*ಮಡಿಕೇರಿ, ಫೆ. 14 : ವೀರಾಜಪೇಟೆ ತಾಲೂಕಿನ ಬೇತ್ರಿಯ ಕಾವೇರಿ ನದಿಯಿಂದ ಬಲಮುರಿಯವರೆಗೆ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಜಿಲ್ಲಾಡಳಿತ ಈ ಕೂಡಲೇ ಕಾನೂನು ಬದ್ಧ ಆಡಳಿತಾತ್ಮಕ ಕ್ರಮವನ್ನು ಕೈಗೊಳ್ಳುವದರ ಮೂಲಕ ಈಗಿಂದೀಗಲೇ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತಾಗಬೇಕು. ಹೀಗೆ ರಾಜಾರೋಷವಾಗಿ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಕೂಡ ಸಂಬಂಧಿಸಿದ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಜಾರಿರುವದು ಸಂಶಯಕ್ಕೆಡೆಯುಂಟು ಮಾಡಿದೆ ಎಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಜೀವನದಿ ಕಾವೇರಿ ಮತ್ತು ಅದರ ಉಪನದಿಗಳಾದ ಹಾರಂಗಿ, ಲಕ್ಷ್ಮಣತೀರ್ಥ ಮತ್ತು ಇತರೆ ಉಪನದಿಗಳ ಒಡಲನ್ನು ಬರಿದು ಮಾಡಿ ನದಿ ಮೂಲಕ್ಕೆ ಧಕ್ಕೆ ತಂದೊಡ್ಡುತ್ತಿರುವ ಈ ಅಕ್ರಮ ಮರಳು ದಂಧೆಯ ವಿರುದ್ಧ ಜಿಲ್ಲಾಡಳಿತ ಉನ್ನತ ಮಟ್ಟದ ಜಿಲ್ಲಾ ಟಾಸ್ಕ್‍ಫೋರ್ಸ್ ಒಂದನ್ನು ರಚನೆ ಮಾಡಿ ಅಕ್ರಮಿಗಳು ಹಾಗೂ ಪತ್ರಿಕೆಯಲ್ಲಿ ವರದಿಯಾದಂತೆ ಈ ಅಕ್ರಮ ಕೃತ್ಯದಲ್ಲಿ
(ಮೊದಲ ಪುಟದಿಂದ) ತೊಡಗಿಸಿಕೊಂಡಿರುವ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಇಂತಹವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವಂತಾಗಬೇಕು. ಕಾವೇರಿ ಮತ್ತು ಅದರ ಉಪನದಿಗಳ ಒಡಲಲ್ಲಿ ಎಗ್ಗಿಲ್ಲದೆ ಕೊಡಗಿನ ಉದ್ದಗಲಕ್ಕೂ ಹಗಲು - ರಾತ್ರಿ ಎನ್ನದೇ ನಡೆಯುತ್ತಿರುವ ಈ ಅಕ್ರಮ ಮರಳು ದಂಧೆ ಪ್ರದೇಶಗಳಿಗೆ ಜಿಲ್ಲಾಧಿಕಾರಿಯವರು ಹಠಾತ್ ಭೇಟಿ ನೀಡಿ ಇಂತಹ ಅಕ್ರಮ ದಂಧೆಯಲ್ಲಿ ಶಾಮೀಲಾಗಿರುವ ಕ್ರಿಮಿನಲ್ ವ್ಯಕ್ತಿಗಳ ಮತ್ತು ಅಧಿಕಾರಿ - ಸಿಬ್ಬಂದಿಗಳ ವಿರುದ್ಧವು ಕಾನೂನಿನ ಕ್ರಮವನ್ನು ಕೈಗೊಳ್ಳುವಂತಾಗಬೇಕು ಎಂದು ಸಲಹೆಯಿತ್ತಿದ್ದಾರೆ.
ಕಾವೇರಿ ನದಿಯನ್ನೇ ಬರಿದು ಮಾಡುವ ಕುಕೃತ್ಯ ನಡೆಸಿದ್ದಾರೆ. ಕೊಡಗು ಜಿಲ್ಲೆ ಸೇರಿದಂತೆ ಕಾವೇರಿ ನದಿಯ್ಯನೇ ಕೃಷಿಗೆ ಆಶ್ರಯಿಸಿಕೊಂಡು ನಿತ್ಯವು ಬದುಕುತ್ತಿರುವ ಮೈಸೂರು, ಮಂಡ್ಯ ಮೂಲದ ಲಕ್ಷಾಂತರ ಕೃಷಿಕರ ಮತ್ತು ಬೆಂಗಳೂರಿನಂತಹ ಬೃಹತ್ ನಗರ ಪ್ರದೇಶದ ಸುಮಾರು ಒಂದು ಕೋಟಿಗೂ ಹೆಚ್ಚು ಜನರ ಕುಡಿಯುವ ನೀರಿಗೂ ಬರ ಬರುವದರಲ್ಲಿ ಯಾವದೇ ಸಂಶಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.