ಮಡಿಕೇರಿ, ಫೆ. 25: ಭಾರತೀಯ ಸೇನೆಯಲ್ಲಿ ಹತ್ತೊಂಬತ್ತು ವರ್ಷಗಳ ಕಾಲ ಸೇವೆಯೊಂದಿಗೆ, ರಜೆಯಲ್ಲಿ ಮನೆಗೆ ಬಂದು ಕರ್ತವ್ಯಕ್ಕೆ ಹಿಂತೆರಳುವ ಹಾದಿಯಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಯೋಧರೊಬ್ಬರ ಪತ್ನಿ ಸುದೀರ್ಘ ಮೂವತ್ತೇಳು ವರ್ಷಗಳ ಕಾನೂನು ಹೋರಾಟ ನಡೆಸಿ, ಸೇನೆಯಲ್ಲಿ ಪತಿ ಸಲ್ಲಿಸಿದ್ದ ಸೇವಾ ಭತ್ಯೆ ಪಡೆದಿರುವ ಅಪರೂಪದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.ಮಡಿಕೇರಿ ತಾಲೂಕು ಚೆಟ್ಟಿಮಾನಿ ಬಳಿಯ ಸಿಂಗತ್ತೂರು ಗ್ರಾಮದ ನಿವಾಸಿ, ತೆಕ್ಕಡ ಯು. ಬಾಲಕೃಷ್ಣ ಎಂಬ ಯೋಧನ ಪತ್ನಿ ನಂಜಮ್ಮ ಎಂಬವರೇ ಈ ದಿಟ್ಟ ನಾರಿ, ಇವರ ಪತಿ ಟಿ.ಯು. ಬಾಲಕೃಷ್ಣ 23.5.1962ರಲ್ಲಿ ಭಾರತೀಯ ಸೇನೆಯನ್ನು ಸೇರುವದರೊಂದಿಗೆ ಸಿಗ್ನಲ್ ಕೋರ್ ರೆಜಿಮೆಂಟ್‍ನಲ್ಲಿ ಕರ್ವವ್ಯದಲ್ಲಿದ್ದರು.

ಆನಂತರದಲ್ಲಿ 1981ರ ಮೇ ತಿಂಗಳಿನಲ್ಲಿ ಸುಮಾರು ಒಂದು ತಿಂಗಳ ರಜೆಯೊಂದಿಗೆ ಹುಟ್ಟೂರಿಗೆ ಬಂದಿದ್ದರು. ಮಡದಿ ನಂಜಮ್ಮ ಹಾಗೂ ಕುಟುಂಬದೊಂದಿಗೆ ಸಂತೋಷವಾಗಿ ರಜಾ ದಿನಗಳನ್ನು ಕಳೆದು ಮರಳಿ ಕರ್ತವ್ಯಕ್ಕೆ ಹಿಂತೆರಳಿದ್ದರು. ಸಿಂಗತ್ತೂರುವಿನಿಂದ ಮರಳಿದ್ದ ಬಾಲಕೃಷ್ಣ 1981ರ ಜೂನ್ 16 ರಂದು ಸೇನಾ ಶಿಬಿರದಲ್ಲಿ ಹಾಜರಾಗಬೇಕಿತ್ತು.

ಆ ವೇಳೆಗೆ ನವದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ರಜೆ ಮುಗಿಸಿ ಕೆಲಸಕ್ಕೆ ತಲಪದಿರುವ ಸಂಗತಿ ತಡವಾಗಿ ಬಹಿರಂಗಗೊಂಡಿತು. ಸುಮಾರು ಮೂರು ತಿಂಗಳ ಕಾಲಾವಕಾಶದೊಂದಿಗೆ ಬಾಲಕೃಷ್ಣ ಕರ್ತವ್ಯಕ್ಕೆ ಗೈರಾಗಿರುವ ಕುರಿತು ಸೇನೆಯಿಂದಲೇ ಕುಟುಂಬ ವರ್ಗಕ್ಕೆ ಸಂದೇಶ ರವಾನೆಯಾಗಿತ್ತು. ಆ ಬೆನ್ನಲ್ಲೇ ನಂಜಮ್ಮ ಕೂಡ ಬಂಧುಗಳ ಒಡಗೂಡಿ ಪತಿ ಬಾಲಕೃಷ್ಣ ಅವರ ಇರುವಿಕೆ ಬಗ್ಗೆ ಖಾತರಿಪಡಿಸಿಕೊಳ್ಳಲು ನಡೆಸಿದ ಎಲ್ಲ ಪ್ರಯತ್ನವೂ ವ್ಯರ್ಥವೆನಿಸತೊಡಗಿತು.

