ಸೋಮವಾರಪೇಟೆ, ಫೆ. 25: ಒಂದೆಡೆ ಒಣಗಿ ನಿಂತಿರುವ ಅರಣ್ಯ,, ಎಲ್ಲೆಲ್ಲೂ ಬೋಳು ಬೋಳಾದ ಮರಗಳು.., ನೆಲದ ಮೇಲೆಲ್ಲಾ ಒಣಗಿದ ತರಗೆಲೆಗಳು.., ಇವನ್ನೂ ದಾಟಿ ಹಚ್ಚಹಸಿರಿನಂತಿರುವ ಕಾಫಿ ತೋಟಕ್ಕೆ ತೆರಳಲು ಸೋಲಾರ್ ಬೇಲಿಯ ತಡೆ. ಪರಿಣಾಮ ಅನ್ಯ ಮಾರ್ಗವಿಲ್ಲದೇ ಜನವಸತಿ/ಕೃಷಿ ಪ್ರದೇಶಕ್ಕೆ ಲಗ್ಗೆ.., ಫಸಲು ನಷ್ಟ.., ಜನತೆಗೆ ಜೀವ ಭಯ..!ಇಂತಹ ಸನ್ನಿವೇಶ ಇದೀಗ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಮಾನ್ಯವೆನಿಸಿವೆ. ಈ ಭಾಗದ ಜನರು ಕಾಡಾನೆಗಳೊಂದಿಗೆ ಪ್ರತಿದಿನ ಕಾಲ ಕಳೆÉಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋವರ್‍ಕೊಲ್ಲಿ-ಐಗೂರು ಮಾರ್ಗದಲ್ಲಿ ಅರಣ್ಯದಿಂದ ಟಾಟಾ ಕಾಫಿ ತೋಟಕ್ಕೆ-ತೋಟದಿಂದ ಅರಣ್ಯಕ್ಕೆ ಪ್ರತಿದಿನ ಸಂಚರಿಸುತ್ತಿದ್ದ ಕಾಡಾನೆಗಳು ಇತ್ತೀಚೆಗೆ ಐಗೂರು, ಕಾಜೂರು, ಯಡವಾರೆ ಭಾಗದ ಜನವಸತಿ ಪ್ರದೇಶಗಳತ್ತ ಲಗ್ಗೆಯಿಡುತ್ತಿವೆ.
ಬಿಸಿಲ ತಾಪಕ್ಕೆ ಅರಣ್ಯದಲ್ಲಿರುವ ತೇಗದ ಮರಗಳು ಒಣಗಿಹೋಗಿದ್ದು, ಎಲೆಗಳನ್ನೆಲ್ಲಾ ಉದುರಿಸಿಕೊಂಡು ಬಟಾಬಯಲಾಗಿದೆ. ಒಣಗಿದ ಎಲೆಗಳು ಅರಣ್ಯದಲ್ಲಿ ಹಾಸಿದಂತೆ ಕಂಡುಬರುತ್ತಿದ್ದು, ಆಗಾಗ್ಗೆ ಕಾಡ್ಗಿಚ್ಚಿಗೆ ಒಳಗಾಗುತ್ತಿವೆ. ಕುಡಿಯಲು ನೀರು/ತಿನ್ನಲು ಆಹಾರವೂ ಇಲ್ಲದೇ ಇರುವ ಸನ್ನಿವೇಶದಲ್ಲಿ ಕಾಫಿ ತೋಟಕ್ಕೆ ಲಗ್ಗೆಯಿಡುತ್ತಿದ್ದ ಕಾಡಾನೆಗಳು ಅಲ್ಲಿ ದೊರಕುತ್ತಿದ್ದ ಹಲಸು, ಬೈನೆ, ಇತ್ಯಾದಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೆ, ತೋಟದೊಳಗೆ ನಿತ್ಯ ತುಂಬಿರುತ್ತಿದ್ದ ಕೆರೆಯಲ್ಲಿ ನೀರು ಕುಡಿದು ಬಾಯಾರಿಕೆ ಹೋಗಲಾಡಿಸಿಕೊಳ್ಳುತ್ತಿದ್ದವು.
