ಅಂದೊಮ್ಮೆ ಬಹಳ ಬೇಕಾದವರ ಸಾವಾಯಿತು. ಕೂಡಲೇ ವಾಟ್ಸಾಪ್ ಸಂದೇಶಗಳು ಹರಿದಾಡಲಾ ರಂಭಿಸಿದವು. ಅದೂ-ಇದೂ ಸಂದೇಶಗಳೊಂದಿಗೆ ಒಬ್ಬರು ‘‘ಈ ದೇವರು ಕ್ರೂರಿ’’ ಎಂದು ಬರೆದರು. ನಾನು ಮರು ಸಂದೇಶ ಕಳುಹಿಸಿದೆ. ದೇವರು ಮಾನವನಿಗೆ ಇಂತಿಷ್ಟೇ ಆಯುಷ್ಯ ಎಂದು ಎಲ್ಲಾದರೂ ಒಪ್ಪಂದ ಮಾಡಿರುವ ದಾಖಲೆ ಇದ್ದರೆ ಕಳುಹಿಸಿ ಎಂದು ಕೇಳಿದೆ.ನಿನ್ನೆ ಸಿನೆಮಾ ನಟಿ ಶ್ರೀದೇವಿ ನಿಧನರಾದರು. ವರ್ಣಮಯ ಬದುಕು, ಸಾರ್ಥಕ ನಟನೆಗೆ ಹೆಸರಾದ ಆಕೆಯ ಜೀವನ ಆಕೆಯ ಮಟ್ಟಿಗೆ ಅಪೂರ್ಣವೇನಲ್ಲ. ಆಕೆಯ ಸಾವಿನಿಂದ ವಿಚಲಿತನಾದ ಹೆಸರಾಂತ ಸಿನೆಮಾ ನಿರ್ಮಾಪಕ ರಾಂಗೋಪಾಲ್ ವರ್ಮ ಟ್ವೀಟ್ ಸಂದೇಶ ಮಾಡಿ ಚಡಪಡಿಕೆ ವ್ಯಕ್ತಪಡಿಸಿದ್ದಾರೆ. ಒಮ್ಮೆ ‘‘ಅಯ್ಯೋ ಬಾಲಾಜಿ ನನ್ನ ಬಿಟ್ಟು ‘‘ಆಕೆಯನ್ನು ಮಾತ್ರ ಏಕೆ ಕರ್ಕೊಂಡೆ’’ ಎಂದು ಕೇಳಿದ್ದಾರೆ. ಮತ್ತೊಂದು ಸಂದೇಶದಲ್ಲಿ ‘‘ನಾನು ಇಲ್ಲಿಯವರೆಗೆ ದೇವರನ್ನು ಇಂದಿನಷ್ಟು ದ್ವೇಷಿಸಿರಲಿಲ್ಲ’’ ಎಂದು ಹೇಳುವ ಆತ ಕೂಡಲೇ ಆಕೆಯನ್ನು ನಾಶ ಮಾಡಿ ಬಿಟ್ಟ ಬಾಸ್ಟ....ದೇವರು’’ ಎಂದು ಕೆಟ್ಟ ಮಾತಿನಲ್ಲಿ ದೇವರನ್ನು ಹೀಯಾಳಿಸಿದ್ದಾನೆ.

ಸೀಮಿತ ಜ್ಞಾನ ಹೊತ್ತು, ಮಿತಿಯುಳ್ಳ ವೃತ್ತದೊಳಗಷ್ಟೆ ಚಿಂತನೆ ಹರಿಸಬಲ್ಲ ಹುಲು ಜೀವಿಗಳು ಸೃಷ್ಠಿಕರ್ತನ ವಿಶಾಲ ಇರುವಿಕೆಯ ಎದುರು ಸಂಕುಚಿತ ಬೇಡಿಕೆ ಇರಿಸುತ್ತಾರೆ. ಕಾಕತಾಳೀಯವಾಗಿ ಪ್ರಾರಬ್ಧಕ್ಕೆ ಅನುಗುಣವಾಗಿ ಬೇಡಿಕೆ ಈಡೇರಿದರೆ ದೇವರನ್ನು ತಲೆಯಲ್ಲಿ ಹೊತ್ತು ಸಂಭ್ರಮಿಸುತ್ತಾರೆ. ಬೇಡಿಕೆ ಈಡೇರದಿದ್ದರೆ ತಾನು ಅವನಿಗಿಂತ ಮಿಗಿಲೆಂಬ ಭ್ರಮೆಯಲ್ಲಿ ಜುಜುಬಿ ಮಾನವನನ್ನು ಹಳಿಯುವಂತೆ ಹಳಿಯಲು ಮುಂದಾಗುತ್ತಾರೆ.

