ಶ್ರೀಮಂಗಲ, ಫೆ. 14: ಜಿಲ್ಲೆಯ ಮೂಲಕ ಮೈಸೂರಿನಿಂದ ಕೇರಳಕ್ಕೆ ರೂಪಿಸಿದ ಹೈಟೆನ್ಷನ್ ಮಾರ್ಗದಿಂದ ಕೊಡಗಿನ ಪರಿಸರದ ಮೇಲೆ ದುಷ್ಪರಿಣಾಮ ಬೀರಿದೆ. ಈ ಯೋಜನೆ ತಡೆಗೆ ಹೋರಾಟ ಮಾಡಿದ ಮುಖಂಡರು ಮೌನವಹಿಸಿದ್ದರು ಎಂದು ಹೇಳಿಕೆ ನೀಡಿರುವ ಶಾಸಕ ಕೆ.ಜಿ. ಬೋಪಯ್ಯ ಅವರ ಹೇಳಿಕೆ ಹಾಸ್ಯಸ್ಪದ ಎಂದು ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆಯ ಮುಖಂಡ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಬಣ್ಣಿಸಿದ್ದಾರೆ.
ಪೊನ್ನಂಪೇಟೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಈ ಯೋಜನೆ ವಿರುದ್ಧ ಜಿಲ್ಲೆಯ ಬೆಳೆಗಾರರು, ರೈತರು ಹಲವು ವರ್ಷದಿಂದ ಹೋರಾಟ ನಡೆಸಿ ಹಲವಾರು ಪೊಲೀಸ್ ಮೊಕದ್ದಮೆ ಯನ್ನು ಹಾಕಿಸಿಕೊಂಡರೂ, ಒಂದೇ ಒಂದು ಹೋರಾಟಕ್ಕೆ ಬೋಪಯ್ಯ ಬರಲಿಲ್ಲ. ಸ್ಪೀಕರ್ ಆಗಿದ್ದ ಬೋಪಯ್ಯ ಹೈಟೆನ್ಷನ್ ಯೋಜನೆಗೆ ಒಪ್ಪಿಗೆ ನೀಡಿದ್ದ ನಂತರವೇ ಯೋಜನೆ ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಮಾತನಾಡಿ ಹೈಟೆನ್ಷನ್ ಯೋಜನೆ ರೂಪಿಸುವದು ತಿಳಿದ ನಂತರ ಆ ಯೋಜನೆ ತಡೆಯಲು ಹೋರಾಡುತ್ತ ಬಂದಿದ್ದೇವೆ. ಈ ಯೋಜನೆಗೆ ಒಪ್ಪಿಗೆ ನೀಡುವಂತೆ ಆಗಿನ ಮುಖ್ಯಮಂತ್ರಿ ಸದಾನಂದ ಗೌಡ, ಇಂಧನ ಸಚಿವೆ ಶೋಭಕರಂದ್ಲಾಜೆ ಅವರೊಂದಿಗೆ ನಡೆಸಿದ ಸಭೆಯಲ್ಲಿ ಸ್ಪೀಕರ್ ಆಗಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಬೋಪಯ್ಯ ಯೋಜನೆಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಆಗಿನ ಸಂಸದ ವಿಶ್ವನಾಥ್‍ರವರಿಗೆ ಯೋಜನೆ ಬಗ್ಗೆ ಮನವರಿಕೆ ಮಾಡಿ ಒಪ್ಪಿಸುವಂತೆ ಶಾಸಕ ಬೋಪಯ್ಯ ಅವರು ಸಲಹೆ ನೀಡಿರುವ ಬಗ್ಗೆ ದಾಖಲೆ ಇರುವದಾಗಿ ವಿವರಿಸಿದರು.
