ಮಡಿಕೇರಿ, ಫೆ. 24: ತಿತಿಮತಿ ಬಳಿ ದೇವರಪುರ ಗ್ರಾ.ಪಂ. ವ್ಯಾಪ್ತಿಯ ಹೆಬ್ಬಾಲೆ ಹಾಡಿಯ ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ಸರಕಾರದಿಂದ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೆಯ ದಿನವಾದ ಇಂದು ಕೂಡ ಮುಂದುವರಿದಿದೆ. ಧರಣಿ ನಿರತ ಹಾಡಿ ನಿವಾಸಿಗಳು ಇಂದು ಅಲ್ಲಿಯೇ ಅಡುಗೆ ತಯಾರಿಸಿ ಹೆಂಗಸರು ಮಕ್ಕಳಿಗೆ ಆಹಾರ ನೀಡುವ ಮುಖಾಂತರ ಹೋರಾಟ ಮುಂದುವರಿಸಿದ್ದಾರೆ.ಧರಣಿ ಸ್ಥಳ ಗಾಂಧಿಮೈದಾನಕ್ಕೆ ಜಿಲ್ಲಾಧಿಕಾರಿ ಐ.ಪಿ. ಶ್ರೀವಿದ್ಯಾ ಭೇಟಿ ನೀಡುವದರೊಂದಿಗೆ, ಧರಣಿ ಕೈಬಿಡುವಂತೆ ಹಾಡಿ ನಿವಾಸಿಗಳ ಮನವೊಲಿಸಲು ಯತ್ನಿಸಿದರು. ಅಲ್ಲದೆ, ಕಳೆದ 70 ವರ್ಷಗಳಿಂದ ಅಲ್ಲಿ ವಾಸಿಸುತ್ತಿರುವ ಕುಟುಂಬಗಳ ತೆರವಿಗೆ ಹೆಬ್ಬಾಲೆ ಭದ್ರಕಾಳಿ- ಅಯ್ಯಪ್ಪ ದೇವಾಲಯ ಸಮಿತಿ ಪ್ರಮುಖರು ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿರುವ ಬಗ್ಗೆ ಗಮನ ಸೆಳೆದರು.

ಆ ಹಿನ್ನೆಲೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಕಾನೂನಿನ ತೊಡಕಾಗಿದ್ದು, ಮುಂದಿನ ಮಾ. 13ರಂದು ಅರ್ಜಿ ವಿಚಾರಣೆ ಬಳಿಕ ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ವಿವರಿಸಿದರು. ಜಿಲ್ಲಾಧಿಕಾರಿಗಳ ಭರವಸೆ ಬಳಿಕವೂ ಹಾಡಿ ನಿವಾಸಿಗಳು ಆಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.