ಹಳಿಯಲಿ ಆದರೆ ದೇವರು ಎಂದರೆ ಏನು ಎಂದು ಮೊದಲು ತಿಳಿಯಲಿ. ಹುಟ್ಟು ಸಾವು ರಾಮ, ಕೃಷ್ಣ, ಬುದ್ಧ, ಪೈಗಂಬರ, ಕ್ರೈಸ್ತರನ್ನೇ ಬಿಟ್ಟಿಲ್ಲ ಎಂಬ ಸತ್ಯ ಅರಿತು ಮಾತನಾಡಲಿ. ಇವರ ಕಲ್ಪನೆಯ ದೇವರುಗಳು ಸತ್ಯವೋ, ನಿರಾಕಾರ ಬ್ರಹ್ಮತ್ವ ನಿತ್ಯವೋ ಎಂಬ ಸತ್ಯವನ್ನು ಅಭ್ಯಸಿಸಿ ಅರಿಯಲಿ, ಬಳಿಕ ಮಾತನಾಡಲಿ. ದೈವತ್ವದ ಗಂಧ-ಗಾಳಿ ಅರಿಯದ ಮಂದಿ ಅಪ್ರಬುದ್ಧತೆ ಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ಇನ್ನಷ್ಟೇ ಬೆಳೆಯ ಬೇಕಿರುವ ಯುವ ಜನಾಂಗಕ್ಕೆ ತಪ್ಪು ಮಾರ್ಗದರ್ಶನ ನೀಡದಿರಲಿ.

ಎಲ್ಲವಿದ್ದ್ದೂ ಮುಂದೇನು ಎಂದು ಅರಿಯದೆ...

ಜೀವನ ಎಂಬದು ಹೀಗೇ. ಇದು ಹರಿಯುವ ನೀರಿನಂತೆ ನಿರಂತರ. ಅದರ ಹರಿಯುವಿಕೆಗೆ ಅಡ್ಡವಾಗುವ ಕಲ್ಲುಗಳು ಕೊರೆಯಲ್ಪಡುತ್ತವೆ. ಮಣ್ಣಗುಪ್ಪೆ ಕರಗುತ್ತದೆ. ಭಾರೀ ಅಡ್ಡಿ ಎದುರಾದರೆ ಅದರ ದಿಕ್ಕೇ ಬದಲಾಗುತ್ತದೆ. ಇದು ಹೇಗೆ ಹೀಗಾಗುತ್ತದೆ ಎಂಬ ಪ್ರಶ್ನೆಗೆ ವಿಜ್ಞಾನ ಉತ್ತರಿಸುತ್ತದೆ. ಆದರೆ ಏಕೆ ಹೀಗೆ ಅಡ್ಡಿಗಳು, ಕೊರತೆÀಗಳು, ದಿಕ್ಕು ಬದಲಾವಣೆ ಎಂಬೆಲ್ಲ ಪ್ರಶ್ನೆಗೆ ಅದು ಹಾಗೇ ಎಂದಷ್ಟೆ ಹೇಳಬಹುದು. ಉತ್ತರದ ಬೆನ್ನು ಹತ್ತಿದರೆ ಸಮಯ-ಜೀವನ ವ್ಯರ್ಥವಾಗುತ್ತದೆ. ಬದಲು ಹರಿಯುವ ನೀರಿನ ಸೌಂದರ್ಯದೊಂದಿಗೆ ಒಂದಾದಲ್ಲಿ ಒಂದಷ್ಟು ನೆಮ್ಮದಿ ದೊರೆಯಬಲ್ಲದು.