ಶಾಸಕ ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರು ಮಾಧ್ಯಮಗಳ ಮೂಲಕ ನೇರ ಸಂವಾದಕ್ಕೆ ತಮ್ಮ ಬಳಿ ಇರುವ ದಾಖಲೆ ಸಹಿತ ಬರಲಿ, ತಾವು ಸಹ ತಮ್ಮ ಬಳಿ ಇರುವ ದಾಖಲೆಯೊಂದಿಗೆ ಬರುವದಾಗಿ ಹೇಳಿದ ಅವರು ಜನರಿಗೆ ವಾಸ್ತವಾಂಶ ಈ ಮೂಲಕ ಮನವರಿಕೆಯಾಗಲಿ ಎಂದು ಸವಾಲು ಹಾಕಿದರು.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಕುಶಾಲನಗರ ಸಮೀಪ ರಾಣಿ ಗೇಟ್ ವರೆಗೆ ಮಾತ್ರ ರೈಲ್ವೆ ಮಾರ್ಗ ಇದೆ ಎಂದು ತಪ್ಪು ಹೇಳಿಕೆ ನೀಡುತ್ತಿದ್ದಾರೆ. ಆರ್.ಟಿ.ಐ ದಾಖಲಾತಿ ಪ್ರಕಾರ ಈ ಯೋಜನೆಗೆ ರೂ. 1818 ಕೋಟಿ ಪ್ರಸ್ತಾವನೆಯೊಂದಿಗೆ ಮಕ್ಕಂದೂರು ವರೆಗೆ ಇದೆ. ಲೋಕಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲೆಯ ರೈಲ್ವೆ ಮಾರ್ಗದ ಬಗ್ಗೆ ಪ್ರಶ್ನಿಸಿದ ಸಂದರ್ಭ ಬಿಡುಗಡೆಯಾದ ದಾಖಲೆಯಂತೆ ಈ ಯೋಜನೆ ಕುಶಾಲನಗರದಿಂದ ಮಕ್ಕಂದೂರು-ಮಡಿಕೇರಿಯಿಂದ ಮಂಗಳೂರುವರೆಗೆ ವಿಸ್ತರಿಸಲಾಗುವ ಬಗ್ಗೆ ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ. ಇವೆಲ್ಲದರ ಬಗ್ಗೆ ಮಾಹಿತಿ ಕೊರತೆಯಿಂದ ಶಾಸಕರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರಾಣಿ ಗೇಟ್‍ವರೆಗೆ ಮಾತ್ರ ರೈಲು ಮಾರ್ಗ ಮಾಡುವದಾದರೆ ಮಡಿಕೇರಿ ಸ್ಟೋನ್ ಹಿಲ್‍ನಲ್ಲಿ ರೈಲ್ವೆ ವಸತಿಗೃಹ ಏಕೆ? ಎಂದು ಪ್ರಶ್ನಿಸಿದರು.
ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ ಅಭಿವೃದ್ಧಿ ಹೆಸರಿನಲ್ಲಿ ಕೊಡಗನ್ನು ವಿನಾಶದಂಚಿಗೆ ತಳ್ಳುವ ಪ್ರಯತ್ನ ಜನಪ್ರತಿನಿಧಿಗಳಿಂದ ನಡೆಯುತ್ತಿದೆ. ಶಾಸಕ ಬೋಪಯ್ಯ ವಿಧಾನ ಸಭೆಯಲ್ಲಿ ರೈಲ್ವೆ ಯೋಜನೆಯ ಬಗ್ಗೆ ಕೇವಲ ಮಾಹಿತಿ ಕೇಳಿದ್ದಾರೆ ಹೊರತು ಯೋಜನೆಗೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಟೀಕಿಸಿದ್ದಾರೆ. ಈ ಸಂದರ್ಭ ವೇದಿಕೆಯಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಹಾಜರಿದ್ದರು.
