ಮಡಿಕೇರಿ, ಫೆ. 14: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ವರಿಷ್ಠರ ಸಲಹೆ ಹಾಗೂ ಕ್ಷೇತ್ರದ ಜನತೆಯ ಅಪೇಕ್ಷೆಯಂತೆ ಸ್ಪರ್ಧೆ ಮಾಡುತ್ತಿರುವದಾಗಿ ಪಕ್ಷದ ಹಿರಿಯ ಮುಖಂಡ ಮಾಜೀ ಸಚಿವ ಬಿ.ಎ. ಜೀವಿಜಯ ಇಂಗಿತ ವ್ಯಕ್ತಪಡಿಸಿದ್ದಾರೆ. ಚುನಾವಣಾ ಸ್ಪರ್ಧೆ ಸಂಬಂಧ ‘ಶಕ್ತಿ’ಯೊಂದಿಗೆ ಅವರು ಹಲವು ವಿಷಯಗಳನ್ನು ಹೊರಗೆಡವಿದ್ದಾರೆ.‘ಶಕ್ತಿ’: ಈ ನಿಮ್ಮ ಇಳಿ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಬೇಕಿತ್ತೇ?ಜೀವಿಜಯ: ಪ್ರಸಕ್ತ ರಾಜಕೀಯ ವಾತಾವರಣದಲ್ಲಿ ನಿಜವಾಗಿಯೂ ನನಗೆ ಬೇಕಿರಲಿಲ್ಲ. ನಾನು ವೃತ್ತಿಪರ ರಾಜಕಾರಣಿಯೂ ಅಲ್ಲ. ನಾನೊಬ್ಬ ಕೃಷಿಕ. ಆದರೆ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಭವಿಷ್ಯದ ಮುಖ್ಯಮಂತ್ರಿಯಾಗಬೇಕೆಂಬ ಆಶಯ ಕರ್ನಾಟಕದ ಬಹುತೇಕ ಜನತೆಗಿದೆ. ಆ ಸಲುವಾಗಿ ಕೊಡಗಿನಿಂದ ಕೂಡ ಜೆಡಿಎಸ್ ಎರಡು ಸ್ಥಾನಗಳಲ್ಲಿ ಗೆದ್ದು, ಕರ್ನಾಟಕದ ಅಭಿವೃದ್ಧಿಗೆ ಮತ್ತು ಕೊಡಗಿನ ಹಿತಕ್ಕಾಗಿ ಬದಲಾವಣೆ ಅಗತ್ಯವೆನಿಸಿದೆ.

‘ಶಕ್ತಿ’: ಜೆಡಿಎಸ್, ತಾವು ಮತ್ತು ಸಂಕೇತ್ ಪೂವಯ್ಯರನ್ನು ಅಭ್ಯರ್ಥಿಗಳೆಂದು ಘೋಷಿಸಿದೆಯೇ?

ಜೀವಿಜಯ: ಇದೇ ತಾ. 17 ರಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ನಮ್ಮ ಪಕ್ಷದ ಹೈಕಮಾಂಡ್ ದಿಲ್ಲಿಯಲ್ಲಿಲ್ಲ. ನಮ್ಮದು ಪ್ರಾದೇಶಿಕ ಪಕ್ಷವಾಗಿದ್ದು, 224 ಸ್ಥಾನಗಳಿಗೂ ಜೆಡಿಎಸ್ ಅಭ್ಯರ್ಥಿಗಳನ್ನು ಮುಖಂಡರು ಘೋಷಿಸಲಿದ್ದಾರೆ.

‘ಶಕ್ತಿ’: ಕರ್ನಾಟಕದಲ್ಲಿ ಮತ್ತು ಜಿಲ್ಲೆಯಲ್ಲಿ ಜೆಡಿಎಸ್ ಗೆಲ್ಲುವದೆ?

ಜೀವಿಜಯ: ರಾಜ್ಯದ ಜನತೆ ಕಾಂಗ್ರೆಸ್ ಹಾಗೂ ಬಿಜೆಪಿಯಂತಹ ದಿಲ್ಲಿ ಹೈಕಮಾಂಡ್‍ನಿಂದ ನಾಡಿನ ನೆಲ, ಜಲ, ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗದ ಸನ್ನಿವೇಶದೊಂದಿಗೆ ಭ್ರಮನಿರಶನ ಗೊಂಡಿದ್ದಾರೆ. ಹೀಗಾಗಿ ಪ್ರಾದೇಶಿಕ ಪಕ್ಷದ ಆಳ್ವಿಕೆ ಬಯಸುತ್ತಿದ್ದಾರೆ. ಜೆಡಿಎಸ್ ಮಾತ್ರ ರಾಜ್ಯದ ಹಿತ ಕಾಪಾಡುವ ವಿಶ್ವಾಸ ಹೊಂದಿದ್ದಾರೆ. ಆ ಮೂಲಕವೇ ಕೊಡಗಿನ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ.