ಅರುಣ್ ಶೌರಿ ಎಂದರೆ ಪತ್ರಿಕೋದ್ಯಮದಲ್ಲಿ ಭ್ರಷ್ಟಾಚಾರಿಗಳ ವಿರುದ್ಧ ಅಕ್ಷರ ಕ್ರಾಂತಿ ಮಾಡಿದ ಹರಿಕಾರ ಎಂದು ಎಲ್ಲರಿಗೂ ತಿಳಿದಿದೆ. ಪತ್ರಿಕೋದ್ಯಮಿಯಾಗಿ, ವಿಶ್ವ ಬ್ಯಾಂಕಿನ ಅರ್ಥ ಶಾಸ್ತ್ರಜ್ಞರಾಗಿ, ಕೇಂದ್ರ ಸಚಿವರಾಗಿ ಹೆಸರು ಮಾಡಿದ್ದು, ಎಲ್ಲರ ದೃಷ್ಟಿಯಲ್ಲಿ ಆತ ಒಬ್ಬ ವಿಐಪಿ. ದೂರದಿಂದ ನೋಡಿದಾಗ ಆತನ ಬಾಳು ಸುಂದರ. ಅರುಣ್ ಶೌರಿ ಸುಮಾರು 26 ಪುಸ್ತಕ ಬರೆದಿದ್ದಾರೆ. ಪ್ರಮುಖ ಧರ್ಮಗಳ ಬೋಧನೆಗಳನ್ನು ಅಭ್ಯಸಿಸಿದ್ದಾರೆ. ಧರ್ಮ ಗುರುಗಳನ್ನು ಕಂಡಿದ್ದಾರೆ. ತಮ್ಮ ಪುಸ್ತಕ ಬರಹಗಳಲ್ಲಿ ಧರ್ಮ-ಬೋಧನೆ-ಜೀವನ -ನೋವುಗಳು ಅದಕ್ಕೆ ಕಾರಣಗಳ ಕುರಿತು ವೈಜ್ಞಾನಿಕ, ಆಧ್ಯಾತ್ಮಿಕ ದೃಷ್ಟಿಕೋನಗಳಲ್ಲಿ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದಾರೆ. ಅವರ ಈ ಶ್ರಮ ಮತ್ತು ತುಡಿತ ದೇವರನ್ನು ಅಥವಾ ನಿಯಾಮಕನನ್ನು ಕಾಣಲು ಅಲ್ಲ. ಅವರ ವೈಯಕ್ತಿಕ ಜೀವನದಲ್ಲಿ ಎದುರಾಗುವ ಆಘಾತಕ್ಕೆ ಉತ್ತರ ಹುಡುಕಾಟಕ್ಕಾಗಿ.