ಬಾಳೆಲೆಯಲ್ಲಿ ಸಭೆ
ಶ್ರೀಮಂಗಲ: ಕೊಡಗು ಜಿಲ್ಲೆಯ ಮೂಲಕ ಹಾದು ಹೋಗಲಿರುವ ಹಲವು ರೈಲ್ವೆ ಮಾರ್ಗ ವಿರೋಧಿಸಿ ತಾ. 18ರಂದು ಮೈಸೂರುವಿನಲ್ಲಿ ನಡೆಯಲಿರುವ ಪ್ರತಿಭಟನಾ ರ್ಯಾಲಿಗೆÉ ಸಂಪೂರ್ಣ ಬೆಂಬಲ ನೀಡಲು ಬಾಳೆಲೆ ಕೊಡವ ಸಮಾಜದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
ಈ ಬಗ್ಗೆ ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಟಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನವಾಯಿತು. ಪ್ರಾಸ್ತವಿಕವಾಗಿ ಮಾತನಾಡಿದ ಅವರು ರೈಲ್ವೆ ಮಾರ್ಗ ದಿಂದ ಕೊಡಗು ನಾಶವಾಗಲಿದೆ. ಈ ರೈಲ್ವೆ ಮಾರ್ಗವನ್ನು ತಡೆಯಲು ಈಗಾಗಲೇ ಜಿಲ್ಲೆಯಾದ್ಯಂತ ಸಭೆÉಗಳನ್ನು ನಡೆಸಿ ಜನ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಒಗ್ಗಟ್ಟಿನಿಂದ ಈ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಜಿಲ್ಲೆಯ ಶಾಸಕರಾದ ಕೆ.ಜಿ.ಬೋಪಯ್ಯ, ಹಾಗೂ ಅಪ್ಪಚ್ಚುರಂಜನ್ ಈ ರೈಲ್ವೆ ಯೋಜನೆಯ ಬಗ್ಗೆ ಜನರಲ್ಲಿ ತಪ್ಪು ಸಂದೇಶವನ್ನು ನೀಡುತ್ತಿರುವದು ಸರಿಯಲ್ಲ ಎಂದರು.
ಯುನೈಟೆಡ್ ಕೊಡವ ಅರ್ಗನೈಸೇಷನ್ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಜಿಲ್ಲೆಗೆ ಮಾರಕವಾದಂತಹ ಯೋಜನೆಗಳ ವಿರುದ್ಧ ಧ್ವನಿ ಎತ್ತುವವರನ್ನು ಅಭಿವೃದ್ಧಿ ವಿರೋಧಿಗಳು ಎಂಬ ಹಣೆ ಪಟ್ಟಿ ಕಟ್ಟಲಾಗುತ್ತಿದೆ. ಕೊಡಗಿನಂತಹ ಭೌಗೋಳಿಕ ಹಿನ್ನೆಲೆಯುಳ್ಳ ಹಾಗೂ ಸಾಂಸ್ಕøತಿಕ ನಾಡಾಗಿರುವ ಕೊಡಗು ಜಿಲ್ಲೆಯಲ್ಲಿ ಇಲ್ಲಿಯ ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಮಾತ್ರ ಸಾಧ್ಯ. ಬೇರೆ ಕಡೆಗಳಿಗೆ ಇಂತಹ ವ್ಯವಸ್ಥೆಗಳು ಅಭಿವೃದ್ಧಿಯಾದರೆ ಕೊಡಗಿನಂತಹ ಸ್ಥಳಕ್ಕೆ ಇದು ವಿನಾಶಕಾರಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಾಜಿ ಎಂಎಲ್‍ಸಿ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ ಯಾವುದೇ ಕಾರಣಕ್ಕೂ ಕೊಡಗಿನ ಮುಖಾಂತರ ರೈಲ್ವೆ ಮಾರ್ಗಕ್ಕೆ ನನ್ನ ಸಹಮತವಿಲ್ಲ. ಮೊದಲು ನಾನು ಹುಟ್ಟಿದ ಈ ಮಣ್ಣನ್ನು ಉಳಿಸುವ ಮಹತ್ತರವಾದ ಜವಾಬ್ದಾರಿ ನನ್ನ ಮೇಲಿದೆ. ಮೊದಲು ಈ ಮಣ್ಣು ಮತ್ತು ಜನಾಂಗ ನಂತರ ನನಗೆ ಪಕ್ಷ ಎಂದು ಹೇಳಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಅವರು