿಕೇರಿ, ಫೆ.26 :ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ 17 ರವರೆಗೆ ನಡೆಯಲಿದೆ. ಒಟ್ಟು 6,90,150 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪಿಯು ಮಂಡಳಿಯ ರಾಜ್ಯ ನಿರ್ದೇಶಕರಾದ ಶಿಖಾ ತಿಳಿಸಿದ್ದಾರೆ. ಒಟ್ಟು 3,52,290 ಬಾಲಕರು ಹಾಗೂ 3,37,860 ಬಾಲಕಿಯರು ಪರೀಕ್ಷೆ ಬರೆಯಲಿದ್ದು, ಅಕ್ರಮವನ್ನು ತಡೆಯಲು ಎಲ್ಲಾ ಪರೀಕ್ಷೆ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಲಾಗುತ್ತಿದೆ. ಪರೀಕ್ಷೆಗಳು ನಡೆಯುವ ಸಂದರ್ಭ ಉಪನ್ಯಾಸಕರುಗಳು ಮೊಬೈಲ್ ಫೋನ್‍ಗಳನ್ನು ಬಳಸುವಂತ್ತಿಲ್ಲ. ಪಿಯುಸಿ ಪರೀಕ್ಷೆಯ ಫಲಿತಾಂಶ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಗೊಳ್ಳಲಿದೆ.

ಇಸಿಸ್ ಕೇಂದ್ರದ ಮೇಲೆ ದಾಳಿ : 25 ಸಾವು

ಬೇರೂತ್, ಫೆ.26 : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಪೂರ್ವ ಸಿರಿಯದಲ್ಲಿನ ಕೊನೆಯ ಕೇಂದ್ರದ ಮೇಲೆ ನಡೆಸಲಾಗಿರುವ ವೈಮಾನಿಕ ಬಾಂಬ್ ದಾಳಿಯಲ್ಲಿ ಏಳು ಮಕ್ಕಳು ಸೇರಿದಂತೆ 25 ಸಾರ್ವಜನಿಕರು ಮೃತಪಟ್ಟಿರುವುದಾಗಿ ಸಿರಿಯಾದ ಮಾನವ ಹಕ್ಕುಗಳ ವಿಚಕ್ಷಣ ಸಂಸ್ಥೆ ತಿಳಿಸಿದೆ. ಇರಾಕ್ ಗಡಿ ಸಮೀಪದಲ್ಲಿ ಇಸಿಸ್ ಉಗ್ರ ಅಲ್ಬು ಕಮಾಲ್ ನ ಹಿಂದಿನ ಭದ್ರ ಕೋಟೆಯ ಉತ್ತರಕ್ಕಿರುವ ಅಲ್ ಶಾಫಾ ಗ್ರಾಮದ ಮೇಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಅಮೆರಿಕ ನೇತೃತ್ವದ ಒಕ್ಕೂಟಗಳು ನಡೆಸಿದ ವೈಮಾನಿಕ ಬಾಂಬ್ ದಾಳಿ ನಡೆಸಲಾಗಿದೆ ಎಂದು ವಿಚಕ್ಷಣಕಾರರು ತಿಳಿಸಿದ್ದಾರೆ. ವೈಮಾನಿಕ ಬಾಂಬ್ ದಾಳಿಯಲ್ಲಿ ಏಳು ಮಕ್ಕಳು ಸೇರಿದಂತೆ 25 ಮಂದಿ ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬ್ರಿಟನ್ ಮೂಲದ ವಿಚಕ್ಷಣ ಸಂಸ್ಥೆಯ ಮುಖ್ಯಸ್ಥ ರಾಮಿ ಅಬ್ ದೇಲ್ ರೆಹಮಾನ್ ತಿಳಿಸಿದ್ದಾರೆ.

ಬಾತ್ ಟಬ್‍ಗೆ ಬಿದ್ದು ಶ್ರೀದೇವಿ ಸಾವು

ದುಬೈ, ಫೆ.26 : ಕಳೆದ ಶನಿವಾರ ರಾತ್ರಿ ನಿಧನರಾದ ಬಾಲಿವುಡ್ ಮೋಹಕ ತಾರೆ ಶ್ರೀದೇವಿ(54) ಅವರು ಆಕಸ್ಮಿಕವಾಗಿ ಬಾತ್ ಟಬ್ ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದುಬೈನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಿಳಿಸಲಾಗಿದೆ. ದುಬೈನ ಎಮಿರೇಟ್ಸ್ ಟವರ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀದೇವಿ ಅವರು ಬಾತ್ರೂಮ್ಗೆ ತೆರಳಿದಾಗ ಹೃದಯ ಸ್ತಂಭನವಾಗಿದ್ದು, ಬಾತ್‍ಟಬ್‍ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಫೆÇೀರೆನ್ಸಿಕ್ ವರದಿಯಲ್ಲಿ ತಿಳಿಸಲಾಗಿದೆ.