ಒಡೆಯನಪುರ, ಫೆ. 14: ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಶಾಸಕಾಂಗ, ಕಾರ್ಯಾಂಗಕ್ಕಿಂತ ಮಾಧ್ಯಮ ವ್ಯವಸ್ಥೆಯಲ್ಲಿ ಹೆಚ್ಚಾಗಿ ನಂಬಿಕೆ ಮತ್ತು ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ಜೆಡಿಎಸ್ ಪಕ್ಷದ ಕೊಡಗು ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಶನಿವಾರಸಂತೆ ನಗರ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಪತ್ರಕರ್ತರು ಸಮಾಜವನ್ನು ಪರಿವರ್ತನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ, ಜನರು ಪ್ರಜಾಪ್ರಭುತ್ವದ ವ್ಯವಯಸ್ಥೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕರ್ತವ್ಯದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ, ಈ ನಿಟ್ಟಿನಲ್ಲಿ ಜನರು ಮಾಧ್ಯಮದ ಮೊರೆ ಹೋಗುತ್ತಾರೆ, ಪ್ರತಿದಿನ ಸುದ್ದಿಗಾರಿಕೆಯಲ್ಲಿ ತಲ್ಲೀನರಾಗುವ ಪತ್ರಕರ್ತರಿಗೆ ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಯ ಅವಶ್ಯಕತೆವಿದೆ ಎಂದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತ ಸಮೂಹ ಬಾಂಧವರ ಮಾನಸಿಕ ಒತ್ತಡ ನಿಯಂತ್ರಣಕ್ಕೆ ಕ್ರೀಡಾಕೂಟದ ಪಾಲ್ಗೊಳ್ಳುವಿಕೆ ಸಹಕಾರಿಯಾಗುತ್ತದೆ, ಸುದ್ದಿಯ ಜಂಜಾಟದಲ್ಲಿರುವ ಪತ್ರಕರ್ತರಿಗೆ ಒಂದಿಷ್ಟು ಮನರಂಜನೆ ಒದಗಿಸುವ ಸಲುವಾಗಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್, ಮಾಜಿ ಅಧ್ಯಕ್ಷ ಎಸ್.ಎನ್. ರಘು, ಪತ್ರಕರ್ತ ಸಂಘದ ರಾಜ್ಯ ಪ್ರತಿನಿಧಿ ಮುರಳೀಧರ್, ಸೋಮವಾರಪೇಟೆ ಪ್ರೆಸ್‍ಕ್ಲಬ್ ಅಧ್ಯಕ್ಷ ಎಸ್. ಮಹೇಶ್, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ ಮಾತನಾಡಿದರು. ಸಮಾರಂಭದಲ್ಲಿ ಪ್ರಮುಖರಾದ ಡಾ. ಉದಯ್ ಕುಮಾರ್, ಎಂ.ಎನ್. ಚಂದ್ರಮೋಹನ್ ಮುಂತಾದವರು ಹಾಜರಿದ್ದರು.

ಪಂದ್ಯಾವಳಿಯಲ್ಲಿ ಮಡಿಕೇರಿಯ ಮೀಡಿಯಾ ಇಲೆವೆನ್ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ವೀರಾಜಪೇಟೆಯ ಸೌತ್ ಟೈಗರ್ಸ್ ತಂಡ ದ್ವಿತೀಯ ಮತ್ತು ಮಡಿಕೇರಿ ಟೀಮ್ ಕೋಬ್ರ ತಂಡ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.