ಗೋಣಿಕೊಪ್ಪಲು, ಫೆ. 24: ಕೈಕೇರಿ-ಕಳತ್ಮಾಡು-ಹೊಸಕೋಟೆ ಸಂಪರ್ಕ ರಸ್ತೆ ಕಳಪೆ ಕಾಮಗಾರಿ ಕುರಿತು ಇಂದು ಅಲ್ಲಿನ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.ಉದ್ದೇಶಿತ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯ ಸುಮಾರು ರೂ.9 ಕೋಟಿ ವೆಚ್ಚದ 9.03 ಕಿ.ಮೀ.ರಸ್ತೆ ಅಭಿವೃದ್ಧಿ ಈ ಹಿಂದೆಯೇ ಕಳಪೆ ಕಾಮಗಾರಿ ಎಂದು ಲೋಕಾ ಯುಕ್ತಕ್ಕೆ ದೂರು ನೀಡಲಾಗಿತ್ತು. ಉದ್ದೇಶಿತ ರಸ್ತೆಯು ಟೆಂಡರ್ ಪ್ರಕ್ರಿಯೆಯಂತೆ ನಡೆದಿಲ್ಲ; ಸುಮಾರು 7.50 ಮೀಟರ್ ಅಗಲದ ರಸ್ತೆಯನ್ನು ಕೇವಲ ಮೂರುವರೆ ಮೀಟರ್ ಅಗಲಕ್ಕೆ ಮಿತಿಗೊಳಿಸ ಲಾಗಿತ್ತು. ಇದಲ್ಲದೆ ಗುತ್ತಿಗೆದಾರರಿಗೆ 5 ವರ್ಷ ರಸ್ತೆ ನಿರ್ವಹಣೆಯ ಜವಾಬ್ದಾರಿ ಯನ್ನೂ ವಹಿಸಲಾಗಿತ್ತು. ಆದರೆ, ಇದೀಗ ರಸ್ತೆಗೆ ಗುಂಡಿ ಮುಚ್ಚುವ ಕೆಲಸದಲ್ಲಿಯೂ ಕಳಪೆ ಕಾಮಗಾರಿ ಇಂದು ನಡೆದಿದ್ದು, ರಸ್ತೆ ಬದಿಯ ಮಣ್ಣಿಗೆ ಡಾಂಬರೀಕರಣ ಮಾಡುತ್ತಿರು ವದನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ಕೆಲಸ ಸ್ಥಗಿತಗೊಳಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೊಲ್ಲೀರ ಧರ್ಮಜ ಅವರು ಕಳಪೆ ಕಾಮಗಾರಿ ನಡೆದಿರುವದನ್ನು ಆಕ್ಷೇಪಿಸಿ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೈಕೇರಿಯಿಂದ ಹೊಸಕೋಟೆವರೆಗೆ ರಸ್ತೆ ಅಲ್ಲಲ್ಲಿ ಕಿತ್ತು ಬಂದಿದ್ದು, ಭಾರಿ ಹೊಂಡಗಳಾಗಿ ಮಾರ್ಪಟ್ಟಿದ್ದವು. ಇಂದು ದಿಢೀರನೆ ಗುತ್ತಿಗೆದಾರರು ಕೆಲಸ ಆರಂಭಿಸಿದ್ದರು.

ಉದ್ದೇಶಿತ ರಸ್ತೆಯ ಚರಂಡಿ ಕಾಮಗಾರಿಯೂ ಅಸಮರ್ಪಕವಾಗಿ ನಡೆದಿರುವದನ್ನು ಗ್ರಾಮಸ್ಥರು ಮಾಧ್ಯಮದವರಿಗೆ ತೋರಿಸಿದರಲ್ಲದೆ, ಮಳೆಗಾಲದಲ್ಲಿ ಚರಂಡಿಯಲ್ಲಿ ಹೂಳು ನಿಂತು ರಸ್ತೆ ಮೇಲೆ ಮಳೆ ನೀರು ಹರಿದು ಹೋಗುತ್ತಿದ್ದರೂ ಗುತ್ತಿಗೆದಾರರು ಇತ್ತ ಸುಳಿದಿರಲಿಲ್ಲ. ನಿರ್ವಹಣೆ ಬಾಪ್ತು ಸುಮಾರು ರೂ.60 ಲಕ್ಷ ಮೊತ್ತವನ್ನು ಇಲಾಖೆಯು ಭದ್ರತಾ ಠೇವಣಿಯಾಗಿ ಇಟ್ಟುಕೊಂಡಿದ್ದು, ಇದನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಗುತ್ತಿಗೆದಾರರು ತರಾತುರಿಯಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಿದ್ದಾರೆ ಎಂದು ಕೊಲ್ಲೀರ ಧರ್ಮಜ ಆರೋಪಿಸಿದರು.

ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರೂ ಸ್ಥಳಕ್ಕೆ ಆಗಮಿಸಿ ಕಳಪೆ ಕಾಮಗಾರಿಯನ್ನು

(ಮೊದಲ ಪುಟದಿಂದ) ಪರಿಶೀಲಿಸಿದರಲ್ಲದೆ, ಈ ಬಗ್ಗೆ ತನಿಖೆಗೆ ದೂರು ನೀಡಲಾ ಗುವದು ಎಂದು ತಿಳಿಸಿದರು.

ಕಾಮಗಾರಿಯು ಸುಮಾರು ರೂ. 9 ಕೋಟಿ ವೆಚ್ಚದಲ್ಲಿ ನಡೆದಿರುವದು ಕಂಡು ಬರುತ್ತಿಲ್ಲ; ರಸ್ತೆ ಅಗಲೀ ಕರಣವೂ ಆಗಿಲ್ಲ. ಚರಂಡಿ ವ್ಯವಸ್ಥೆಯೂ ಅಸಮರ್ಪಕವಾಗಿದೆ ಎಂದು ಆರೋಪಿಸಿದರು.

ರಸ್ತೆ ಕಾಮಗಾರಿಯನ್ನೂ ನಿಧಾನಗತಿಯಲ್ಲಿ ಮುಗಿಸಿ ಇದೀಗ ಮಣ್ಣಿನ ಮೇಲೆ ಡಾಂಬರೀಕರಣ ಮಾಡುವ ಮೂಲಕ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ವೈಫಲ್ಯಗೊಳ್ಳುವಂತೆ ಮಾಡಲಾಗಿದೆ. ಗುತ್ತಿಗೆದಾರ ಸ್ಥಳಕ್ಕೆ ಆಗಮಿಸುವವರೆಗೆ ಬಳಸಲಾಗುತ್ತಿರುವ ಇಂಜಿನ್, ಮಿನಿಲಾರಿ ಇತ್ಯಾದಿಗಳನ್ನು ಗ್ರಾಮಸ್ಥರೇ ವಶಪಡಿಸಿಕೊಂಡಿದ್ದಾರೆ. ಕಾಮಗಾರಿಯನ್ನು ಮತ್ತೆ ಗುಣಮಟ್ಟದಲ್ಲಿ ಆರಂಭಿಸದಿದ್ದರೆ ಕೈಕೇರಿ, ಕಳತ್ಮಾಡು, ಹೊಸಕೋಟೆ ಗ್ರಾಮಸ್ಥರು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕೊಲ್ಲೀರ ಧರ್ಮಜ ತಿಳಿಸಿದ್ದಾರೆ.

ಇಂದು ಪ್ರತಿಭಟನೆ ಸಂದರ್ಭ ಗ್ರಾಮಸ್ಥರಾದ ಜಮ್ಮಡ ಪೂವಣ್ಣ, ಜಮ್ಮಡ ಜಯ ಜೋಯಪ್ಪ, ಕೊಲ್ಲೀರ ಉಮೇಶ್, ಕೊಲ್ಲೀರ ಪೂಣಚ್ಚ, ಕತ್ರಿಕೊಲ್ಲಿ ವಿಜು, ಎಪಿಎಂಸಿ ಸದಸ್ಯ ಚಿಯಕ್‍ಪೂವಂಡ ಸುಬ್ರಮಣಿ, ಶಿವರಾಜ್, ಸಚ್ಚಿದಾನಂದ, ಜಮ್ಮಡ ಶಂಭು ಬಿದ್ದಪ್ಪ ಮುಂತಾದವರು ಪಾಲ್ಗೊಂಡಿದ್ದರು. ವರದಿ: ಟಿ.ಎಲ್. ಶ್ರೀನಿವಾಸ್