ವೀರಾಜಪೇಟೆ, ಫೆ. 24: ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕೊರತೆಯಿಂದ ಗ್ರಾಮೀಣ ಮಟ್ಟದಲ್ಲಿ ಕಣ್ಮರೆಯಾಗುತ್ತಿರುವ ಸಿರಿಧಾನ್ಯಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಯೋಜನೆ ಹಾಗೂ ಬೆಳ್ತಂಗಡಿಯ ಗ್ರಾಮೋದ್ಯೋಗ ಸಂಯುಕ್ತ ಆಶ್ರಯದಲ್ಲಿ ಸಿರಿ ಧಾನ್ಯಗಳ ಆಹಾರ ಮೇಳ ಹಾಗೂ ಪ್ರದರ್ಶನ ಮಾರಾಟವನ್ನು ತಾ. 27 ಮತ್ತು 28ರಂದು ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು ಮಡಿಕೇರಿ ಹಾಗೂ ವೀರಾಜಪೇಟೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸದಾಶಿವ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಕ್ಕಧಾನ್ಯಗಳಾದ ನವಣೆ, ಸಾವೆ, ಊದಲು, ಹಾರಕ, ಕೊರಲೆ, ಜೋಳ, ಬರಗು ಮತ್ತು ರಾಗಿಯ ಬಳಕೆ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಸಿರಿ ಧಾನ್ಯಗಳ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಆಹಾರ ಪದ್ಧತಿಯ ಪ್ರಾತ್ಯಕ್ಷತೆಯನ್ನು ಏರ್ಪಡಿಸಲಾಗಿದೆ. ಮನುಷ್ಯನ ದೇಹಕ್ಕೆ ಬೇಕಾಗುವ ನಾರು, ಕಬ್ಬಿಣ,ಸುಣ್ಣ, ಪಿಷ್ಠ ಇತ್ಯಾದಿಗಳು ಈ ಸಿರಿ ಧಾನ್ಯದಲ್ಲಿ ಹೇರಳವಾಗಿದೆ. ಈ ಸಿರಿ ಧಾನ್ಯಗಳು ಸಕ್ಕರೆ ಕಾಯಿಲೆ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಿಸಲಿದೆ ಎಂದರು.

ಸಂಸ್ಥೆಯ ಪ್ರಾದೇಶಿಕ ಮಾರುಕಟ್ಟೆ ಅಧಿಕಾರಿ ಹರೀಶ್ ಮಾತನಾಡಿ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಇರುತ್ತದೆ, ಕುಶಾಲನಗರದಲ್ಲಿ ಇದೇ ರೀತಿಯ ಮೇಳ ಹಮ್ಮಿಕೊಂಡಾಗ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ. ಸಿರಿ ಧಾನ್ಯಗಳ ಪ್ರದರ್ಶನ ಬೆಳಿಗ್ಗೆ 8-30ರಿಂದ ರಾತ್ರಿ 7ರ ತನಕ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ವಲಯ ಮೇಲ್ವಿಚಾರಕÀ ರವೀಂದ್ರ, ಕೆದಮುಳ್ಳೂರು ವಿಭಾಗದ ಸೇವಾ ಪ್ರತಿನಿಧಿ ಬಿ.ಆರ್ü ಸರಿತಾ, ಹೆಗ್ಗಳ ವಿಭಾಗದ ಸೇವಾ ಪ್ರತಿನಿಧಿ ಬಿ.ಎಂ ಜ್ಯೋತಿ ಉಪಸ್ಥಿತರಿದ್ದರು.