ಅತ್ತ ಯಾವದೇ ಪೂರ್ವಾನುಮತಿ ಪಡೆಯದೆ ಕರ್ತವ್ಯಕ್ಕೆ ವರ್ಷಾನುಗಟ್ಟಲೆ ಗೈರು ಹಾಜರಾದ ಯೋಧನಿಗಾಗಿ, ಮೂರು ವರ್ಷಗಳ ಸಮಯ ನೀಡಿದ ಬಳಿಕ ನಿಯಮದಂತೆ ಬಾಲಕೃಷ್ಣ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂಬ ಸಂದೇಶ ಕುಟುಂಬ ವರ್ಗಕ್ಕೆ ಮಿಲಿಟರಿಯಿಂದ ರವಾನೆಯಾಯಿತು. ಪರಿಣಾಮ ಪತ್ನಿ ನಂಜಮ್ಮ ದಿಗ್ಭ್ರಾಂತರಾಗಿ ಬಿಟ್ಟರು. ಈ ಸಂಬಂಧ ಸೇನೆಯೊಂದಿಗೆ ನಿರಂತರ ಪತ್ರ ವ್ಯವಹಾರÀ ನಡೆಸಿದ್ದರೂ ಯಾವ ಪ್ರಯತ್ನವೂ ಕೈಗೂಡಿರಲಿಲ್ಲ.

ಬದಲಾಗಿ ಸುಮಾರು 11 ವರ್ಷಗಳ ಬಳಿಕ ಸೇನೆಯಿಂದ ಮತ್ತೊಂದು ಪತ್ರ ನಂಜಮ್ಮ ಅವರನ್ನು ತಲಪುವದರೊಂದಿಗೆ, ಯೋಧ ಬಾಲಕೃಷ್ಣ ತಲೆಮರೆಸಿಕೊಂಡು ಸೇವೆಗೆ ಹಿಂತಿರುಗದಿರುವ ಕಾರಣ, ಸೇನೆಯಿಂದ ಲಭಿಸುವ ಎಲ್ಲಾ ಸವಲತ್ತುಗಳನ್ನು ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿತ್ತು.

ಮೊದಲೇ ಪತಿಯ ಕಣ್ಮರೆಯಿಂದ ಕಂಗಾಲಾಗಿದ್ದ ನಂಜಮ್ಮ, ನಿವೃತ್ತ ಸೈನ್ಯಾಧಿಕಾರಿಗಳು ಹಾಗೂ ಇತರರ ನೆರವಿನಿಂದ ಕನಿಷ್ಟ ಮಾಸಾಸನ ಹಾಗೂ ಪತಿಯ ಸೇವಾ ಅವಧಿಯ ಭತ್ಯೆ ಕರುಣಿಸುವಂತೆ ಹಲವಷ್ಟು ಮನವಿ ಪತ್ರ ಸಲ್ಲಿಸಿದರೂ ಯಾವದೇ ಸ್ಪಂದನ ಲಭಿಸಿರಲಿಲ್ಲ. ಪರಿಣಾಮ ಈ ಒಂಟಿ ಜೀವ ಕಂಗೆಟ್ಟು ಕಾಲ ಚಕ್ರ ಉರುಳಿದಂತೆ ಕಣ್ಣೀರಿನಲ್ಲಿ ಕೈತೊಳೆಯುವಂತಾಯಿತು.

ಚಿಗುರಿದ ಆಶಯ : ಈ ನಡುವೆ ಮತ್ತೆ ಹತ್ತಾರು ವರ್ಷದ ಬಳಿಕ ಸ್ನೇಹಿತರು, ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ಸೇನೆಯಿಂದ ಹಿಂತಿರುಗಿದ ಬಳಿಕ ವಕೀಲಿ ವೃತ್ತಿ ಆರಂಭಿಸಿರುವ ಬಗ್ಗೆ ನಂಜಮ್ಮ ಅವರಿಗೆ ವಿಷಯ ಮುಟ್ಟಿಸಿದರು. ಆ ಮೇರೆಗೆ ಮತ್ತೊಮ್ಮೆ ಚಿಗುರಿದ ಬದುಕುವ ಆಶಯದೊಂದಿಗೆ ನಂಜಮ್ಮ ನಿವೃತ್ತ ಮೇಜರ್ ಬಳಿ ಬಂದು ಕಣ್ಣೀರಿನಕತೆ ತೋಡಿಕೊಂಡರು.

2014ರಲ್ಲಿ ಮಡಿಕೇರಿಯ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿ ನಂಜಮ್ಮ ಅವರಿಗೆ ನ್ಯಾಯ ದೊರಕಿಸುವ ಭರವಸೆಯನ್ನು ಚಿಂಗಪ್ಪ ನೀಡುವದರೊಂದಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸೈನ್ಯಕ್ಕೆ ಕಳುಹಿಸಿಕೊಟ್ಟಿದ್ದರು. ಅಲ್ಲದೆ, ಈ ಸಂಗತಿಯನ್ನು ಆ ದಿನಗಳಲ್ಲಿ ಕೊಡಗಿಗೆ ಭೇಟಿ

(ಮೊದಲ ಪುಟದಿಂದ) ನೀಡಿದ್ದ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರ ಗಮನಕ್ಕೂ ತಂದಿದ್ದರು.

