ಗೋಣಿಕೊಪ್ಪಲು,ಫೆ. 25 : ಕತ್ತಲ ನಡುವೆ ಬೆಳಕು ಮೂಡಿಸಿದ ವಿದ್ಯಾರ್ಥಿಗಳು, ಮಂಜಿನ ಹನಿಗಳ ನಡುವೆ ಮೂಡಿದ ನೃತ್ಯಗಳು, ಮನತಣಿಸಿದ ರಾಮಾಯಣ ರೂಪಕ, ಪ್ರೇಕ್ಷಕನ ಎದೆಝಲ್ಲೆನಿಸಿದ ಮಲ್ಲಕಂಬ, ರೋಮಾಂಚನ ಮೂಡಿಸಿದ ಸ್ಟಿಕ್ ಡ್ಯಾನ್ಸ್.ಆಳ್ವಾಸ್ ನುಡಿಸಿರಿ, ವಿರಾಸತ್ ಕೊಡಗು ಘಟಕ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಿನ್ನೆ ರಾತ್ರಿ ನಡೆದ ಆಳ್ವಾಸ್ ಸಾಂಸ್ಕøತಿಕ ವೈಭವಕ್ಕೆ ಸಾವಿರಾರು ಮಂದಿ ಕಲಾಭಿಮಾನಿಗಳು ಸಾಕ್ಷಿಯಾದರು. ಒಂದರ ಹಿಂದೆ ಒಂದರಂತೆ 15ಕ್ಕೂ ಹೆಚ್ಚು ನೃತ್ಯ ಪ್ರ್ರಾಕಾರಗಳನ್ನು ಅಳ್ವಾಸ್ ಶಿಕ್ಷಣ ಸಂಸ್ಥೆಯ 350ಕ್ಕೂ ಅಧಿಕ ವಿದ್ಯಾರ್ಥಿಗಳು ನಡೆಸಿಕೊಡುವ ಮೂಲಕ ಪ್ರಶಂಸೆ ಪಡೆದರು. ಅಂತರ್ರಾಷ್ಟ್ರೀಯ ಮಟ್ಟದ ಕಲಾ ಪ್ರ್ರಾಕಾರಗಳನ್ನು ವೇದಿಕೆ ಮೇಲೆ ತಂದ ವಿದ್ಯಾರ್ಥಿಗಳು ಜನಮನ ಗೆದ್ದರು. ಸೂರ್ಯ ಮುಳುಗಿ ಕತ್ತಲು ಆವರಿಸುವ ಸಮಯದಲ್ಲಿ ಬೆಳಕಿನಂತೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳ ನೃತ್ಯ ಹೊಸತನ ಮೂಡಿಸಿತು. ಸುಮಾರು 5 ಸಾವಿರಕ್ಕೂ ಹೆಚ್ಚಿನ ಕಲಾಭಿಮಾನಿಗಳು ನೃತ್ಯಪಟುಗಳ ಪ್ರತಿಭೆಗೆ ಬೆರಗಾದರು.
ಕೊಡಗಿನ ಉಮ್ಮತಾಟ್ ನೃತ್ಯ ಪ್ರದರ್ಶಿಸಿದ ವೀರಾಜಪೇಟೆಯ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಜನಮನ ಸೆಳೆದರು. ನಂತರ ಪ್ರಾರಂಭಗೊಂಡ ಆಳ್ವಾಸ್ ವಿದ್ಯಾರ್ಥಿಗಳ ನೃತ್ಯ ವೈಭವ ಬೆರಗು ಮೂಡಿಸಿತು. ಕೇರಳದ ಶಾಸ್ತ್ರೀಯ ನೃತ್ಯ ಮೋಹಿನಿಯಾಟ್ಟಂ ನೃತ್ಯ ಮಾಡಿದ ವಿದ್ಯಾರ್ಥಿಗಳು ಗಣೇಶನನ್ನು ನೆನೆದು ಭಕ್ತಿಯ ಮಳೆ ಸುರಿಸಿದರು. ಶ್ರೀ ರಾಮ ಪಟ್ಟಾಭೀಷೆಕ, ರಾಮಾಯಣ ರೂಪಕವನ್ನು ಬಡಗತಿಟ್ಟು ಯಕ್ಷಗಾನದ
(ಮೊದಲ ಪುಟದಿಂದ) ಮೂಲಕ ಪ್ರಸ್ತುತ ಪಡಿಸಿ ದೇವಲೋಕವನ್ನೇ ವಿದ್ಯಾರ್ಥಿಗಳು ಧರೆಗಿಳಿಸಿದರು. ರಾಮ, ಲಕ್ಷ್ಮಣ, ಸೀತಾ, ರಾವಣ, ಮಂಥರೆ ಬಂದು ಹೋಗುವ ಸನ್ನಿವೇಶ ಅಚ್ಚುಕಟ್ಟಾಗಿ ಮೂಡಿಬಂತು. ಗಂಡುಕಲೆ ಮಲ್ಲಕಂಬ ಎದೆಝಲ್ಲೆನಿಸಿತು. ತರಬೇತಿ ಹೊಂದಿದ 30 ವಿದ್ಯಾರ್ಥಿಗಳು ಕಂಬದ ಮೇಲೆ ಕಸರತ್ತು ಮಾಡಿ ಪ್ರತಿಭೆ ಹೊರಹಾಕಿದರು ಪುಟಾಣಿ ಬಾಲಕಿಯರು ಹಗ್ಗದ ಮೇಲೆ ಸಾಹಸ ಮಾಡಿದರು. ತಲೆಯಮೇಲೆ ಮಡಿಕೆ ಹಾಗೂ ಕೈಯಲ್ಲಿ ಕೋಲು ಹಿಡಿದು