ಮಡಿಕೇರಿ, ಫೆ. 24: ನಿನ್ನೆ ಉರಿ ಬಿಸಿಲಿನ ನಡುವೆ ಕಾಲೂರು ಗ್ರಾಮದ ಮನೆಯೊಂದರಲ್ಲಿ ಒಂಟಿಯಾಗಿದ್ದ ಮುಗ್ಧ ಮಹಿಳೆಯ ಮೇಲೆ ಗುಂಡು ಹಾರಿಸಿ ಕೊಲೆಗೈಯ್ಯುವದರೊಂದಿಗೆ ಆ ವ್ಯಕ್ತಿ ತಾನು ಕೂಡ ಮುಖ ಛಿದ್ರಗೊಳ್ಳುವಂತೆ ಕ್ಷಣಾರ್ಧದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ನಿಗೂಢ ಸತ್ಯವೂ ಈ ಜೋಡಿ ಜೀವಗಳ ಸಾವಿನೊಂದಿಗೆ ಹುದುಗಿ ಹೋಗಿದೆ. ಇಲ್ಲಿ ಸತ್ತಾಕೆ ಮತ್ತು ಆಕೆಯನ್ನು ಕೊಂದು ಸತ್ತಾತನು ಕೂಡ ಪರಸ್ಪರ ಸಂಬಂಧಿಗಳೇ ಆಗಿದ್ದಾರೆ.ಉಭಯ ಕುಟುಂಬದವರು ಗುರುವಾರ ಜತೆಗೂಡಿ ತೋಟದ ಕೆಲಸದಲ್ಲಿ ಭಾಗಿಯಾಗಿದ್ದಲ್ಲದೆ, ಸಂಜೆ ವೇಳೆ ಒಟ್ಟಿಗೆ ಕಾಫಿ ಇತ್ಯಾದಿ ಸೇವಿಸಿದ್ದಾಗಿಯೂ, ಎರಡು ದಿನ ಹಿಂದೆ (ಬುಧವಾರ) ಮೃತೆ ವನಜಾಕ್ಷಿಯ ಸಹೋದರಿಯ ಲಗ್ನಪತ್ರಿಕೆ ಸಮಾರಂಭದಲ್ಲಿ ಪರಸ್ಪರ ಭಾಗಿಯಾಗಿದ್ದರೆಂದು ಹೇಳಲಾಗುತ್ತಿದೆ. ಸತ್ತಾಕೆಗೆ ಇಬ್ಬರು ಬೆಳೆದು ನಿಂತಿರುವ ಗಂಡು ಮಕ್ಕಳಿದ್ದು, ಆಕೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಧರ್ಮರಾಯನಿಗೆ ಕೂಡ ಯೌವನದ ಹೊಸ್ತಿಲಿನಲ್ಲಿರುವ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಓರ್ವ ಗಂಡು ಮಗನಿದ್ದಾನೆ.

ದುರ್ದೈವದ ಸಂಗತಿಯೆಂದರೆ ಗುಂಡೇಟಿಗೆ ಬಲಿಯಾಗಿರುವ ಇಬ್ಬರಿಗೂ ವೃದ್ಧೆ ತಾಯಂದಿಯರಿದ್ದಾರೆ. ನಿನ್ನೆ ಮಧ್ಯಾಹ್ನ ಕೂಡ ಚನ್ನಪಂಡ ನಂಜಪ್ಪ ಅವರ ಪತ್ನಿ ವನಜಾಕ್ಷಿ ಮನೆಗೆ ಕೋವಿಯೊಂದಿಗೆ ಕುಳೋಡಂಡ ಕಾಶಿಯಾನೆ ಧರ್ಮರಾಯ ಹೊರಟಾಗ ಆತನ ತಾಯಿ ಹಾಗೂ ಮಕ್ಕಳು ಮನೆಯಲ್ಲಿದ್ದಾರೆ.

