ಮಡಿಕೇರಿ, ಫೆ. 14: ಕುಶಾನಗರದ ಗುಂಡೂರಾವ್ ಬಡಾವಣೆಯಲ್ಲಿ ಕಾಯ್ದಿರಿಸಿರುವ ನಿವೇಶನಗಳನ್ನು ಬಡ ನಿರ್ವಸತಿಗರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ಅಹಿಂದ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಮನವಿಯಲ್ಲಿ ಜಿಲ್ಲಾಡಳಿತದ ಗಮನ ಸೆಳೆದಿರುವ ಅಹಿಂದ ಒಕ್ಕೂಟ ಅಧ್ಯಕ್ಷ ಎಂ.ಕೆ. ಹಮೀದ್ ಹಾಗೂ ಇತರರು ಕುಶಾಲನಗರ ವ್ಯಾಪ್ತಿಯಲ್ಲಿ ಸೂರಿಲ್ಲದೆ ಇರುವ 860ಕ್ಕೂ ಅಧಿಕ ಬಡ ಕುಟುಂಬಗಳಿವೆ ನಿವೇಶನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ದಿಸೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿ ಗಮನ ಹರಿಸುವಂತೆ ನಿರ್ದೇಶಿಸುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿರುವ ಒಕ್ಕೂಟ ಪ್ರಮುಖರು, ಗುಂಡೂರಾವ್ ಬಡಾವಣೆಯಲ್ಲಿ ಬಡವರಿಗೆ ಸೂರು ಕಲ್ಪಿಸಿ, ತಾವರೆಕೆರೆಯನ್ನು ಸಾರ್ವಜನಿಕ ಉಪಯೋಗವಾಗುವಂತೆ ಅಭಿವೃದ್ಧಿ ಮಾಡಬೇಕೆಂದು ಮನವಿಯಲ್ಲಿ ಬೇಡಿಕೆ ಸಲ್ಲಿಸಿದ್ದಾರೆ.

ತಪ್ಪಿದ್ದಲ್ಲಿ ಬಡವರಿಗೆ ಮೀಸಲಿರಿಸಿರುವ ನಿವೇಶನಗಳು ಪ್ರಭಾವಿಗಳ ಪಾಲಾಗುವ ಆತಂಕ ವ್ಯಕ್ತಪಡಿಸಿದ್ದು, ಮನವಿಗೆ ನೂರಾರು ನಿವೇಶನ ರಹಿತರು ಸಹಿಯೊಂದಿಗೆ ಗಮನ ಸೆಳೆದಿದ್ದಾರೆ.