ಅಷ್ಟರಲ್ಲಿ ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅನ್ನಪೂರ್ಣೇಶ್ವರಿ ಅವರು, ಸತತ ಏಳು ವರ್ಷಗಳ ತನಕ ಯಾವೊಬ್ಬ ವ್ಯಕ್ತಿ ತನ್ನ ಇರುವಿಕೆ ಖಾತರಿಯಾಗ ದಂತೆ ಕಣ್ಮರೆಯೊಂದಿಗೆ ಯಾವದೇ ಸುಳಿವು ಲಬಿಸದಿದ್ದಲ್ಲಿ, ಆ ವ್ಯಕ್ತಿ ಮರಣ ಪಟ್ಟಿರುತ್ತಾರೆ ಎಂದು ದೃಢೀಕರಿಸುವ ಅಂಶ ಉಲ್ಲೇಖಿಸಿ ಯೋಧ ಬಾಲಕೃಷ್ಣ ಕೂಡ ಮೃತರಾಗಿರುವ ಅಂಶ ಪುಷ್ಟೀಕರಿಸಿ ತೀರ್ಪು ಪ್ರಕಟಿಸಿದರು. ಈ ಬಗ್ಗೆ ಅನೇಕ ಪುರಾವೆಗಳನ್ನು ಚಿಂಗಪ್ಪ ನ್ಯಾಯಾಲಯಕ್ಕೆ ಒದಗಿಸಿ ವಾದ ಮಂಡಿಸಿದ್ದರು.

ತಿರುವು ಪಡೆದ ಸಂಗತಿ: ನ್ಯಾಯಾಲಯದ ಈ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ, ಸುಮಾರು 37 ವರ್ಷಗಳಿಂದ ಯೋಧರೊಬ್ಬರ ಪತ್ನಿ ನಡೆಸಿದ ಹರಸಾಹಸಕ್ಕೆ ದೇವರು ಕರುಣೆ ತೋರುವ ವಿಶ್ವಾಸ ಚಿಗುರೊಡೆಯಿತು. ತಾ. 23.8.2017 ರಂದು ಸೇನಾ ಕಚೇರಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ರವಾನಿಸಿಕೊಡು ವಂತೆ ನಂಜಮ್ಮ ಅವರಿಗೆ ಪತ್ರ ತಲಪಿತು.

ಇತ್ತ ನಂಜಮ್ಮ ಅವರ ವಕೀಲರೂ ಆಗಿರುವ ಚಿಂಗಪ್ಪ ನ್ಯಾಯಾಲಯದ ಆದೇಶ ಸಹಿತ ಎಲ್ಲಾ ದಾಖಲಾತಿಗಳನ್ನು ಅಲಹಾಬಾದ್ ಸೇನಾ ಕೇಂದ್ರಕ್ಕೆ ತಾ. 5.9.2017 ರಂದು ಸೈನ್ಯಾಧಿಕಾರಿಗಳ ಕೋರಿಕೆಯಂತೆ ರವಾನಿಸಿದ್ದರು. ಪರಿಣಾಮ ಕಳೆದ 37 ವರ್ಷಗಳಿಂದ ಯೋಧ ಬಾಲಕೃಷ್ಣ ಕಾಣೆಯಾಗಿರುವ ಮರು ದಿನದಿಂದಲೇ ಅನ್ವಯವಾಗು ವಂತೆ ಅವರ ಪತ್ನಿ ನಂಜಮ್ಮ ಅವರಿಗೆ ಎಲ್ಲಾ ರೀತಿಯ ಭತ್ಯೆಗಳನ್ನು ಪ್ರಸಕ್ತ ಜನವರಿಯಲ್ಲಿ ಭಾರತ ಸೇನೆ ಕಲ್ಪಿಸಿಕೊಟ್ಟಿದೆ. ಸುದೀರ್ಘ ಹೋರಾಟ, ನೋವಿನಿಂದ ಕಂಗೆಟ್ಟು ಬಸವಳಿದಿದ್ದ ನಂಜಮ್ಮ ಈಗ ಸೌಲಭ್ಯ ದೊರೆತರೂ ದಿಕ್ಕಿಲ್ಲದೆ ನೆಮ್ಮದಿಗಾಗಿ ಹಂಬಲಿಸುತ್ತಿದ್ದಾರೆ.

ಇನ್ನೊಂದೆಡೆ ಕಾನೂನು ಪದವಿಯೊಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಓ.ಎಸ್. ಚಿಂಗಪ್ಪ , ಯೋಧರೊಬ್ಬರ ಕುಟುಂಬಕ್ಕೆ ಆ ಮೂಲಕ ನೆರವು ಕಲ್ಪಿಸಿದ ತೃಪ್ತಿಯನ್ನು ವ್ಯಕ್ತಪಡಿಸುದವ ರೊಂದಿಗೆ, ಇಂತಹ ಸಮಸ್ಯೆಗಳನ್ನು ಅರಿತು ಸಂಬಂಧಪಟ್ಟವರ ಗಮನ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಸೈನಿಕ ಪ್ರಕೋಷ್ಠ ಸಂಘಟನೆ ಮೂಲಕ ಸೈನಿಕ ಕುಟುಂಬಗಳ ಮನೆ ಮನೆಗೆ ಸಂಪರ್ಕದಲ್ಲಿ ತೊಡಗಿಸಿ ಕೊಂಡಿದ್ದಾರೆ.