ಸೋಮವಾರಪೇಟೆ, ಫೆ.14: ಸೋಮವಾರಪೇಟೆ ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ತಾಲೂಕಿನ ಹಲವು ಕಳಪೆ ರಸ್ತೆ ಕಾಮಗಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತರ ತಂಡ ಇಲ್ಲಿನ ಲೋಕೋಪಯೋಗಿ ಇಲಾಖಾ ಅಭಿಯಂತರರ ಕಚೇರಿ ಎದುರು ಆಹೋರಾತ್ರಿ ಧರಣಿಗೆ ನಿರ್ಧರಿಸಿದ್ದು, ಇಲಾಖೆಯ ಮುಖ್ಯ ಅಭಿಯಂತರ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದಿದೆ.

ತಾಲೂಕಿನ ಹಲವು ರಸ್ತೆಗಳು ಕಳಪೆಯಾಗಿದ್ದು, ಕೆಲವೆಡೆ ಕಾಮಗಾರಿ ನಿರ್ವಹಿಸದೇ ಹಣ ಪಡೆಯಲಾಗಿದೆ. ರಸ್ತೆಗಳ ವಾರ್ಷಿಕ ನಿರ್ವಹಣೆಗೆಂದು ಹಣ ಬಿಡುಗಡೆಯಾಗುತ್ತಿದ್ದರೂ ಕೆಲಸ ನಿರ್ವಹಿಸದೇ ಗುತ್ತಿಗೆದಾರರು ಹಣ ಹೊಂದಿಕೊಳ್ಳುತ್ತಿದ್ದಾರೆ. ಕೆಲವೆಡೆ ಗ್ರಾಮಸ್ಥರೇ ರಸ್ತೆ ಚರಂಡಿ, ಕಾಡು ಕಡಿಯುವ ಕೆಲಸ ಮಾಡಿಕೊಂಡಿದ್ದು, ಇದನ್ನೂ ತಾವೇ ಮಾಡಿಸಿದ್ದಾಗಿ ಗುತ್ತಿಗೆದಾರರು ಹಣ ಕೊಳ್ಳೆಹೊಡೆಯುತ್ತಿದ್ದಾರೆ. ಇದಕ್ಕೆಲ್ಲಾ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್‍ಕುಮಾರ್ ಆರೋಪಿಸಿದರು.

ಬೆಂಗಳೂರು-ಜಾಲ್ಸೂರು ರಸ್ತೆಯ ಆಲೇಕಟ್ಟೆ ಬಳಿ 2015ರಲ್ಲಿ ರೂ. 21.4ಲಕ್ಷ ವೆಚ್ಚದಲ್ಲಿ ಕೈಗೊಂಡ ತಡೆಗೋಡೆ ಕಾಮಗಾರಿ ಕಳಪೆಯಾಗಿ ಕುಸಿದು ಬಿದ್ದು ಮೂರು ವರ್ಷ ಕಳೆದರೂ ಇಂದಿಗೂ ಕಾಮಗಾರಿ ಕೈಗೊಂಡಿಲ್ಲ. ಈಗಾಗಲೇ 16ಲಕ್ಷ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ. 2017ರ ಅಕ್ಟೋಬರ್‍ಗೆ ಕೆಲಸ ಪ್ರಾರಂಭಿಸುವದಾಗಿ ಮುಖ್ಯ ಅಭಿಯಂತರ ಭರವಸೆ ನೀಡಿದ್ದರೂ ಇಂದಿಗೂ ಪ್ರಾರಂಭಿಸಿಲ್ಲ ಎಂದು ಅನಿಲ್ ದೂರಿದರು.

ರೂ. 18.88 ಕೋಟಿ ವೆಚ್ಚದ ಕೂಡಿಗೆ-ಕೋವರ್‍ಕೊಲ್ಲಿ ರಸ್ತೆಯೂ ಕಳಪೆಯಾಗಿದ್ದು, ಮೋರಿ ಕಾಮಗಾರಿ ಸಮರ್ಪಕವಾಗಿಲ್ಲ. ಈ ಬಗ್ಗೆ ಮುಖ್ಯ ಅಭಿಯಂತರರಿಗೆ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ. ಕ್ರಿಯಾಯೋಜನೆಯಂತೆ ಕೆಲಸ ಮಾಡುತ್ತಿಲ್ಲ. ಇದೀಗ ಕಾಮಗಾರಿ ಪೂರ್ಣಗೊಳಿಸದೇ ಗುತ್ತಿಗೆದಾರ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಯಂತ್ರೋಪಕರಣಗಳನ್ನೂ ಸಾಗಿಸಿದ್ದಾರೆ ಎಂದು ಅನಿಲ್‍ಕುಮಾರ್ ಆರೋಪಿಸಿದರು.