‘ಶಕ್ತಿ’: ಕರ್ನಾಟಕ ಅಥವಾ ಕೊಡಗು ಪ್ರಾದೇಶಿಕತೆಗೆ ಮನ್ನಣೆ ನೀಡುವದೆ?

ಜೀವಿಜಯ: ನಾನು ಈ ಹಿಂದೆ ಸಮಗ್ರ ಸೋಮವಾರಪೇಟೆ ವಿಧಾನಸಭಾ ಕ್ಷೇತ್ರದ ನಕಾಶೆಯೊಂದಿಗೆ ಎಲ್ಲ ಗ್ರಾಮೀಣ ಸಂಪರ್ಕ ರಸ್ತೆಗಳೊಂದಿಗೆ ಮೂಲಭೂತ ಸೌಕರ್ಯಕ್ಕೆ ಯೋಜನೆ ರೂಪಿಸಿದ್ದೆ. ಹಂತ ಹಂತವಾಗಿ ಅವುಗಳನ್ನು ಈಡೇರಿಸುತ್ತಾ ಬಂದಿರುವೆ. ಅಂತೆಯೇ ರಾಜ್ಯದ ಸಮಗ್ರ ಅಭ್ಯುದಯಕ್ಕಾಗಿ ಜೆಡಿಎಸ್ ಯೋಜನೆ ರೂಪಿಸಿದ್ದು,

(ಮೊದಲ ಪುಟದಿಂದ) ಜನತೆ ಖಂಡಿತಾ ಬದಲಾವಣೆ ಬಯಸಿದ್ದಾರೆ.

‘ಶಕ್ತಿ’: ಕೊಡಗಿನಲ್ಲಿ ಜಾತಿಗಳ ನಡುವೆ ರಾಜಕೀಯ ಸಂಘರ್ಷದ ಹೊಗೆ ಇದೆಯಲ್ಲಾ?

ಜೀವಿಜಯ: ಕೊಡಗು ಬ್ರಿಟಿಷ್ ಆಳ್ವಿಕೆಯ ಸುಮಾರು 220 ವರ್ಷಗಳಿಂದ ಸಾಕಷ್ಟು ಬದಲಾವಣೆಯೊಂದಿಗೆ, ಮೂಲ ನಿವಾಸಿಗಳ ಸಹಿತ ವಿವಿಧೆಡೆಯ ಜನರು ಬದುಕು ಕಟ್ಟಿಕೊಂಡಿದ್ದಾರೆ. ಭಾರತ ಸಂವಿಧಾನ ಕಲ್ಪಿಸಿರುವ ಹಕ್ಕು ಅನುಸಾರ ಎಲ್ಲರಿಗೂ ಎಲ್ಲೆಡೆಯೂ ಜೀವನ ನಡೆಸಲು ಅವಕಾಶವಿದೆ. ಪ್ರತಿಯೊಬ್ಬರಿಗೂ ಅವರದ್ದೇ ಸಂಪ್ರದಾಯಗಳಿವೆ. ಹಾಗಾಗಿ ವಿವಿಧತೆಯಲ್ಲಿ ಏಕತೆಯಿಂದ ಸಹಬಾಳ್ವೆ ನಡೆಸುವದು ಎಲ್ಲರ ಕರ್ತವ್ಯ. ಪ್ರಸಕ್ತ ರಾಜಕೀಯ ಅಥವಾ ಜನಾಂಗೀಯ ನೆಲೆಯಲ್ಲಿ ಅಸಮಾತೋಲನದ ಚರ್ಚೆಯಾಗುತ್ತಿದೆ. ಅದು ಸಂಘರ್ಷಕ್ಕೆ ಎಡೆಮಾಡಿಕೊಡದೆ ಸಾಮರಸ್ಯಕ್ಕೆ ಒತ್ತು ನೀಡುವಂತಾಗಬೇಕಿದೆ.

‘ಶಕ್ತಿ’: ತಮ್ಮ ಅನುಭವದಂತೆ ಕೊಡಗಿನ ಸಮಸ್ಯೆಗಳಿಗೆ ಪರಿಹಾರ ಹೇಗೆ?

