ಮಡಿಕೇರಿ, ಫೆ. 25: ಶ್ರೀ ತಲಕಾವೇರಿ-ಭಗಂಡೇಶ್ವರದೇವಾಲಯ ಅಷ್ಟ ಬಂಧ ಕಲಶೋತ್ಸವ ಸಮಿತಿಯನ್ನು ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ತಾ. 27.4.2017 ರಂದು ರಚಿಸಿ ಆದೇಶ ಹೊರಡಿಸಿದ್ದರು. ಆದರೆ, ಈ ಸಮಿತಿ ರಚಿಸಿ 8 ತಿಂಗಳಾದ ಬಳಿಕವೂ ಕಾರ್ಯ ನಿರ್ವಹಣೆ ಮಾಡಲು ಅವಕಾಶ ಕೊಡಲಿಲ್ಲ ಎಂದು ಆರೋಪಿಸಿ ಸಮಿತಿ ಪ್ರಮುಖರು ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತಾ. 31.1.2018 ರಂದು ರಿಟ್ ಅರ್ಜಿ ಸಲ್ಲಿಸಿದ್ದರು.ಈ ರಿಟ್ ಅರ್ಜಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ಇದೀಗ ವಜಾಗೊಳಿಸಿ ಜಿಲ್ಲಾಡಳಿತದ ಪರವಾಗಿ ತೀರ್ಪು ಪ್ರಕಟಿಸಿದೆ.
ಸಮಿತಿಯ ಪರವಾಗಿ ಎಂ.ಬಿ. ದೇವಯ್ಯ, ಎಂ.ಎ. ನಾಣಯ್ಯ. ಎಂ.ಬಿ. ಕುಮಾರ್, ಸಿ.ಜಿ. ಸತೀಶ್, ಕೆ. ರಮೇಶ್ ಮುದ್ದಯ್ಯ,, ಬಿ. ರಮೇಶ್ ಚೆಂಗಪ್ಪ ಹಾಗೂ ಕೆ. ಫ್ಯಾನ್ಸಿ ಗಣಪತಿ ನ್ಯಾಯಾಲಯದ ಮೊರೆ ಹೋಗಿದ್ದರು.
ಕೊಡಗು ಜಿಲ್ಲಾಧಿüಕಾರಿ, ಧಾರ್ಮಿಕ ದತ್ತಿ ಇಲಾಖಾ ರಾಜ್ಯ ಆಯುಕ್ತರು ಹಾಗೂ ಭಾಗಮಂಡಲ-ತಲಕಾವೇರಿ ದೇವಾಲಯದ ಆಗಿನ ಆಡಳಿತಾಧಿಕಾರಿಯಾಗಿದ್ದ ಅಪರ ಜಿಲ್ಲಾಧಿಕಾರಿಯವರನ್ನು ಪ್ರತಿವಾದಿಗಳಾಗಿ ಪರಿಗಣಿಸಿದ್ದರು.
ತಲಕಾವೇರಿ-ಭಾಗಮಂಡಲ ದೇವಾಲಯಗಳನ್ನು 2005 ರ ಸಾಲಿನಲ್ಲಿ ಕಾವೇರಿ ನೀರಾವರಿ ನಿಗಮದಿಂದ ಜೀರ್ಣೋದ್ಧಾರ ಮಾಡಲಾಗಿತ್ತು. 12 ವರ್ಷಗಳ ಬಳಿಕ ಧಾರ್ಮಿಕ ಸಂಪ್ರದಾಯದಂತೆ ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟ ಬಂಧ- ಬ್ರಹ್ಮ ಕಲಶ ಕಾರ್ಯಕ್ರಮವನ್ನು ನೆರವೇರಿಸುವ ಸಲುವಾಗಿ ನೂತನ ಸಮಿತಿಯೊಂದನ್ನು ರಚಿಸಲಾಗಿತ್ತು.
ಆದರೆ ಸಮಿತಿ ರಚನೆಗೊಂಡ ಬೆನ್ನಲ್ಲೇ ಎಲ್ಲ ವರ್ಗದ ಜನರಿಗೆ ಸಮಿತಿಯಲ್ಲಿ ಪ್ರ್ರಾತಿನಿಧ್ಯ ದೊರಕಿಲ್ಲ, ಭಾಗಮಂಡಲದ ಸ್ಥಳೀಯರನ್ನೂ ಪರಿಗಣಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಜಿಲ್ಲಾಧಿಕಾರಿಯವರು ಆದೇಶವೊಂದನ್ನು ಹೊರಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಎಲ್ಲ ವರ್ಗದ ಜನರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಮುಂದಿನ ಆದೇಶ ಬರುವವರೆಗೆ ಯಾವದೇ ಕ್ರಮ ವಹಿಸದಿರುವಂತೆ ದೇವಸ್ಥಾನ ಕಾರ್ಯ ನಿರ್ವಾಹಣಾಧಿಕಾರಿಯವರಿಗೆ ಲಿಖಿತ ಸೂಚನೆ ನೀಡಿದ್ದರು. ನ್ಯಾಯಾಧೀಶರು ಈ ಬೆಳವಣಿಗೆಯನ್ನು ಗಮನಿಸಿ ರಿಟ್ ಅರ್ಜಿಯನ್ನು ವಜಾಗೊಳಿಸಿ ರುವದರಿಂದ ಈ ಸಮಿತಿ ತನ್ನ ಅಸ್ತಿತ್ವ ಕಳೆದುಕೊಂಡಂತಾಗಿದೆ.