ಶ್ರೀಮಂಗಲ, ಫೆ. 26: ಕಳೆದ ಆರು ದಶÀಕದಿಂದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ವೀರಾಜಪೇಟೆ ತಾಲೂಕಿನ ಅಭ್ಯರ್ಥಿಗೆ ಅವಕಾಶ ದೊರಕಿಲ್ಲ. ಈ ಬಾರಿ ಸ್ಥಳೀಯ ಪ್ರಾಮಾಣಿಕರಿಗೆ ಅವಕಾಶ ಕಲ್ಪಿಸುವ ಬೇಡಿಕೆಯನ್ನಿಟ್ಟು ಬಿಜೆಪಿ ಪಕ್ಷದ ವರಿಷ್ಠರನ್ನು ಒತ್ತಾಯಿಸಲು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪಕ್ಷದ ಹಿರಿಯರಾದ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ಗೋಪಾಲ್ ತಿಮ್ಮಯ್ಯ ಅವರು ಕಳೆದ 50 ವರ್ಷದಿಂದ ವೀರಾಜಪೇಟೆ ಕ್ಷೇತ್ರ ಮೀಸಲು ಕ್ಷೇತ್ರವಾಗಿ ತಾಲೂಕಿನ ಮತದಾರರಿಗೆ ಬಿಜೆಪಿಯಿಂದ ಅಭ್ಯರ್ಥಿಯಾಗಲು ಅವಕಾಶ ವಂಚಿತ ವಾಯಿತು. 2008ರಲ್ಲಿ ವೀರಾಜಪೇಟೆ ಕ್ಷೇತ್ರ ಪುನರ್‍ವಿಂಗಡಣೆಯಾದ ಸಂದರ್ಭ ಸಾಮಾನ್ಯ ಕ್ಷೇತ್ರವಾಗಿ ರೂಪಿತವಾದರೂ, ತಾಲೂಕಿನಲ್ಲಿ ಮತದಾನ ಹೊಂದಿರುವವರಿಗೆ ಬಿಜೆಪಿಯಿಂದ ಅಭ್ಯರ್ಥಿಯಾಗಲು ಅವಕಾಶ ದೊರೆತಿಲ್ಲ. ಸ್ಥಳೀಯ ಅಭ್ಯರ್ಥಿಯಾದರೆ ಇಲ್ಲಿಯ ಎಲ್ಲಾ ವಿಚಾರಗಳು ತಿಳಿದಿರುವದರಿಂದ ಜನರ ಸಮಸ್ಯೆ ತಮ್ಮ ಸಮಸ್ಯೆ ಎಂದು ಅರಿತು ಜನಪರವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ತಾಲೂಕಿನಲ್ಲಿ ವನ್ಯ ಪ್ರಾಣಿಗಳ ತಡೆಗೆ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಹಾಗೂ ಬಹುವರ್ಷದ ಬೇಡಿಕೆಯಾದ ಪೊನ್ನಂಪೇಟೆ ತಾಲೂಕು ರಚನೆ ಮಾಡುವ ಕಾಳಜಿ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಬಿಜೆಪಿ ಪಕ್ಷ ಅವಕಾಶ ಕಲ್ಪಿಸಬೇಕು. ಒಂದು ವೇಳೆ ಪಕ್ಷ ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಈ ಭಾಗದಿಂದ ಸ್ವತಂತ್ರ ಅಭ್ಯರ್ಥಿಯನ್ನು ನಿಲ್ಲಿಸ ಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಆರ್‍ಎಂಸಿ ಅಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ರೈತರಿಗೆ ಬೆಂಬಲವಾಗಿರಬೇಕಾದ ಗೋಣಿಕೊಪ್ಪಲು ಆರ್‍ಎಂಸಿಯಲ್ಲಿ ಕರಿಮೆಣಸು ಹಗರಣ ನಡೆದಾಗ ಹಗರಣವನ್ನು ಸಮರ್ಥಿಸಿದ, ಆರ್‍ಎಂಸಿ ಆಡಳಿತ ಮಂಡಳಿ ಹಾಗೂ ಶಾಸಕ ಸಂಸದರ ವಿರುದ್ಧ ಧ್ವನಿ ಎತ್ತಿದ್ದೇವೆ. ಆದರೆ, ಪಕ್ಷದಿಂದ ಚುನಾಯಿತರಾದವರು ಸ್ಥಳೀಯರನ್ನು ತುಳಿಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಡಿಕೇರಿ ತಾ.ಪಂ. ಮಾಜಿ ಅಧ್ಯಕ್ಷ ಇಂದ್ರಕುಮಾರ್ ಮಾತನಾಡಿ ಬಿಜೆಪಿ ಪಕ್ಷ ಮೊದಲು ದೇಶ ನಂತರ ನಾನು ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿದೆ. ಆದರೆ, ಕೊಡಗಿನಲ್ಲಿ ಮಾತ್ರ ಇದರ ವ್ಯತಿರಿಕ್ತ ರೂಪ ಕಾಣುತ್ತಿದ್ದು, ಅಧಿಕಾರ ಪಡೆದುಕೊಂಡವರು ಮತ್ತಷ್ಟು ಅಧಿಕಾರದ ದಾಹದಿಂದ ಯುವ ನಾಯಕರುಗಳನ್ನು ತುಳಿಯುತ್ತಿದ್ದಾರೆ ಎಂದರು.