ಮಾತನಾಡಿ ಈ ಯೋಜನೆ ವಿರುದ್ಧ ಮೈಸೂರಿನಲ್ಲಿ ತಾ 18 ರಂದು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವದರ ಮೂಲಕ ಕೊಡಗನ್ನು ಉಳಿಸುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ಪ್ರಮುಖರಾದ ಆದೇಂಗಡ ವಿನು ಉತ್ತಪ್ಪ, ಅಳಮೇಂಗಡ ಬೋಸ್ ಮಂದಣ್ಣ, ಡಾ.ಮಲ್ಚೀರ ಸುಬ್ಬಯ್ಯ, ಆದೇಂಗಡ ಅಶೋಕ್ ಮುಂತಾದವರು ಮಾತನಾಡಿ ರೈಲ್ವೆ ಯೋಜನೆ ವಿರೋಧಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಜಿಲ್ಲೆಯ ಮೂಲಕ ರೈಲ್ವೆ ಯೋಜನೆಗೆ ವಿರೋಧ
ಶ್ರೀಮಂಗಲ: ಕೊಡಗು ಜಿಲ್ಲೆಯ ಮೂಲಕ ಹಲವು ರೈಲ್ವೆ ಯೋಜನೆ ರೂಪಿಸುವ ಪ್ರಸ್ತಾವನೆ ವಿರುದ್ಧ ತಾ.18 ರಂದು ಮೈಸೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಗೆ ಟಿ.ಶೆಟ್ಟಿಗೇರಿಯ ಮೂಂದ್ ನಾಡ್ ಕೊಡವ ಸಮಾಜದಿಂದ ಬೆಂಬಲ ನೀಡುವದಾಗಿ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ತಿಳಿಸಿದ್ದಾರೆ.
ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಸಮಾಜದ ಕಾರ್ಯದರ್ಶಿ ಮನ್ನೇರ ರಮೇಶ್ ಮತ್ತು ನಾಡ್‍ತಕ್ಕರಾದ ಹರೀಶ್ ಅಪ್ಪಯ್ಯ ಉಪಸ್ಥಿತರಿದ್ದರು.
ಜಿಲ್ಲಾ ಬೆಳೆಗಾರರ ಒಕ್ಕೂಟ
ಶ್ರೀಮಂಗಲ: ಕೊಡಗು ಜಿಲ್ಲೆಯ ಮೂಲಕ ಪ್ರಸ್ತಾವನೆಯಲ್ಲಿರುವ ಹಲವು ರೈಲ್ವೆ ಯೋಜನೆಯಿಂದ ನೇರವಾಗಿ ಬೆಳೆಗಾರರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈಲ್ವೆ ಯೋಜನೆಯನ್ನು ಎಲ್ಲಾ ಬೆಳೆಗಾರರು ಒಂದಾಗಿ ಪ್ರತಿಭಟಿಸಿ ತಡೆ ಹಿಡಿಯಲು ಮುಂದಾಗಬೇಕಾಗಿದೆ ಎಂದು ಜಿಲ್ಲಾ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಕರೆ ನೀಡಲಾಗಿದೆ.
ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈಲ್ವೆ ಮಾರ್ಗದಿಂದ ಈಗಾಗಲೇ ತಾರಕ್ಕಕೇರಿರುವ ಕಾಡಾನೆ ಮತ್ತು ಮಾನವ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತವಾಯಿತು. ಈ ಯೋಜನೆ ವಿರೋಧಿಸಿ ತಾ. 18 ರಂದು ಕೊಡಗು ರೈಲ್ವೆ ಯೋಜನೆ ವಿರೋಧಿ ವೇದಿಕೆ ಮೈಸೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಪ್ರತಿಯೊಬ್ಬ ಬೆಳೆಗಾರರು ಭಾಗವಹಿಸಿ ಬೆಂಬಲ ನೀಡುವಂತೆ ಕರೆ ನೀಡಲಾಯಿತು.
ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣಿರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಮಲ್ಚೀರ ಬೋಸ್ ಚಿಟ್ಟಿಯಪ್ಪ, ಅರಮಣಮಾಡ ಸತೀಶ್ ದೇವಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಮತ್ತಿತರರು ಹಾಜರಿದ್ದರು.
ಸಿ.ಎನ್.ಸಿ. ಸ್ಪಷ್ಟ ನಿಲುವು
ಮಡಿಕೇರಿ: ಕೊಡಗಿನಲ್ಲಿ ರೈಲ್ವೆ ಮಾರ್ಗ ಊಹಾಪೋಹ ಕುರಿತು ಶಾಶ್ವತ ತೆರೆ ಎಳೆಯಲು ಕೊಡಗಿನ ಜನರ ಹಿತದೃಷ್ಠಿಯಿಂದ ಉದ್ದೇಶಿತ ರೈಲ್ವೆ ಯೋಜನೆಯನ್ನೇ ಸಂಪೂರ್ಣವಾಗಿ ಕೈಬಿಡಬೇಕು ಮತ್ತು ಶಾಶ್ವತವಾಗಿ ಕೊಡಗಿನಲ್ಲಿ ರೈಲ್ವೆ ಮಾರ್ಗ ಯೋಜನೆ ಜಾರಿಗೊಳ್ಳದಂತೆ ಸರ್ಕಾರ ಸ್ಪಷ್ಟ ನಿಲುವು ತಳೆಯಲು ಕೂಡಲೇ ರೈಲ್ವೆ ಮಂತ್ರಿ ಪಿಯೋಸ್ ಗೋಯೆಲ್ ಮತ್ತು ಸಂಸತ್ ಸದಸ್ಯ ಪ್ರತಾಪ್ ಸಿಂಹ ಅವರು ಶ್ವೇತ ಪತ್ರ ಹೊರಡಿಸಲು ಸಿ.ಎನ್.ಸಿ ಆಗ್ರಹಿಸಿದೆ. ಜ್ಞಾಪನಾ ಪತ್ರದ ಪ್ರತಿಗಳನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಖಾತೆ ಸಚಿವ ರಾಜನಾಥ್ ಸಿಂಗ್, ರಾಜ್ಯ ಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಹಾಗೂ ಕರ್ನಾಟಕದ ರಾಜ್ಯಪಾಲ ವಾಜು ಬಾಯಿ ವಾಲಾ ಮೊದಲಾದವರಿಗೆ ಕಳುಹಿಸಿ ಕೊಡಲಾಗಿದೆ.
ಬೆಂಬಲ
ಕುಶಾಲನಗರ: ಪ್ರಸ್ತಾವಿತ ಕೊಡಗು ಜಿಲ್ಲೆ ಮೂಲಕ ಹಾದುಹೋಗಲಿರುವ ರೈಲ್ವೇ ಮಾರ್ಗ ಯೋಜನೆಯನ್ನು ತಕ್ಷಣ ರದ್ದುಗೊಳಿಸುವಂತೆ ಅಖಿಲ ಭಾರತೀಯ ಸನ್ಯಾಸಿ ಸಂಘಂ ಒತ್ತಾಯಿಸಿದೆ.
ಈ ಸಂಬಂಧ ಮೈಸೂರಿನಲ್ಲಿ ತಾ. 18 ರಂದು ನಡೆಯಲಿರುವ ಕೊಡಗು ರೈಲ್ವೇ ಮಾರ್ಗ ವಿರೋಧಿ ಹೋರಾಟ ಸಮಿತಿಯ ರ್ಯಾಲಿಗೆ ತಮ್ಮ ಸಂಪೂರ್ಣ ಬೆಂಬಲ ಇರುವದಾಗಿ ಸಂಘದ
ಕಾರ್ಯದರ್ಶಿ ಸ್ವಾಮಿ ರಮಾನಂದ ಅವರು ತಿಳಿಸಿದ್ದಾರೆ.