ಜೀವಿಜಯ: ಇಂದು ಜಿಲ್ಲೆಯಲ್ಲಿ ಯಾವೊಬ್ಬ ರೈತ ಅಥವಾ ಬೆಳೆಗಾರ ಕಾಫಿ ಕೃಷಿಯಿಂದ ನೆಮ್ಮದಿಯ ಬದುಕು ನಿರ್ವಹಿಸಲಾರದ ಸಂದಿಗ್ಧ ಸ್ಥಿತಿ ಎದುರಾಗಿದೆ. ಅಧಿಕಾರಶಾಹಿತ್ವ ಶಾಸಕಾಂಗದ ಮಾತು ಕೇಳದಂತಾಗಿದೆ. ಭ್ರಷ್ಟಾಚಾರ ಶಾಸಕಾಂಗ, ಕಾರ್ಯಾಂಗದೊಂದಿಗೆ ಪ್ರಜೆಗಳನ್ನು ವ್ಯಾಪಿಸಿಕೊಂಡಿದೆ. ಇದಕ್ಕೆಲ್ಲ ಕಡಿವಾಣ ಹಾಕುವಂತಹ ಪ್ರಜಾಪ್ರತಿನಿಧಿಗಳ ಆಳ್ವಿಕೆ ಅನಿವಾರ್ಯವಾಗಿದೆ. ಆ ಸಲುವಾಗಿಯೇ ಜೆಡಿಎಸ್ ಸರಕಾರದೊಂದಿಗೆ ಪ್ರಾದೇಶಿಕ ಆಳ್ವಿಕೆ ನೆರೆಯ ತಮಿಳುನಾಡಿನಲ್ಲಿ ಕರ್ನಾಟಕಕ್ಕೂ ಅನಿವಾರ್ಯ.

‘ಶಕ್ತಿ’: ನಿಮ್ಮ ಮುಂದಿರುವ ಅಂತಹ ಕನಸುಗಳೇನು?

ಜೀವಿಜಯ: ಹಿಂದೆ ನಾನು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಅರಣ್ಯ ಸಚಿವನಾಗುವದರೊಂದಿಗೆ, ಸಿರಸಿ ಮತ್ತು ಪೊನ್ನಂಪೇಟೆಗೆ ಅರಣ್ಯ ಮಹಾವಿದ್ಯಾಲಯ ತಂದಿದ್ದೆ. ಬಳಿಕ ಜೀವಿಜಯ ಸದನ ಸಮಿತಿ ರಚನೆಗೊಂಡಾಗ ಕರ್ನಾಟಕ ಹಾಗೂ ಕೊಡಗಿನ ನಿತ್ಯ ಹರಿದ್ವರ್ಣದ ಕಾಡುಗಳು ಸೇರಿದಂತೆ ಕಾಫಿ ಬೆಳೆಯುವ ಜಿಲ್ಲೆಗಳ ನೈಸರ್ಗಿಕ ವಿಷಯಗಳ ಅಧ್ಯಯನ ನಡೆಸಿರುವೆ. ಅಂದಿನ ಕೇಂದ್ರ ಮಂತ್ರಿ ಐ.ಕೆ. ಗುಜ್ರಾಲ್ ಎದುರು ಸಮಗ್ರ ದಾಖಲೆಯೊಂದಿಗೆ ಕಾಫಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಿದೆ. ಇಂದು ಪರಿಸ್ಥಿತಿ ಶೋಚನೀಯವಾಗಿದೆ. ಆ ದಿಸೆಯಲ್ಲಿ ಗಂಭೀರ ಚಿಂತನೆಯಾಗಬೇಕಿದೆ. ಕೊಡಗು-ಸುಬ್ರಹ್ಮಣ್ಯ ರಸ್ತೆಯ ಸಂಪರ್ಕ ಯೋಜನೆ ಸಾಕಾರಗೊಳಿಸಬೇಕಿದೆ. ಗ್ರಾಮೀಣ ಶಾಲೆಗಳೊಂದಿಗೆ ಕೊಡಗಿನಲ್ಲಿ ಸರಕಾರಿ ಶಾಲೆಗಳ ಉನ್ನತೀಕರಣ ಮಾಡಬೇಕಿದೆ. ಗ್ರಾಮ ಸಂಪರ್ಕ ರಸ್ತೆಗಳು ಪ್ರಗತಿಯಾಗಬೇಕಿದೆ. ಹಳ್ಳಿಗಾಡಿನ ಮಕ್ಕಳಿಗೆ ಉನ್ನತ ಶಿಕ್ಷಣದೊಂದಿಗೆ ಉದ್ಯೋಗ ಕಲ್ಪಿಸಬೇಕಿದೆ. ಇಂತಹ ಹತ್ತಾರು ಕನಸುಗಳನ್ನು ಸಾಕಾರಗೊಳಿಸಲು ಆಶಯ ಹೊತ್ತು ಸ್ಪರ್ಧೆ ಬಯಸಿದ್ದೇನೆ.

