ಮಡಿಕೇರಿ, ಫೆ. 26: ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ತಾಲೂಕು ಮಟ್ಟದ ಬೃಹತ್ ವ್ಯಾಸೆಕ್ಟಮಿ ಶಿಬಿರ ಸೇವಾ ಸಪ್ತಾಹ ಹಾಗೂ ಕುಟುಂಬ ಕಲ್ಯಾಣ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು.
ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರಿಗೆ ಎಚ್.ಡಿ.ಸಿ., ಎಚ್.ಬಿ.ಸಿ.ಇ ಎಸ್ ಟಿ, ಪಿಟಿಕೆ ಹಾಗೂ ಹೊಸ ಗರ್ಭನಿರೋಧಕಗಳ ಬಗ್ಗೆ ಒಂದು ದಿನದ ಮಾಹಿತಿ ನೀಡುವ ಕಾರ್ಯಾಗಾರಕ್ಕೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಚಾಲನೆ ನೀಡಿದರು.
ವಿವಾಹಿತ ಪುರುಷರ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಮನವೋಲಿಸ ಬೇಕಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಪುರುಷರಿಗೆ ಇಲಾಖೆ ಯಿಂದ ರೂ 1100 ಹಾಗೂ ಮನವೋಲಿಸುವ ಕಾರ್ಯಕರ್ತರಿಗೆ ರೂ 200 ಸಹಾಯಧನ ಲಭಿಸಲಿದೆ ಎಂದು ಮಾಹಿತಿ ನೀಡಿದರು. ನೋಸ್ಕಾಲ್‍ಪೆಲ್ ವ್ಯಾಸೆಕ್ಟಮಿ ಮತ್ತಿತರ ಬಗ್ಗೆ ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಡೆಂಗೂ ಪ್ರಕರಣಗಳು ಹೆಚ್ಚದಂತೆ ಮುಂಜಾಗ್ರತೆ ವಹಿಸಬೇಕಾಗಿದೆ. ಸಾರ್ವಜನಿಕರಿಗೆ ಸೊಳ್ಳೆಗಳ ಉತ್ಪತ್ತಿ ತಾಣಗಳ ಬಗ್ಗೆ ಅರಿವು ಮೂಡಿಸಿ, ಪ್ರಕರಣಗಳ ನಿಯಂತ್ರಣಕ್ಕೆ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.
ಸ್ಪರ್ಶ ಕುಷ್ಠರೋಗ ಕಾರ್ಯ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿ ಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಅವರು ಕ್ಷಯರೋಗ ನಿಯಂತ್ರಣ ಹಾಗೂ ಎಚ್.ಐ.ವಿ ಏಡ್ಸ್ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಎಮ್ ಮತ್ತು ಇ ವ್ಯವಸ್ಥಾಪಕ ಕಿರಣ್ ಅವರು ಎಚ್.ಎಂ.ಐ.ಎಸ್. ಮತ್ತು ಎಂ.ಸಿ.ಟಿ. ಎಸ್ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ಡಿ.ಎಚ್.ಇ.ಒ ರಮೇಶ್ ಕೀಟಶಾಸ್ತ್ರಜ್ಞ ಮಂಜುನಾಥ್, ಟಿ.ಎ.ರೇವತಿ ಇತರರು ಇದ್ದರು.