ಮಡಿಕೇರಿ, ಫೆ. 25 : ಜಿಲ್ಲೆಯ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿರುವ ರ್ಯಾಫ್ಟಿಂಗ್‍ನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಕೆಲವು ಉದ್ಯಮಿಗಳು ಕುತಂತ್ರ ನಡೆಸುತ್ತಿದ್ದು, ರ್ಯಾಫ್ಟಿಂಗ್ ಕೇಂದ್ರಗಳನ್ನು ಟೆಂಡರ್ ಮೂಲಕ ನೀಡಿದಲ್ಲಿ ಸ್ಥಳೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ರ್ಯಾಫ್ಟಿಂಗ್ ಕೇಂದ್ರದ ಮಾಲೀಕ ಹಾಗೂ ಗುಡ್ಡೆಹೊಸೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚಿದಾನಂದ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿಗಳು ಮಾತ್ರ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲಿದ್ದು, ಟೆಂಡರ್ ಪ್ರಕ್ರಿಯೆಯಿಂದ ಯುವ ಸಮೂಹ ಬೀದಿ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ದುಬಾರೆಯಲ್ಲಿ ಪ್ರವಾಸಿಗನೊಬ್ಬನ ಮೇಲೆ ನಡೆದ ಹಲ್ಲೆ ಪ್ರಕರಣದ ಬಳಿಕ ಕಳೆದ ಎರಡು ವಾರಗಳಿಂದ ರ್ಯಾಫ್ಟಿಂಗ್ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿದೆ. ಇದರ ಹಿಂದೆ ಈ ಉದ್ಯಮವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.

ಕೊಡಗು ಇಂದು ಪ್ರವಾಸೋದ್ಯಮದಲ್ಲಿ ವಿಶ್ವ ಪ್ರಸಿದ್ಧಿ ಪಡೆಯಲು ರ್ಯಾಫ್ಟಿಂಗ್ ಕೂಡಾ ಕಾರಣವಾಗಿದೆ. ರ್ಯಾಫ್ಟಿಂಗ್ ನಡೆಸುವವರು ಸಕ್ಷಮ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆದು ಅದನ್ನು ನಡೆಸುತ್ತಿದ್ದು, ಎಲ್ಲಾ ರ್ಯಾಫ್ಟಿಂಗ್ ಕೇಂದ್ರಗಳು ಇನ್ಸೂರೆನ್ಸ್‍ನಿಂದ ರಕ್ಷಿಸಲ್ಪಟ್ಟಿವೆ. ಅಲ್ಲದೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಸುಮಾರು 900ರಿಂದ 1000 ಕುಟುಂಬಗಳಿಗೆ ಉದ್ಯೋಗವನ್ನೂ ನೀಡಿದೆ ಎಂದು ವಿವರಿಸಿದರು.

ಇಂತಹ ಒಂದು ಉದ್ಯಮವನ್ನು ಇಂದು ಕೆಲವು ಉದ್ಯಮಿಗಳು ತಮ್ಮ ತೆಕ್ಕೆಗೆ ಪಡೆಯುವ ಹುನ್ನಾರವನ್ನು ನಡೆಸುತ್ತಿದ್ದು, ರ್ಯಾಫ್ಟಿಂಗ್ ಕೇಂದ್ರಗಳನ್ನು ಟೆಂಡರ್ ಮೂಲಕ ನೀಡಲು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿವೆ. ಜಿಲ್ಲಾಡಳಿತ ಸತ್ಯಾಂಶ ಗಳನ್ನು ಪರಿಶೀಲಿಸಿ, ಉದ್ಯಮಿಗಳಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವದನ್ನು ತಡೆಯಬೇಕಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಗಣಪತಿ, ವಿನೋದ್ ಸಿದ್ದಯ್ಯ, ರಾಮು ಹಾಗೂ ಉಮೇಶ್ ಉಪಸ್ಥಿತರಿದ್ದರು.