ಒಂದು ಸಮಯದಲ್ಲಿ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ವೀರಾಜಪೇಟೆ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಈ ಕ್ಷೇತ್ರದ ಬಿಜೆಪಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ ಕಾರ್ಯಕರ್ತರ ಪರಿಶ್ರಮದಿಂದ ಚುನಾಯಿತರಾದ ಜನಪ್ರತಿನಿಧಿಗಳು ಸ್ಥಳೀಯ ಜನರ ಹಾಗೂ ಕಾರ್ಯಕರ್ತರ ಸಮಸ್ಯೆ ಹಾಗೂ ಭಾವನೆಗಳಿಗೆ ಸ್ಪಂದÀನೆ ನೀಡುತ್ತಿಲ್ಲ ಎಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ತಿಳಿಸಿದರು.
ಬಿಜೆಪಿ ನರೇಂದ್ರ ಮೋದಿ ಅಭಿಮಾನಿಗಳ ಸಂಘದ ಪ್ರಮುಖ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮಾತನಾಡಿ, ಇದೀಗ ಸಾಮಾನ್ಯ ಕ್ಷೇತ್ರವಾಗಿ ಬದಲಾದರೂ ಅಭಿವೃದ್ಧಿ ಕುಂಠಿತವಾಗಿದೆ. ನಾವುಗಳು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಕ್ಕೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ನೋವನ್ನು ಪಕ್ಷದ ಪ್ರಮುಖರು ಅರ್ಥ ಮಾಡಿಕೊಳ್ಳಬೇಕಾಗಿದೆ. ಒಂದು ವೇಳೆ ನಮ್ಮ ಮನವಿಗೆ ಪಕ್ಷದ ಪ್ರಮುಖರು ಸ್ಪಂಧಿಸದಿದ್ದರೆ ಸ್ವತಂತ್ರ ಅಭ್ಯರ್ಥಿಗೆ ಸಂಪೂರ್ಣ ಬೆಂಬಲವನ್ನು ನೀಡುವದರೊಂದಿಗೆ ಪಕ್ಷದ ತತ್ವ ಸಿದ್ಧಾಂತವನ್ನು ಬಿಟ್ಟು ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಸದರ ನೇತೃತ್ವದಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ನಿಯೋಗ ತೆರಳುವಂತೆ ಸಲಹೆ ನೀಡಿದರು.
ಬಿಜೆಪಿ ಪಕ್ಷದ ಪ್ರಮುಖರಾದ ಬೆಟ್ಟಗೇರಿ ಭಾಗದ ಬಾಬಿ ಚೀಯಣ್ಣ, ನಿಟ್ಟೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಾಚಂಗಡ ಉಮೇಶ್ ಮುತ್ತಣ್ಣ, ಪೊನ್ನಂಪೇಟೆ ವಲಯ ಬಿಜೆಪಿ ಪ್ರಮುಖ ವಿನೋದ್, ಮತ್ರಂಡ ಕಬೀರ್ ದಾಸ್ ಹಾಗೂ ಮತ್ತಿತರರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಮಲ್ಲಮಾಡ ಪ್ರಭು ಪೂಣಚ್ಚ, ಗುಡಿಯಂಗಡ ನಾಚಪ್ಪ ಹಾಜರಿದ್ದರು. ವೀರಾಜಪೇಟೆ ಕ್ಷೇತ್ರದ ವಿವಿಧೆಡೆಯಿಂದ ಸುಮಾರು 200 ಕಾರ್ಯಕರ್ತರು ಭಾಗವಹಿಸಿದ್ದರು.