ಕೂಡಿಗೆ, ಫೆ. 14: ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶುದ್ಧೀಕರಣ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ನೀಡದ ಹಿನ್ನೆಲೆ ಏಳು ಜನ ಕಾರ್ಮಿಕರು ಹಾಗೂ ಹೆಬ್ಬಾಲೆ ಗ್ರಾಮಕ್ಕೆ ಶಿವರಾತ್ರಿ ದಿನವೇ ನೀರು ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೆಬ್ಬಾಲೆ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಹೆಬ್ಬಾಲೆ ಗ್ರಾಮದಲ್ಲಿ ಕಳೆದ 10 ವರ್ಷಗಳ ಹಿಂದೆ ರೂ. ಎಂಟು ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಿಂದ ನೀರನ್ನು ಸರಬರಾಜು ಮಾಡಿ, ಕೇಂದ್ರವೊಂದರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಶುದ್ಧೀಕರಣ ಕೇಂದ್ರ ಹಾಗೂ ಬೃಹತ್ ನೀರಿನ ಟ್ಯಾಂಕ್ ಅನ್ನು ನಿರ್ಮಿಸಿ 2.5 ದಶಲಕ್ಷ ಸಾಮಥ್ರ್ಯದ ನೀರನ್ನು ದಿನಂಪ್ರತಿ ಶುದ್ಧೀಕರಿಸಿ ಕೊಡಗಿನ ಗಡಿಭಾಗ ಶಿರಂಗಾಲ, ತೊರೆನೂರು ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 12 ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ.
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಹಳೆದ 17 ತಿಂಗಳ ಹಿಂದೆ ಈ ಬೃಹತ್ ಕುಡಿಯುವ ನೀರಿನ ಯೋಜನೆಯ ಘಟಕವನ್ನು ಕೊಡಗು ಜಿಲ್ಲಾ ಪಂಚಾಯ್ತಿಗೆ ಹಸ್ತಾಂತರ ಮಾಡಲಾಗಿದೆ. ಜವಾಬ್ದಾರಿಯನ್ನು ಜಿಲ್ಲಾ ಪಂಚಾಯ್ತಿಯ ಕುಡಿಯುವ ನೀರಿನ ಯೋಜನೆಯ ಇಂಜಿನಿಯರಿಂಗ್ ವಿಭಾಗ ನಿರ್ವಹಿಸುತ್ತಿದೆ. ಆದರೆ, ಇಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ 7 ಜನÀರಿಗೆ ಒಂದು ವರ್ಷದಿಂದಲೂ ವೇತನ ನೀಡದ ಹಿನ್ನೆಲೆಯಲ್ಲಿ ದಿಢೀರ್ ಆಗಿ ಕಾವೇರಿ ನದಿಯಿಂದ ನೀರೆತ್ತುವ ಕೇಂದ್ರಕ್ಕೂ, ಶುದ್ಧೀಕರಣ ಕೇಂದ್ರಕ್ಕೂ ಕಾರ್ಮಿಕರು ಬೀಗ ಜಡಿದು ಯಾವದೇ ಕಾರ್ಯ ನಿರ್ವಹಿಸದೆ ಪ್ರತಿಭಟನೆ ನಡೆಸಿದರು.
ಗ್ರಾಮಗಳಿಗೆ ನೀರು ಸರಬರಾಜಾಗದ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಜಮಾಯಿಸಿದರು. ಕಾರ್ಮಿಕರ ಪ್ರತಿಭಟನೆಯ ಕಾರಣ ತಿಳಿದ ನಂತರ ಕಾರ್ಮಿಕರೊಂದಿಗೆ ಗ್ರಾಮಸ್ಥರು ಪ್ರತಿಭಟನೆಗೆ ಕೈಜೋಡಿಸಿದರು.
ಟ್ಯಾಂಕರ್ ನೀರು : ಶುದ್ಧ ಕುಡಿಯುವ ನೀರಿನ ಘಟಕದ ಕಾರ್ಮಿಕರು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಶಿವರಾತ್ರಿ ಹಬ್ಬದ ದಿನವಾದ್ದರಿಂದ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಹೆಬ್ಬಾಲೆ ಗ್ರಾಮ ಪಂಚಾಯಿತಿಯಿಂದ ಆಯಾಯಾ ಬೀದಿಗಳಿಗೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರನ್ನು ವಿತರಿಸಿದರು.
ಪ್ರತಿಭಟನೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಾರ್ಮಿಕರಾದ ಶ್ರೀನಿವಾಸ, ರಮೇಶ್, ಮಂಜು, ಚಂದ್ರು, ಸಂತೋಷ್, ದಿನೇಶ್, ಸೋಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಮಧುಸೂದನ್, ಗ್ರಾಮಸ್ಥರಾದ ನಾರಾಯಣ, ಗೋಪಾಲ್, ಚಂದ್ರಶೇಖರ, ಮಹೇಶ, ಸೋಮಣ್ಣ, ಅಶ್ವತ್ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.
ಸ್ಥಳಕ್ಕೆ ತಾಲೂಕು ಪಂಚಾಯಿತಿ ಇಂಜಿನಿಯರ್ ವೀರೇಶ್ ಭೇಟಿ ನೀಡಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರ ಬೇಡಿಕೆಯನ್ನು ಆಲಿಸಿ ಒಂದು ತಿಂಗಳ ವೇತನವನ್ನು ತಾ. 20 ರಂದು ನೀಡಲಾಗುವದು. ಇನ್ನುಳಿದ ತಿಂಗಳ ವೇತನವನ್ನು ಮಾರ್ಚ್ ಅಂತ್ಯದೊಳಗೆ ನೀಡುವ ಭರವಸೆ ನೀಡಿದರು. ಆದರೆ, ಕಾರ್ಮಿಕರು ಇದಕ್ಕೊಪ್ಪದೆ ಪ್ರತಿಟನೆಯನ್ನು ಮುಂದುವರೆಸಿದರು. ಇಂಜಿನಿಯರ್ ಸ್ಥಳದಿಂದ ತೆರಳಿದರು.