ಆದರೆ ಪ್ರಸಕ್ತ ವರ್ಷ ಈ ಪರಿಸ್ಥಿತಿ ಬದಲಾಗಿದ್ದು, ತೋಟಕ್ಕೆ ತೆರಳದ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ. ಮನೆ ಮುಂದೆ ಬೆಳೆದ ತೆಂಗು, ಬಾಳೆ, ಕಾಫಿ ತೋಟದೊಳ ಗಿರುವ ಕೃಷಿ ಫಸಲು, ಗದೆಯಲ್ಲಿ ಬೆಳೆಯಲಾಗಿರುವ ಭತ್ತದ ಪೈರುಗಳನ್ನು ತಿಂದು ನಾಶಗೊಳಿಸುತ್ತಿವೆ.
ಅರಣ್ಯ ಇಲಾಖೆಯಿಂದ ಅರಣ್ಯದ ಅಂಚಿನಲ್ಲಿ ಆನೆ ಕಂದಕ ತೆರೆಯಲಾಗಿದ್ದರೂ ಕಾಜೂರಿನ ಕೆಲ ಭಾಗದಲ್ಲಿ ಹಾಗೆಯೇ ಬಿಡಲಾಗಿದೆ. ಇತ್ತ ಅರಣ್ಯದೊಳಗೆ ಹಸಿರು ಮಾಯವಾಗಿ ಒಣ ಪ್ರದೇಶದಂತಾ ಗಿರುವ ಹಿನ್ನೆಲೆ ಆನೆ ಕಂದಕ ಸಮರ್ಪಕವಾಗಿಲ್ಲದ ಕಡೆಗಳಿಂದ ಆನೆಗಳು ಅರಣ್ಯದಿಂದ ಹೊರಬರುತ್ತಿವೆ.
ಈ ಹಿಂದೆ ಅರಣ್ಯದಿಂದ ನೇರವಾಗಿ ಟಾಟಾ ಕಾಫಿ ಎಸ್ಟೇಟ್‍ಗೆ ತೆರಳುತ್ತಿದ್ದ ಕಾಡಾನೆಗಳಿಗೆ ಈ ವರ್ಷದಿಂದ ಸೋಲಾರ್ ಬೇಲಿ ತಡೆಯಾಗಿದೆ. ಕೋವರ್‍ಕೊಲ್ಲಿಯಿಂದ ಐಗೂರುವರೆಗೆ ಹಬ್ಬಿರುವ ತೋಟದ ಬೇಲಿಗೆ ಸೋಲಾರ್ ಅಳವಡಿಸಿರು ವದರಿಂದ ಕಾಡಾನೆಗಳಿಗೆ ದಿಕ್ಕು ತೋಚದಂತಾಗಿ ಐಗೂರು, ಕಾಜೂರು, ಯಡವಾರೆಗಳಿಗೆ ತೆರಳುತ್ತಿವೆ.
ಅರಣ್ಯದಾದ್ಯಂತ ತೇಗದ ಮರಗಳನ್ನು ಬೆಳೆಸಿರುವ ಅರಣ್ಯ ಇಲಾಖೆ, ವನ್ಯ ಪ್ರಾಣಿಗಳಿಗೆ ಅತೀ ಅಗತ್ಯವಾಗಿ ಬೇಕಾದ ಆಹಾರ, ನೀರಿನ ಮೂಲಗಳನ್ನು ಒದಗಿಸುವಲ್ಲಿ ದಡ್ಡತನ ಪ್ರದರ್ಶಿಸಿದ ಪರಿಣಾಮ ಆನೆ-ಮಾನವ ಸಂಘರ್ಷ ಹಿಂದಿನಿಂದಲೂ ನಡೆಯುತ್ತಲೇ ಇದೆ.
ಯಥೇಚ್ಚ ತೇಗದ ಮರಗಳಿರುವ ಅರಣ್ಯದಲ್ಲಿ ಲಂಟಾನವನ್ನು ಹೊರತುಪಡಿಸಿ ವನ್ಯಪ್ರಾಣಿಗಳಿಗೆ ಆಹಾರವಾಗುವ ಬೇರಿನ್ಯಾವದೇ ಗಿಡಗಳು ಬೆಳೆಯುತ್ತಿಲ್ಲ. ಆಹಾರ ಒದಗಿಸುವ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆಯೂ ಮುಂದಾ ಗುತ್ತಿಲ್ಲ. ಇತ್ತೀಚೆಗಷ್ಟೇ ಕಾಜೂರಿನ ಅರಣ್ಯದಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆ ವತಿಯಿಂದ ಕೆರೆಯನ್ನು ತೋಡಲಾಗಿದ್ದು, ಒಂದಿಷ್ಟು ನೀರು ಸಂಗ್ರಹವಿದೆ.