ಒಂದು ಕೋಟಿ ವೆಚ್ಚದ ಕಾಮಗಾರಿಗಳಿಗೆ ಸ್ಥಳದಲ್ಲೇ ಗುಣಮಟ್ಟ ಪರಿಶೀಲನಾ ಘಟಕ ಸ್ಥಾಪಿಸಬೇಕೆಂಬ ನಿಯಮವಿದ್ದರೂ ಇದನ್ನು ಗಾಳಿಗೆ ತೂರಲಾಗಿದೆ. ಇಲಾಖೆಯ ಕಚೇರಿ ಬಳಿಯಲ್ಲಿರುವ ಘಟಕ ಮುಚ್ಚಲ್ಪಟ್ಟಿದೆ. ಈ ಎಲ್ಲಾ ಅಕ್ರಮಗಳಲ್ಲಿ ಸ್ಥಳೀಯ ಇಂಜಿನಿಯರ್‍ಗಳು ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‍ಇಪಿ ಟಿಎಸ್‍ಪಿ ಯೋಜನೆಯಡಿ ರೂ. 395.31 ಲಕ್ಷ ವೆಚ್ಚದಲ್ಲಿ 43 ಕಾಮಗಾರಿಗಳನ್ನು ನಿರ್ವಹಿಸಲು ಟೆಂಡರ್ ಅನುಮೋದನೆಗೊಂಡಿದ್ದು, ಇದರಲ್ಲಿ ಎಂ ಸ್ಯಾಂಡ್ ಬದಲಿಗೆ ಕಲ್ಲುಕೋರೆಯ ಡಸ್ಟ್ ಹಾಕುತ್ತಿದ್ದಾರೆ. ಇದರಿಂದ ಒಂದು ಲೋಡ್‍ನಲ್ಲಿ 5 ರಿಂದ 6 ಸಾವಿರ ಹಣ ದುರುಪಯೋಗವಾಗುತ್ತಿದೆ ಎಂದು ಅನಿಲ್ ಆರೋಪಿಸಿದರು.

2017-18ರ ರಾಜ್ಯಹೆದ್ದಾರಿ ವಾರ್ಷಿಕ ನಿರ್ವಹಣೆಯಲ್ಲಿ 260ಲಕ್ಷ ಹಣ ಬಿಡುಗಡೆಯಾಗಿದ್ದು, ಕೆಲಸ ಪ್ರಾರಂಭಿಸಿಲ್ಲ. 2015-16ರಲ್ಲಿ ಕೊಡ್ಲಿಪೇಟೆ-ಮಡಿಕೇರಿ ರಸ್ತೆ ನಿರ್ವಹಣೆಗೆ 65 ಲಕ್ಷ ಬಿಡುಗಡೆಯಾಗಿದ್ದು, ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಲ್ಲ. ಯಡೂರು-ಮಾವಿನಕಟ್ಟೆ-ತಲ್ತರೆಶೆಟ್ಟಳ್ಳಿ-ಕಿಕ್ಕರಳ್ಳಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪರಿಷತ್‍ನಲ್ಲಿ ಸಚಿವರೇ ಮಾಹಿತಿ ನೀಡಿದ್ದು, ಅಸಲಿಗೆ ಕಾಮಗಾರಿಯೇ ನಡೆಯುತ್ತಿಲ್ಲ ಎಂದು ದೂರಿದರು.

ಈ ಹಿನ್ನೆಲೆ ಇಲಾಖೆಯ ಮುಖ್ಯ ಅಭಿಯಂತರರು ಸ್ಥಳಕ್ಕೆ ಆಗಮಿಸಿ ಎಲ್ಲಾ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಇಂಜಿನಿಯರ್ ಬರದೇ ಇದ್ದರೆ ಕಚೇರಿ ಬಿಟ್ಟು ಕದಲುವದಿಲ್ಲ ಎಂದು ಧರಣಿಯಲ್ಲಿ ಭಾಗಿಯಾಗಿದ್ದ ಬಗ್ಗನ ಹರೀಶ್ ತಿಳಿಸಿದರು.

ಪ್ರತಿಭಟನೆಯಲ್ಲಿ ಶಾಂತಳ್ಳಿ ಗ್ರಾ.ಪಂ. ಸದಸ್ಯ ತ್ರಿಶೂಲ್, ಮಾಹಿತಿ ಹಕ್ಕು ಕಾರ್ಯಕರ್ತರಾದ ಕಾರ್ತಿಕ್, ಅಭಿನಂದನ್, ಸಂದೀಪ್, ಆರ್. ನಿಶ್ವಿತ್, ವಿಜಯಕುಮಾರ್, ಅಶ್ವಿನ್, ರವಿ ಪ್ರತಾಪ್, ಕಂಬಳ್ಳಿ ವಿಜಯ್, ಸುಮೇಧ ರಾಘವ ಸೇರಿದಂತೆ ಇತರರು ಭಾಗಿಯಾಗಿದ್ದರು.