ಬಾಹ್ಯ ಜಗತ್ತಿಗೆ ಮೇರು ಜೀವನ ನಡೆಸುತ್ತಿರುವಂತೆ ಕಾಣುವ ಅರುಣ್‍ಶೌರಿ ಸಹಿಸಲಾಗದ ನೋವುಗಳು, ಎದುರಿಸಲಾಗದ ಪರಿಸ್ಥಿತಿಯಲ್ಲಿ ಜೀವನ ಸವೆಸುತ್ತಿದ್ದಾರೆ. ಅನಿತಾ ಎಂಬಾಕೆಯನ್ನು ಸಂತಸದಿಂದ ವರಿಸಿದ ಶೌರಿ ಇಂದು ಪಾರ್ಕಿನ್‍ಸನ್ ಕಾಯಿಲೆಯಿಂದ ಬಳಲುತ್ತಿರುವ ಆಕೆಗೆ ತುತ್ತು ಅನ್ನ ಗಂಟಲಲ್ಲಿ ಇಳಿಸಲು ಒದ್ದಾಡುತ್ತಾರೆ. ನಲವತ್ತೈದು ವರ್ಷ ತುಂಬಿರುವ ಏಕೈಕ ಪುತ್ರ ಆದಿತ್ಯ ‘ಸೆರಿಬ್ರಲ್ ಫಾಲ್ಸಿ’ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಮೆದುಳು ಮತ್ತು ಶರೀರದ ನಡುವೆ ಸಂಪರ್ಕದ ಕೊರತೆಯಿದ್ದು, ನಡೆಯಲು ನಿಲ್ಲಲಾಗದ ಸ್ಥಿತಿಯಲ್ಲಿದ್ದು ಆತನ ಸೇವೆಯಲ್ಲಿ ಮುಳುಗಿದ್ದಾರೆ. ಎಂಭತ್ತರ ಸನಿಹವಿರುವ ಅರುಣ್ ಶೌರಿಗೆ ತನ್ನ ಕುಟುಂಬದ ಸ್ಥಿತಿ ನಾಳೆ ಏನು ಎಂಬ ಕುರಿತು ಆಲೋಚನೆ ಬಂದಾಗ ಮಾನಸಿಕ ತುಮುಲಗಳನ್ನು ಒಂದಷ್ಟು ಗೀಚಿ ಎಸೆಯುತ್ತಾರೆ. ಬರೆಯುತ್ತಾ ಹೆಚ್ಚು ಸಮಯ ಕಳೆಯಲು ಪತ್ನಿ ಮತ್ತು ಪುತ್ರನ ಕ್ಷಣ ಕ್ಷಣದ ಸೇವೆ ಅಡ್ಡವಾಗುತ್ತದೆ.

ಅರುಣ್‍ಶೌರಿ ವಾಷಿಂಗ್ಟನ್‍ನಲ್ಲಿ ವಿಶ್ವ ಬ್ಯಾಂಕಿನಲ್ಲಿದ್ದ ಸಂದರ್ಭದಲ್ಲಿ ಅವರ ಪುತ್ರನ ಜನನವಾಗುತ್ತದೆ. ಮಗು ಎಲ್ಲರಂತಿಲ್ಲ ಎಂಬ ಸತ್ಯದ ಅರಿವಾದಾಗ ಅಲ್ಲಿನ ವೈದ್ಯರು ಹೇಳಿದ ಮಾತಿನಿಂದ ಶೌರಿ ಭಾರತಕ್ಕೆ ಬಂದು ಬಿಡುತ್ತಾರೆ. ‘‘ಭಾರತದಲ್ಲಿ ಕೌಟುಂಬಿಕ ಬಾಂಧವ್ಯ ಉತ್ತಮವಾಗಿದೆ. ನಿಮ್ಮ ಪುತ್ರನನ್ನು ನೋಡಿಕೊಳ್ಳಲು ಕುಟುಂಬದ ಸದಸ್ಯರುಗಳ ಪಾತ್ರ ಅವಶ್ಯವಿದೆ’’ ಎಂದು ವೈದ್ಯರು ಹೇಳಿರುತ್ತಾರೆ. ಅದಕ್ಕೆ ಸರಿಯಾಗಿ ಶೌರಿಯ ಅತ್ತೆ ಹಾಗೂ ಇತರರು ಮಗುವನ್ನು ಮಾಣಿಕ್ಯದಂತೆ ನೋಡಿಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಸಮಯ, ಆಯುಷ್ಯದ ಮಿತಿಯಿದೆ.

