ಗೋಣಿಕೊಪ್ಪಲು,ಫೆ.25: ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಂಪ್ರತಿ ಲಕ್ಷಾಂತರ ಮೌಲ್ಯದ ಮೀನು ಮಾರಾಟವಾಗುತ್ತಿದ್ದು, ವರ್ತಕರ ಪೈಪೆÇೀಟಿಯಿಂದಾಗಿ ಅಲ್ಲಲ್ಲಿ ವ್ಯಾಜ್ಯಗಳೂ ಹುಟ್ಟಿಕೊಳ್ಳುತ್ತಿವೆ.
ನಗರ ವ್ಯಾಪ್ತಿಯಲ್ಲಿ ಸಮುದ್ರದ ಮೀನು ಹಾಗೂ ಹೊಳೆ ಮೀನುಗಳಿಗೆ ವಿಫುಲ ಬೇಡಿಕೆ ಇದ್ದು, ಇಲ್ಲಿ ಮೀನು ಮಾರಾಟ ಮಾಡುವದೂ ಪ್ರತಿಷ್ಠೆಯ ವಿಚಾರವಾಗಿದೆ. ಜಿಲ್ಲೆಯಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಇಲ್ಲಿನ ಮಳಿಗೆಗಳು ಹರಾಜಾಗುತ್ತಿರುವದೇ ನಿದರ್ಶನ. ಇಲ್ಲಿನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಮೀನು ಮಳಿಗೆಗಳು ಸುಮಾರು ರೂ.20 ಲಕ್ಷಕ್ಕೆ ಹರಾಜಾಗಿರುವ ಉದಾಹರಣೆ ಇದ್ದು, ಮೀನಿನ ದರದಲ್ಲಿಯೂ ಏರಿಕೆಯಾಗುತ್ತಲೇ ಇದೆ. ಇದೀಗ ಗ್ರಾ.ಪಂ.ಯಿಂದ ಲೈಸೆನ್ಸ್ ಹೊಂದಿರುವ ಮೀನು ಮಳಿಗೆಯ ಮುಂಭಾಗದಲ್ಲಿಯೇ ಮತ್ತೊಂದು ಹೊಳೆ ಮೀನು ಮಾರಾಟ ಮಳಿಗೆ ತೆರೆಯಲು ಉದ್ದೇಶಿಸಿದ್ದು ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, 3 ನೇ ವಾರ್ಡ್ ಚುನಾಯಿತ ಸದಸ್ಯರಾದ ಹೆಚ್.ಬಿ.ಮುರುಘ ಹಾಗೂ ಸುರೇಶ್ ರೈ (ಮಂಜು) ಸಮ್ಮುಖದಲ್ಲಿ ಬೀಗಮುದ್ರೆ ಹಾಕಲಾದ ಘಟನೆ ನಡೆದಿದೆ.
ಈ ಹಿಂದೆ ಇಲ್ಲಿನ ಹರಿಶ್ಚಂದ್ರಪುರ, ಕಾರು ನಿಲ್ದಾಣ ಹಾಗೂ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಸಮೀಪ ಟಾಸ್ ಕಟ್ಟಡದಲ್ಲಿ ಕರ್ನಾಟಕ ಮೀನು ಮಾರಾಟ ಮಹಾಮಂಡಳಿ (ನಿ) ಮೈಸೂರು ಇವರ ಹೊಳೆ ಮೀನು ಮಾರಾಟ ಮಳಿಗೆ ಇತ್ತು. ನಂತರದ ದಿನಗಳಲ್ಲಿ ಗ್ರಾ.ಪಂ.ಲೈಸೆನ್ಸ್ ಹೊಂದಿಕೊಂಡು ಮೀನು ಮಾರಾಟ ಮಾಡಲು ನಿರ್ಬಂಧ ಹಿನ್ನೆಲೆ ಕೆಲವು ಮೀನು ಮಾರಾಟ ಮಳಿಗೆಗಳು ಮುಚ್ಚಲ್ಪಟ್ಟಿದ್ದವು. ಹೊಳೆ ಮೀನು ಮಾರಾಟಕ್ಕೂ ಗ್ರಾ.ಪಂ.ಪರವಾನಗಿ ಕಡ್ಡಾಯವಾಗಿದ್ದು, ಇದೀಗ ಪಂಚಾಯಿತಿ ಲೈಸೆನ್ಸ್ ಇಲ್ಲದೆ ತೆರೆಯಲು ಮುಂದಾದ ಮೀನು ಮಳಿಗೆ ಹೊಸ ವಿವಾದ ಸೃಷ್ಟಿಸಿದೆ.
