ಸಿದ್ದಾಪುರ, ಫೆ. 14: ಇತಿಹಾಸ ಪ್ರಸಿದ್ಧ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ಖ್ಯಾತ ಸಿತಾರ್ ವಾದಕ ಉಸ್ತಾದ್ ಅಫೀಜ್ ಬಲೆ ಖಾನ್ ಹಾಗೂ ಸಂಗÀಡಿಗರಿಂದ ಸಿತಾರ್‍ವಾದನ ಭಕ್ತಾದಿಗಳ ಮನ ತಣಿಸಿತು.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಉಸ್ತಾದ್ ಅಫೀಜ್ ಬಲೆ ಕಾನ್ ಹಾಗೂ 30 ಮಂದಿ ಸಿತಾರ್ ವಾದಕರು ಏಕಕಾಲದಲ್ಲಿ ಸಿತಾರ್ ವಾದನದಿಂದ ನಾದಸುಧೆ ಹರಿಯಿತು. ಶಿವರಾತ್ರಿಯ ದಿನದಂದು ಸಂಜೆ 7 ಗಂಟೆಗೆ ಆರಂಭವಾದ ಸಿತಾರ್‍ವಾದನ 9 ಗಂಟೆಯವರೆಗೂ ನಡೆಯಿತು. ಏಕಕಾಲದಲ್ಲಿ 30 ಮಂದಿ ಸಿತಾರ್‍ವಾದಕರು ಭಕ್ತಿಗೀತೆ, ಜಾನಪದ ಗೀತೆ ಸೇರಿದಂತೆ ದಾಸರ ಪದಗಳ ಹಾಡುಗಳನ್ನು ನುಡಿಸಿದರು. ಬಳಿಕ ಉಸ್ತಾದ್ ಅಫೀಜ್ ಬಲೆ ಖಾನ್ ಅವರಿಂದ ಗೀತಗಾಯನ ನಡೆಯಿತು.

ದಾಸರ ಪದಗಳು, ಶ್ರೀಕೃಷ್ಣ, ಶಿವ ಸೇರಿದಂತೆ ದೇವರ ನಾಮಗಳನ್ನು ಹಾಡಿ, ನೆರೆದಿದ್ದವರನ್ನು ಸಂಗೀತದ ಅಲೆಯಲ್ಲಿ ತೇಲಿಸಿದರು. ಕಾರ್ಯಕ್ರಮದಲ್ಲಿ ತಬಲ, ಕೊಳಲುವಾದಕರು ಸೇರಿದಂತೆ ಹಲವು ಕಲಾವಿದÀರು ಪಾಲ್ಗೊಂಡಿದ್ದರು. ಅಫೀಜ್ ಖಾನ್ ಅವರ ಸಿತಾರ್ ವಾದನವನ್ನು ಕೇಳಲು ಜಿಲ್ಲೆಯ ವಿವಿಧ ಭಾಗದಿಂದ ಹಾಗೂ ಹೊರ ಜಿಲ್ಲೆಗಳಿಂದ ನೂರಾರು ಮಂದಿ ಆಗಮಿಸಿದ್ದರು. ಸಿತಾರ್ ವಾದನ ತಂಡದಲ್ಲಿ ಸಿದ್ದಾಪುರದ ಅಜ್ಜುಕುಟ್ಟಿರ ಸುಬ್ಬಯ್ಯ ಅವರ ಪುತ್ರಿ ರೋಶಿಣಿ ಸುಬ್ಬಯ್ಯ ಪಾಲ್ಗೊಂಡಿದ್ದರು. ಇದೇ ಸಂದರ್ಭ ಆಡಳಿತ ಮಂಡಳಿಯ ವತಿಯಿಂದ ಉಸ್ತಾದ್ ಅಫೀಜ್ ಖಾನ್‍ರವರನ್ನು ಸನ್ಮಾನಿಸಿ ಗೌರವಿಸಲಾಯಿತು.