ವೀಲ್‍ಕುರ್ಚಿಯಲ್ಲೇ ಇರಬೇಕಾಗುವ ಆದಿತ್ಯನಿಗೆ ಮನೆಯಿಂದ ಹೊರಹೋಗುವದು ಬಹಳ ಖುಷಿ. ಅರುಣ್‍ಶೌರಿ ಕೇಂದ್ರ ಸಚಿವರಾಗಿದ್ದಾಗಲೂ ಪುತ್ರನನ್ನು ಪ್ರತಿದಿನ ಮಧ್ಯಾಹ್ನ ಹೊಟೇಲಿಗೆ ಊಟಕ್ಕೆ ಕರೆದೊಯ್ಯುತ್ತಿದ್ದರು. ಮನೆಯಲ್ಲಿ ಹಾಸಿಗೆಗೇ ಸೀಮಿತವಾದ ಪತ್ನಿಯ ಆರೈಕೆ ಮಾಡುತ್ತಿದ್ದರು. ಇಂತಹ ಕರುಣಾಜನಕ ಸ್ಥಿತಿಯಲ್ಲಿ ವ್ಯಕ್ತಿ ಹೇಗೆ ಸಮಸ್ಯೆ ಎದುರಿಸಬೇಕು ಎಂದು ಶೌರಿ ಸೂಕ್ತವಾಗಿ ಹೇಳುತ್ತಾರೆ ‘‘ನನ್ನ ಪುತ್ರನನ್ನು ಬಚ್ಚಲಿಗೆ ಕರೆದೊಯ್ಯಬೇಕಾದರೆ ಆ ಕ್ಷಣ ಆ ಕೆಲಸದ ವಿಚಾರವಷ್ಟೇ ಚಿಂತಿಸುವೆ. ಪತ್ನಿಗೆ ಬಟ್ಟೆ ಬದಲಿಸಬೇಕಾದಾಗ ಆ ವಿಚಾರವನ್ನಷ್ಟೇ ಚಿಂತಿಸುವೆ. ಏಕೆಂದರೆ ನಿನ್ನೆಯ ಕುರಿತು ಚಿಂತಿಸಿ ಫಲವಿಲ್ಲ. ನಾಳೆಯ ಕುರಿತು ಆಲೋಚಿಸಿ ಉಪಯೋಗವಿಲ್ಲ. ನನಗೀಗ ‘ಈಗ- ಇಲ್ಲಿ’ ಆಗಬೇಕಾದುದು ಮಾತ್ರ ಮುಖ್ಯ’’. ನಾಳೆ ಶೌರಿ ನಿಧನದ ಬಳಿಕ ಪತ್ನಿ ಮತ್ತು ಪುತ್ರನ ಸ್ಥಿತಿ ಏನೋ ತಿಳಿದಿಲ್ಲ. ಅವರ ಖರ್ಚಿಗಾಗಿ ಶೌರಿ ಟ್ರಸ್ಟ್ ಒಂದನ್ನು ರಚಿಸಿ ಹಣ ಇರಿಸಿದ್ದಾರೆ. ಆದರೆ ನೋಡಿಕೊಳ್ಳುವವರ್ಯಾರು?

ದೇಶದಲ್ಲಿ ಸುಮಾರು ಐವತ್ತರಿಂದ ಅರವತ್ತು ಮಿಲಿಯ ವಿಕಲಚೇತನರಿದ್ದಾರೆ. ಇವರೆಲ್ಲರ ಮನೆಗಳಲ್ಲೂ ಇಂತಹುದೇ ಕತೆಯಿದೆ. ಅರುಣ್ ಶೌರಿ ಕೇಂದ್ರ ಸಚಿವರಾಗಿದ್ದಾಗ ವಿಕಲ ಚೇತನರಿಗೆ ಸಹಾಯವಾಗಬಲ್ಲ ಮೂರು ಪ್ರಮುಖ ಯೋಜನೆ ಮುಂದಿಟ್ಟಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಸಾರಿಗೆ ವ್ಯವಸ್ಥೆ ಹಾಗೂ ಇತರ ಸೇವೆಗಳಲ್ಲಿ ವಿಕಲಚೇತನರಿಗೆ ಸರಕಾರ ಮತ್ತು ಸಮಾಜ ವಿಶೇಷ ಸೌಲಭ್ಯ, ಪ್ರೀತಿ ಒದಗಿಸಬೇಕಿದೆ.

? ಬಿ. ಜಿ. ಅನಂತಶಯನ

ಸಲಹಾ ಸಂಪಾದಕ