‘ಶಕ್ತಿ’: ಮಾಜಿ ಸಚಿವ ಯಂ.ಸಿ. ನಾಣಯ್ಯ ಬೆಂಬಲಿಗರು ನಿಮ್ಮನ್ನು ಸೋಲಿಸುವ ಮಾತನಾಡುತ್ತಿದ್ದಾರಲ್ಲಾ?

ಜೀವಿಜಯ: ಚುನಾವಣೆ ಬಂದಾಗಲೆಲ್ಲಾ ನನ್ನನ್ನು ಸೋಲಿಸುವ ಮಾತನಾಡುವವರು ಯಾರನ್ನು ಗೆಲ್ಲಿಸುತ್ತಾರೆ? ನಾನು ಎಂದಿಗೂ ಹಿಂಬಾಗಿಲಿನಿಂದ ರಾಜಕಾರಣ ಮಾಡಿಲ್ಲ. ಸದಾ ಜನತೆಯ ನಡುವೆ ಇದ್ದು, ಚುನಾವಣೆ ಎದುರಿಸುತ್ತಾ ಬಂದಿರುವೆ. ಯಾವತ್ತೂ ಠೇವಣಿ ಕಳೆದುಕೊಂಡಿಲ್ಲವೆಂದು ನೆನಪಿಸಬೇಕಿದೆ. ಹಾಗಾಗಿ ನನ್ನ ಆಯ್ಕೆ ಬಯಸುವವರು ಮತದಾರ ಪ್ರಭುಗಳು.

ಶಕ್ತಿ: ರೈಲ್ವೇ, ಹೆದ್ದಾರಿ, ಕಾಡಾನೆ-ಮಾನವ ಸಂಘರ್ಷಕ್ಕೆ ಪರಿಹಾರ?

ಜೀವಿಜಯ: ಇಂದು ರಾಷ್ಟ್ರ, ರಾಜ್ಯ, ಜಿಲ್ಲೆಯ ಜನಸಂಖ್ಯೆಗೆ ತಕ್ಕಂತೆ ಮೂಲಭೂತ ಸೌಕರ್ಯ ಕೈಗೊಳ್ಳಬೇಕಿದೆ. ಯಾವದೇ ಅಭಿವೃದ್ಧಿ ಕೈಗೊಳ್ಳುವಾಗ ಭೌಗೋಳಿಕ ನೆಲೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಆನೆ-ಮಾನವ ಸಂಘರ್ಷವನ್ನು ತಪ್ಪಿಸಲು ಕೂಡ ಹಿಂದೆಯೇ ಜೀವಿಜಯ ಸಮಿತಿ ಅಧ್ಯಯನ ನಡೆಸಿದೆ. ಅವೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಕರ್ನಾಟಕದಲ್ಲಿ ಪ್ರಾದೇಶಿಕ ಸರಕಾರ ರಚನೆಯಾದಾಗ ಸಮಸ್ಯೆಗಳನ್ನು ಪರಿಹರಿಸಲು ಸುಲಭ ಸಾಧ್ಯವಾಗಲಿದೆ.

ನಿತ್ಯ ಹರಿದ್ವರ್ಣ ಕಾಡುಗಳನ್ನು ಕಾಪಾಡಿಕೊಳ್ಳುವದರಿಂದ ಮಾತ್ರ ವನ್ಯಪ್ರಾಣಿಗಳು, ಪ್ರಕೃತಿ, ಜಲಮೂಲ ಸಂರಕ್ಷಣೆ ಸಾಧ್ಯವಾಗಲಿದೆ. ಪ್ರಕೃತಿಯ ಮೇಲೆ ಭಕಾಸುರನಂತೆ ವರ್ತಿಸಿದರೆ ಭವಿಷ್ಯದಲ್ಲಿ ಮನುಕುಲವೇ ಗಂಡಾಂತರ ಅನುಭವಿಸಬೇಕಾದೀತು ಎಂದು ಜೀವಿಜಯ ಎಚ್ಚರಿಸಿದರು.