ಸೋಮವಾರಪೇಟೆ,ಫೆ.25: ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಪಕ್ಷದ ವೀಕ್ಷಕರು ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಆಕಾಂಕ್ಷಿಗಳು ಮತ್ತು ಪಕ್ಷದ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿದರು.

ಕೆಪಿಸಿಸಿ ವೀಕ್ಷಕರಾಗಿ ಆಗಮಿಸಿರುವ ಧರ್ಮಸೇನ ಮತ್ತು ಬಾಲರಾಜ್ ಅವರು ಟಿಕೇಟ್ ಆಕಾಂಕ್ಷಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. ಇದರೊಂದಿಗೆ ಪ್ರಮುಖರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದರು.

ಇದಕ್ಕೂ ಮುನ್ನ ಮಡಿಕೇರಿ ಕ್ಷೇತ್ರದ ಪ್ರಮುಖ ಟಿಕೆಟ್ ಆಕಾಂಕ್ಷಿಗಳು ಪ್ರತ್ಯೇಕ ಪ್ರತ್ಯೇಕವಾಗಿ ಸಭೆ ನಡೆಸಿ ತಮ್ಮ ಬಲ ಪ್ರದರ್ಶನ ಮಾಡಿದರು. ಐಎನ್‍ಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ತಮ್ಮ ಬೆಂಬಲಿಗರೊಂದಿಗೆ ಮಹಿಳಾ ಸಮಾಜದಲ್ಲಿ ಸಭೆ ನಡೆಸಿದರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎಂ. ಲೋಕೇಶ್ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದರು.

ನಿರೀಕ್ಷಣಾ ಮಂದಿರದಲ್ಲಿ ಹಾಜರಾಗಿದ್ದ ಹೆಚ್.ಎಸ್. ಚಂದ್ರಮೌಳಿ ಮತ್ತು ಕೆ.ಪಿ. ಚಂದ್ರಕಲಾ ಅವರುಗಳು ತಮ್ಮ ಹಿತೈಷಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು. ವೀಕ್ಷಕರಾದ ಧರ್ಮಸೇನ ಮತ್ತು ಬಾಲರಾಜ್ ಎಲ್ಲರ ಅಭಿಪ್ರಾಯವನ್ನು ಪಡೆದು ಕೆಪಿಸಿಸಿಗೆ ರವಾನಿಸುವ ಕುರಿತು ಮಾತ್ರ ಮಾಹಿತಿ ನೀಡಿದರು. ಪಕ್ಷವೇ ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮಗೊಳಿಸಲಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.