ಆಂದ್ರದ ಜಾನಪದ ಪ್ರಾಕಾರ ಬಂಜಾರ ನೃತ್ಯ ನೋಡಿ ಪ್ರೇಕ್ಷಕರು ಕೂಡ ಹೆಜ್ಜೆಹಾಕಿ ಸಂಭ್ರಮಿಸಿದರು. ಒಡಿಸ್ಸಾದ ಗೋಟಿಪುವ ಪ್ರದರ್ಶನ ಕಂಡು ಪ್ರೇಕ್ಷಕರು ಬೆರಗಾದರು ಸಾಹಸಮಯ ಭಂಗಿಗಳನ್ನು ನೃತ್ಯದಲ್ಲಿ ಅಳವಡಿಸಲಾಗಿತ್ತು. ಮಣಿಪುರಿ ಮೂಲದ ಸ್ಟಿಕ್ ಡ್ಯಾನ್ಸ್ ರೋಮಾಂಚನಕಾರಿಯಾಗಿತ್ತು ಮಾಯಲೋಕವನ್ನೇ ವೇದಿಕೆ ಮೇಲೆ ಸೃಷ್ಟಿ ಮಾಡಿದ ವಿದ್ಯಾರ್ಥಿಗಳ ಕಲೆಗೆ ಪ್ರೇಕ್ಷಕರು ಮನಸೋತರು ಸ್ಟಿಕ್‍ಡ್ಯಾನ್ಸ್‍ನೊಂದಿಗೆ ಬಿಬಾಯಿಂಗ್ ಪ್ರ್ರಾಕಾರ ಮಿಶ್ರಣ ಮಾಡಲಾಗಿತ್ತು ಬ್ಯಾಕ್ ಫ್ಲಿಪ್, ಈಗಲ್ ಪ್ಲಿಪ್, ಹೆಡ್‍ಸ್ಪಿನ್, ಅಲರಾಂ ಫ್ಲಿಪ್ ಸೇರಿದಂತೆ ವಿವಿಧ ರೀತಿಯ ಸಾಹಸಗಳನ್ನು ಮಾಡಲಾಯಿತು. ಭರತನಾಟ್ಯದ ಬೋ ಶಂಭೋ ಪ್ರಾಕಾರದ ಮೂಲಕ ಶಿವ ಗಂಗೆ ಸಂಬಂಧ ಹಾಗೂ ಋಷಿ ಮುನಿಗಳ ಗರ್ವಭಂಗ ಹೇಗಾಯಿತು ಎಂಬ ಕಥೆಯನ್ನು ಸಾರಲಾಯಿತು.
ಕಥಕ್ ನೃತ್ಯದ ಮೂಲಕ ರಂಗು ಮೂಡಿಸಿದ ವಿದ್ಯಾರ್ಥಿಗಳು ನಂತರ ದೋಲ್ ಚಲಮ್, ಮಹಾರಾಷ್ಟ್ರದ ಲಾವಣಿ, ಗುಜಾರಾತಿನ ಗಾರ್ಭ ಮತ್ತು ದಾಂಡಿಯಾ, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ, ತೆಂಕು ಯಕ್ಷ ಪ್ರಯೋಗ ನೃತ್ಯ ಮಾಡಿ ಜನಮನ ಸೆಳೆದರು. ಶ್ರೀಲಂಕಾದ ಕ್ಯಾಂದಿಯನ್ ನೃತ್ಯವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು ಬೆಂಕಿಯುಂಡೆಗಳನ್ನು ಉಗುಳುವ ಸಾಹಸವನ್ನು ನೃತ್ಯದಲ್ಲಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಅವರನ್ನು ಕೊಡಗಿನ ಒಡಿಕತ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ನುಡಿಸಿರಿ ಗೌರವಾಧ್ಯಕ್ಷ ಡಾ.ಶಿವಪ್ಪ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಗ್ರಾ.ಪಂ ಅಧ್ಯಕ್ಷೆ ಸೆಲ್ವಿ, ಜಿ.ಪಂ ಸದಸ್ಯ ಸಿ.ಕೆ ಬೋಪಣ್ಣ, ನುಡಿಸಿರಿ ಕಾರ್ಯಾಧ್ಯಕ್ಷ ಕೇಶವ ಕಾಮತ್, ಸಂಚಾಲಕ ಬಾಲಕೃಷ್ಣ ರೈ, ಶರೀನ್ ಸುಬ್ಬಯ್ಯ, ರಫೀಕ್ ತೂಚಮಕೇರಿ, ಪ್ರಧಾನ ಕಾರ್ಯದರ್ಶಿ ಸುಭಾಷ್ ನಾಣಯ್ಯ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ, ಕಾವೇರಿ ಕಾಲೇಜು ನಿವೃತ್ತ ಪ್ರಾಂಶುಪಾಲ ಇಟ್ಟೀರ ಬಿದ್ದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
-ರಾಕೇಶ್ ಕೊಡಗು