ಆದರೆ ಕಾಡಾನೆಗಳಿಗೆ ಬೇಕಾದ ಆಹಾರ ಮಾತ್ರ ಸಾವಿರಾರು ಏಕರೆ ಅರಣ್ಯ ಪ್ರದೇಶ ಹುಡುಕಾಡಿದರೂ ಲಭಿಸುವದಿಲ್ಲ. ಪರಿಣಾಮ ಈ ಭಾಗದಲ್ಲಿ ಬೀಡುಬಿಟ್ಟಿರುವ ಮೂರರಿಂದ ನಾಲ್ಕು ಕಾಡಾನೆಗಳು ಸೋಲಾರ್ ಬೇಲಿಯಿಂದ ಕಾಫಿ ಎಸ್ಟೇಟ್‍ನೊಳಗೆ ಹೋಗಲಾಗದೇ, ಇತ್ತ ಅರಣ್ಯದಲ್ಲೂ ಇರಲಾರದೇ ಜನವಸತಿ ಪ್ರದೇಶಕ್ಕೆ ಲಗ್ಗೆಯಿಟ್ಟು ಬಾಳೆ, ಭತ್ತ ಸೇರಿದಂತೆ ಇತರ ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ.
ಇತ್ತೀಚಿನ ದಿನಗಳಲ್ಲಿ ಹಣ್ಣು ಕಾಫಿಯನ್ನೂ ಬಿಡದ ಕಾಡಾನೆಗಳು, ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಕಾಫಿ ಹಣ್ಣನ್ನೂ ತಿನ್ನುತ್ತಿವೆ. ಕೆಲ ಭಾಗದಲ್ಲಿ ರೋಬಸ್ಟಾ ಕಾಫಿಯನ್ನು ಕೊಯ್ಲು ಮಾಡದೇ ಹಾಗೆಯೇ ಬಿಡಲಾಗಿದ್ದು, ಆನೆಗಳಿಗೆ ಆಹಾರವಾಗುತ್ತಿವೆ.
ಒಟ್ಟಾರೆ ಒಂದೆಡೆ ಒಣಗಿದ ಅರಣ್ಯ-ಮತ್ತೊಂದೆಡೆ ಸೋಲಾರ್ ಬೇಲಿಯ ನಡುವೆ ಕಾಡಾನೆಗಳು ಗ್ರಾಮಗಳತ್ತ ಧಾಳಿ ಇಡುತ್ತಿವೆ. ಅರಣ್ಯ ಇಲಾಖೆ ಪಟಾಕಿ ಹೊಡೆಯುವದು, ಆನೆ ಕಂದಕ ದುರಸ್ತಿಯ ನೆಪದಲ್ಲೇ ಕಾಲ ಕಳೆಯುತ್ತಿದೆ. ಅಕಸ್ಮಾತ್ ಆನೆ ಧಾಳಿಯಿಂದ ಮಾನವ ಪ್ರಾಣ ಹಾನಿಯಾದರೆ ಅರಣ್ಯ ಇಲಾಖೆ ಪರಿಹಾರ ಕೊಡುತ್ತದೆ..,ಆದರೆ ಮರಳಿ ಪ್ರಾಣ ಕೊಡುವ ಶಕ್ತಿ ಅರಣ್ಯ ಇಲಾಖೆಗೆ ಇದೆಯೇ? ಎಂಬ ಪ್ರಶ್ನೆ ಈ ಭಾಗದ ಸಾರ್ವಜನಿಕರದ್ದು.
ತಕ್ಷಣ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಮೂಲಕ ಅವುಗಳಿಗೆ ಅಲ್ಲಿಯೇ ಆಹಾರ ನೀರು ಒದಗಿಸಬೇಕು. ಕಾಡಾನೆಗಳ ಉಪಟಳದಿಂದ ಜನಸಾಮಾನ್ಯರನ್ನು ಪಾರು ಮಾಡಬೇಕು ಎಂದು ಐಗೂರಿನ ದಿನೇಶ್, ವಿಜಯ ಕುಮಾರ್, ಮಹೇಶ್, ಕಾಜೂರಿನ ಅವಿಲಾಶ್, ಮೀನಾಕ್ಷಿ ಸೇರಿದಂತೆ ಇತರರು ಪತ್ರಿಕೆ ಮೂಲಕ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
- ವಿಜಯ್ ಹಾನಗಲ್