ಸಾಮಾನ್ಯವಾಗಿ ನಂಜಪ್ಪ ಹಾಗೂ ಪತ್ನಿ ವನಜಾಕ್ಷಿ ಪ್ರತಿ ಶುಕ್ರವಾರ ಒಟ್ಟಿಗೆ ಸಂತೆಗೆ ತೆರಳುತ್ತಿದ್ದರೆನ್ನಲಾಗಿದೆ. ಕೇವಲ ಎರಡು ದಿನ ಹಿಂದೆ ಅನತಿ ದೂರದಲ್ಲಿರುವ ತನ್ನ ತಂಗಿಯ ಲಗ್ನಪತ್ರಿಕೆ ಸಮಾರಂಭದ ಓಡಾಟದಲ್ಲಿ ತೊಡಗಿಸಿಕೊಂಡಿದ್ದ ಕಾರಣ ಮನೆ ಕೆಲಸ ಬಾಕಿಯಾಗಿದ್ದ ಹಿನ್ನೆಲೆಯೊಂದಿಗೆ ಶುಕ್ರವಾರದ ಸಂತೆಗೆ ಹೋಗಿರಲಿಲ್ಲವೆಂದು ಗೊತ್ತಾಗಿದೆ. ಜೊತೆಗೆ ತನ್ನ ಓರ್ವ ಪುತ್ರನಿಗೆ ಮೃತಳ ಸಹೋದರಿ ಬೆಂಗಳೂರಿನಲ್ಲಿ ಕೆಲಸ ಕೊಡಿಸಲೆಂದು ಲಗ್ನಪತ್ರಿಕೆ ಸಮಾರಂಭದ ಬಳಿಕ ಕರೆದೊಯ್ದಿದಳೆಂದು ತಿಳಿದುಬಂದಿದೆ.

ಈ ಎಲ್ಲ ಬೆಳವಣಿಗೆಯ ನಡುವೆ ಪರಸ್ಪರ ಬಂಧುತ್ವ ಹೊಂದಿದ್ದ ವನಜಾಕ್ಷಿ ಹಾಗೂ ಧರ್ಮರಾಯ ಭಯಾನಕ ರೀತಿ ಸಾವು ಕಂಡಿರುವದು ಮೃತರ ಕುಟುಂಬ ವರ್ಗ ಮತ್ತು ಬಂಧುಗಳಲ್ಲಿ ತಲ್ಲಣ ಉಂಟು ಮಾಡಿದೆ. ಆತ್ಮಹತ್ಯೆಗೀಡಾಗಿರುವ ಧರ್ಮರಾಯನ ಪತ್ನಿ ರಾಣಿ ಯಾನೆ ರುಕ್ಮಿಣಿ ಕೂಡ ನೆರೆಯ ಹಮ್ಮಿಯಾನ ಗ್ರಾಮದವರೇ ಆಗಿದ್ದಾರೆ. ಅಲ್ಲದೆ ಪ್ರಸಕ್ತ ದುರ್ಘಟನೆಯಿಂದ ಎರಡು ಜೀವಗಳ ಹತ್ಯೆಗೆ ನಿಖರ ಕಾರಣವನ್ನು ಅರಿತುಕೊಳ್ಳುವ ತವಕದಲ್ಲಿ ಮೃತರ ಕುಟುಂಬ ಹಾಗೂ ಬಂಧುವರ್ಗವಿದ್ದು, ಉತ್ತರ ಮಾತ್ರ ನಿಗೂಢವೆನಿಸುವಂತಾಗಿದೆ. ಇಂದು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ಶವಗಳ ಮರಣೋತ್ತರ ಪರೀಕ್ಷೆ ಬಳಿಕ ಕಾಲೂರಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಪೊಲೀಸ್ ಇಲಾಖೆ ಮೃತ ಧರ್ಮರಾಯನಿಗೆ ಸೇರಿದ ಕೋವಿ ಇತ್ಯಾದಿ ವಶಕ್ಕೆ ಪಡೆದು ಪಂಚನಾಮೆಯೊಂದಿಗೆ ಕಾನೂನು ಕ್ರಮ ಕೈಗೊಂಡಿದೆ. ಅಲ್ಲದೆ ವನಜಾಕ್ಷಿಯ ಸಹವಾಸ ಬಯಸಿದ ಧರ್ಮರಾಯ ವಿಫಲ ಯತ್ನದೊಂದಿಗೆ ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಪೊಲೀಸರು ಶಂಕಿಸಿದ್ದಾರೆ.