ಇಲ್ಲಿನ ಮೀನು ಮಾರಾಟ ಮಳಿಗೆಯ ಮುಂಭಾಗವೇ ಒಣ ಮೀನು ಮಾರಾಟ ಮಳಿಗೆಗಳಿವೆ. ಇದರ ಸಮೀಪವೇ ಮೂರು ಕೊಠಡಿಯ ಮಳಿಗೆ ಇದ್ದು ವರ್ತಕರೊಬ್ಬರು ಕಾಫಿ ಖರೀದಿಗೆಂದು ಮಾರಾಟ ಮಳಿಗೆ ಹೊಂದಿಕೊಂಡಿದ್ದರು. ಆದರೆ, ಕಾಫಿ ವಹಿವಾಟು ಕುದುರದ ಹಿನ್ನೆಲೆ ಕೆಲವು ವರ್ಷ ಬೀಗ ಹಾಕಿದ ಸ್ಥಿತಿಯಲ್ಲಿಯೇ ಮಳಿಗೆ ಇತ್ತು. ಇದೀಗ ಮಳಿಗೆ ಟೆಂಡರ್ ಅವಧಿ ಮುಗಿದಿದ್ದು, ಮಳಿಗೆ ಮಾಲೀಕರು ಕಾನೂನು ಬಾಹಿರವಾಗಿ ಗ್ರಾ.ಪಂ.ಕಾನೂನು ಉಲ್ಲಂಘಿಸಿ ಹೊಳೆ ಮೀನು ಮಾರಾಟಗಾರರಿಗೆ ನೀಡಿದ್ದಾರೆ ಎಂದು ಪಿಡಿಓ ಚಂದ್ರಮೌಳಿ ಆರೋಪಿಸಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಸೆಲ್ವಿ ಅವರು ಪ್ರತಿಕ್ರಿಯಿಸಿ, ಮಾರುಕಟ್ಟೆ ವ್ಯಾಪ್ತಿಯಲ್ಲಿ ಈಗಾಗಲೇ ವ್ಯಾಪಾರಿ ಲೈಸೆನ್ಸ್ ಹೊಂದಿಕೊಂಡು ಗ್ರಾ.ಪಂ.ಗೆ ಲಕ್ಷಾಂತರ ಹಣ ಪಾವತಿಸಿ ಸಮುದ್ರ ಹಾಗೂ ಹೊಳೆ ಮೀನು ಮಾರಾಟ ಮಾಡುತ್ತಾ ಬಂದಿದ್ದಾರೆ. ಹೀಗಿದ್ದೂ ಗ್ರಾ.ಪಂ.ಗೆ ಯಾವದೇ ತಿಳುವಳಿಕೆ ನೀಡದೆ ವ್ಯಕ್ತಿಯೊಬ್ಬರು ನೂತನ ಮೀನು ಮಳಿಗೆ ಆರಂಭಿಸಿರುವದು ತಪ್ಪು. ಈ ಬಗ್ಗೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವದು. ಅಲ್ಲಿಯವರೆಗೆ ಮಳಿಗೆಗೆ ಬೀಗಮುದ್ರೆ ಹಾಕಿ ಪಂಚಾಯಿತಿ ವಶದಲ್ಲಿರಿಸಿಕೊಳ್ಳಲಾಗುವದು ಎಂದು ಹೇಳಿದ್ದಾರೆ.
ಗ್ರಾ.ಪಂ.ಸದಸ್ಯ ಸುರೇಶ್ ರೈ ಅವರು ಈ ಹಿಂದೆ ಕಾರು ನಿಲ್ದಾಣದಲ್ಲಿ ಹೊಳೆ ಮೀನು ಮಾರಾಟ ಮಳಿಗೆ ಇದ್ದು ನೂತನ ಮಳಿಗೆಗೆ ಪರವಾನಗಿ ನೀಡಲು ಅವಕಾಶವಿದೆ. ಮಾರ್ಚ್ ತಿಂಗಳಿನಲ್ಲಿ ಸಮುದ್ರದ ಮೀನು, ಹೊಳೆ ಮೀನು, ಮಾಂಸ ಮಾರುಕಟ್ಟೆ ಹರಾಜು ಪ್ರಕ್ರಿಯೆ ನಡೆಯಲಿದ್ದು ನಂತರವೇ ಲೈಸೆನ್ಸ್ ನೀಡಲು ಸಾಧ್ಯ ಎಂದು ತಿಳಿಸಿದ್ದಾರೆ.
ಮಳಿಗೆಯ ಮಾಲೀಕರೂ ಬೇರೆ, ಹೊಳೆ ಮೀನು ಮಾರಾಟಗಾರರು ಬೇರೆ. ಮಳಿಗೆಯ ಎರಡು ಕೊಠಡಿಯನ್ನು ಕಾನೂನು ಬಾಹಿರವಾಗಿ ಒಡೆದು ಒಂದೇ ಮಳಿಗೆಯಂತೆ ಪರಿವರ್ತಿಸಲಾಗಿದೆ. ಗ್ರಾ.ಪಂ.ಸದಸ್ಯ ಮುರುಘ ಅವರ ದೂರಿನ ಮೇಲೆ ಅಕ್ರಮ ಹೊಳೆ ಮೀನು ಮಾರಾಟ ಮಳಿಗೆಗೆ ಬೀಗಮುದ್ರೆ ಹಾಕಲಾಗಿದೆ. ಮಳಿಗೆಯ ವರ್ತಕರು ಬಾಂಡ್ನಲ್ಲಿ ಬೇರೆಯೇ ಉದ್ದೇಶಕ್ಕೆ ಮಳಿಗೆ ಹೊಂದಿಕೊಂಡಿದ್ದು, ಇದೀಗ ಅವಧಿಯೂ ಮುಗಿದಿದ್ದು ಗ್ರಾ.ಪಂ.ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿರುವದಾಗಿ ತಿಳಿಸಿದ್ದಾರೆ.
-ವರದಿ: ಟಿ.ಎಲ್.ಶ್ರೀನಿವಾಸ್