ಮಡಿಕೇರಿ, ಫೆ. 25: ಭಾರತೀಯ ಸಂಸ್ಕøತಿಯಲ್ಲಿ ಹೆಣ್ಣಿಗೆ ಮಹತ್ವದ ಗೌರವಯುತ ಸ್ಥಾನಮಾನವಿದೆ. ಮಾತೃಸ್ವರೂಪಿಣಿಯಾಗಿ ಹೆಣ್ಣನ್ನು ಗೌರವಿಸುವ ಪರಂಪರೆ ಭಾರತೀಯ ಸಂಸ್ಕøತಿಯಲ್ಲಿದೆ. ಮಹಾಭಾರತದಲ್ಲಿ ದುರ್ಯೋಧನ ದ್ರೌಪದಿಯ ವಸ್ತ್ರಾಪಹರಣ ಸನ್ನಿವೇಶದ ಸಂದರ್ಭ ಭಗವಾನ್ ಶ್ರೀ ಕೃಷ್ಣ ತನ್ನ ಸಹೋದರಿಯಾದ ದ್ರೌಪದಿಯನ್ನು ರಕ್ಷಣೆ ಮಾಡುವ ದೃಶ್ಯವೇ ಹೆಣ್ಣಿಗೆ ಪೂಜನೀಯ ಸ್ಥಾನ ಕಲ್ಪಿಸಿರುವದರ ನಿದರ್ಶನ. ಅದೇ ದೃಶ್ಯವನ್ನು ಇಟ್ಟುಕೊಂಡು ಹೆಣ್ಣಿಗೆ ಸಮಾಜದಲ್ಲಿ ಗೌರವ ನೀಡುವದರೊಂದಿಗೆ ಸಮಾನತೆಯಿಂದ ಕಾಣುವಂತಹ ಸಂದೇಶ ರವಾನಿಸುವ ‘ಕೊಡೆÉಗಳು ಮತ್ತು ದುಶ್ಯಾಸನ...’ ಎಂಬ ನಾಟಕ ಅರ್ಥಪೂರ್ಣವಾಗಿತ್ತು.
ಬಿಸಿಲಿನ ಬೇಗೆಯಿಂದ ನೀರಿಲ್ಲದೆ ತತ್ತರಿಸಿರುವ ರೈತರು, ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳು ಆಹಾರವಿಲ್ಲದೆ ಪರದಾಡುವ ಪರಿಸ್ಥಿತಿ... ಜನಜೀವನ ಪಡುತ್ತಿರುವ ಬವಣೆಯಿಂದ ಬಚವಾಗಬೇಕಾದರೆ ಮಳೆಯ ಅವಶ್ಯಕತೆಯಿದ್ದು, ಮಳೆ ಬರಬೇಕಾದರೆ ಪರಿಸರವನ್ನು ಉಳಿಸುವದರೊಂದಿಗೆ ಕಾಡು ಬೆಳೆಸಿ... ಎನ್ನುವ ಸಂದೇಶವಿರುವ ಬೀದಿ ನಾಟಕಗಳನ್ನು ಮಡಿಕೇರಿ ನಗರದ ಬಾಲಮಂದಿರದ ಮಕ್ಕಳು ಹಾಸ್ಯಭರಿತವಾಗಿ ಮನೋಜ್ಞವಾಗಿ ನಟಿಸುವದರೊಂದಿಗೆ ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ಸೇರಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರನ್ನು ಮನಸೂರೆಗೊಳಿಸಿದರು.
ಜಿಲ್ಲಾ ಬಾಲಭವನ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಕೆ.ವಿ. ಸುಬ್ಣಣ್ಣ ರಂಗ ಸಮೂಹ ಆಯೋಜಿಸಿದ ಮಕ್ಕಳ ನಾಟಕ ಪ್ರದರ್ಶನ ಅಭಿರಂಗ ಕಾರ್ಯಕ್ರಮದಲ್ಲಿ ನಂದಕುಮಾರ್ ನಿರ್ದೇಶಿಸಿದ ‘ಕೊಡೆಗಳು ಮತ್ತು ದುಶ್ಯಾಸನ’ ಹಾಗೂ ಸತೀಶ್ ನಿರ್ದೇಶಿಸಿದ ‘ಬಾರಯ್ಯ ಮಳೆರಾಯ’ ಬೀದಿ ನಾಟಕಗಳು ಮಕ್ಕಳಿಂದ ಪ್ರದರ್ಶನಗೊಂಡಿತು.
ಬೀದಿ ನಾಟಕಕ್ಕೆ ಜಿ.ಪಂ. ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಚಾಲನೆ ನೀಡಿದರು. ಈ ಸಂದರ್ಭ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲೇಸ್ವಾಮಿ, ಇಲಾಖೆಯ ಅಧಿಕಾರಿ ಮುಮ್ತಾಜ್, ಬಾಲಕರ ಬಾಲಮಂದಿರದ ಅಧೀಕ್ಷಕ ಹರೀಶ್, ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಗುರುರಾಜ್, ಶಿಕ್ಷಕರು ಹಾಗೂ ಇತರರು ಇದ್ದರು.