ಕುಶಾಲನಗರ, ಫೆ. 24 : ಕುಶಾಲನಗರದಲ್ಲಿ ನಡೆದ ಮಹೇಶ್ ಕೊಲೆ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಮಹೇಶನೊಂದಿಗೆ ಕೆಲಸ ಮಾಡುತ್ತಿದ್ದ ರಘುನೊಂದಿಗೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅಡ್ಡಿಯಾಗಿದ್ದ ತನ್ನ ಪತಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ ಮೃತನ ಪತ್ನಿ ಅಶ್ವಿತ ಮತ್ತು ಆರೋಪಿಗಳಾದ ರಘು ಮತ್ತು ಕಿರಣ ಅವರುಗಳನ್ನು ಹೆಚ್ಚಿನ ವಿಚಾರಣೆಗಾಗಿ ಕುಶಾಲನಗರ ಪೊಲೀಸರ ವಶಕ್ಕೆ ನ್ಯಾಯಾಲಯ ನೀಡಿದೆ. ಕುಶಾಲನಗರ ಪಟ್ಟಣದಲ್ಲಿ ನಡೆದ ಮಹೇಶ್ ಕೊಲೆ ಪ್ರಕರಣ ಸಂಬಂಧ ಪತ್ನಿ ಸೇರಿದಂತೆ ಮೂವರನ್ನು ಶುಕ್ರವಾರ ಬಂಧಿಸಿ ಮಡಿಕೇರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಕುಶಾಲನಗರದ ನೇತಾಜಿ ಬಡಾವಣೆಯಲ್ಲಿ ವಾಸವಾಗಿದ್ದ ಮಹೇಶ್‍ನನ್ನು ಪತ್ನಿ ತನ್ನ ಪ್ರಿಯಕರ ರಘುನೊಂದಿಗೆ ಸೇರಿ ಕೊಲೆ ಮಾಡಿದ ಬಗ್ಗೆ ವಿಚಾರಣೆ ಸಂದರ್ಭ ಮಾಹಿತಿ ಹೊರಬಿದ್ದಿದೆ. ಮನೆಯಲ್ಲಿ ಮಲಗಿದ್ದ ಮಹೇಶನನ್ನು ಕುತ್ತಿಗೆಗೆ ಬೆಲ್ಟ್ ಬಿಗಿದು ಸಾಯಿಸಿರುವದಾಗಿ ಆರೋಪಿಗಳು ತನಿಖೆ ಸಂದರ್ಭ ತಪ್ಪೊಪ್ಪಿಕೊಂಡಿದ್ದಾರೆ.

ಮಹೇಶನ ಪತ್ನಿ ಅಶ್ವಿತ ಸೂಚನೆಯಂತೆ ತಾ. 21 ರಂದು ಬೆಳಿಗ್ಗೆ 7 ಗಂಟೆ ಸಮಯಕ್ಕೆ ಆರೋಪಿಗಳಾದ ರಘು ಮತ್ತು ಕಿರಣ

(ಮೊದಲ ಪುಟದಿಂದ) ಮನೆಗೆ ಬಂದು ಮಹೇಶನನ್ನು ಕೊಲೆ ಮಾಡಿದ್ದಾರೆ. ಕೊಲೆ ನಂತರ ಮೃತದೇಹವನ್ನು ಮನೆಯಲ್ಲೇ ಇರಿಸಿ ಆರೋಪಿಗಳಾದ ರಘು ಮತ್ತು ಕಿರಣ ಮಹೇಶನಿಗೆ ಸೇರಿದ ಕಾರನ್ನು ಒಯ್ದಿದ್ದು ಹೆಣ ಸಾಗಿಸಲು ಯೋಜನೆ ರೂಪಿಸಿದ್ದಾರೆ. ಈ ನಡುವೆ ತನ್ನ ಪತಿ ಕಾಣೆಯಾಗಿರುವದಾಗಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ ಅಶ್ವಿತ ಸತ್ಯಾಂಶ ತಿಳಿಯುತ್ತಲೇ ಬಂಧನಕ್ಕೊಳಗಾಗಿದ್ದಳು.

ಬುಧವಾರ ರಾತ್ರಿ ಹೆಣವನ್ನು ಮನೆಯಿಂದ ಸಾಗಿಸಲು ಅಶ್ವಿತ 10 ಸಾವಿರ ರೂ.ಗಳನ್ನು ಆರೋಪಿಗಳಿಗೆ ನೀಡಿ ಮಹೇಶನಿಗೆ ಸೇರಿದ ಕಾರಿನಲ್ಲಿ ಹೆಣವನ್ನು ಸಾಗಿಸಲು ಸಹಕರಿಸಿದ್ದಾಳೆ ಎನ್ನುವದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಇದೀಗ ಮೂವರು ಆರೋಪಿಗಳನ್ನು ಕುಶಾಲನಗರ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು ತನಿಖೆ ಮುಂದುವರೆದಿದೆ. ಮೃತದೇಹವನ್ನು ಎಸೆದು ಬರುವ ಸಂದರ್ಭ ಕಾರನ್ನು ಸುಳ್ಯ ಬಳಿ ಆರೋಪಿಗಳು ಬಿಟ್ಟು ಬಂದಿದ್ದು ಕುಶಾಲನಗರ ಠಾಣೆಗೆ ಪೊಲೀಸರು ತಂದಿದ್ದಾರೆ.

ಕೊಲೆಯಾದ ಮಹೇಶನ ಮೃತದೇಹವನ್ನು ಉಪ್ಪಿನಂಗಡಿಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದ್ದು, ಆತನ ಮೂಲವಾದ ಕೆ.ಆರ್.ನಗರ ಬಳಿಯ ಮಳಲಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.

ಗಂಡ ಹೆಂಡಿರ ಮನಸ್ತಾಪದೊಂದಿಗೆ ಇತ್ತ ಇಬ್ಬರು ಪುಟ್ಟ ಮಕ್ಕಳು ಮಾತ್ರ ಅನಾಥರಾಗಿರುವ ದೃಶ್ಯ ಕಂಡುಬಂದಿದೆ. ತಂದೆ ಕೊಲೆಯಾಗಿದ್ದು ತಾಯಿ ಜೈಲು ಸೇರಿದ ನಡುವೆ ಹಿರಿಯ ಪುತ್ರ ಪ್ರತೀಕ್ ಕೊಡಗರಹಳ್ಳಿಯ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇನ್ನೊಂದು ಒಂದೂವರೆ ವರ್ಷದ ಮಗು ಏನೂ ಅರಿಯದ ಸ್ಥಿತಿಯಲ್ಲಿ ಸಂಬಂಧಿಕರ ಮಡಿಲಿನಲ್ಲಿ ಆಟವಾಡುತ್ತಿರುವ ದೃಶ್ಯ ಗೋಚರಿಸಿತು.

- ವರದಿ: ಸಿಂಚು