ಮಡಿಕೇರಿ, ಫೆ. 14: ಕೊಡಗಿನ ಐತಿಹಾಸಿಕ ಪುಷ್ಪಗಿರಿ ತಪ್ಪಲುವಿನ ಶ್ರೀ ಮಲ್ಲಿಕಾರ್ಜುನ ಸನ್ನಿಧಿ ಸಹಿತ ಇರ್ಪು ರಾಮೇಶ್ವರ ಕ್ಷೇತ್ರ ಹಾಗೂ ಕಣಿವೆ ರಾಮಲಿಂಗೇಶ್ವರದಿಂದ ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ಸನ್ನಿಧಿಗಳಲ್ಲಿ ವಿಶೇಷವಾಗಿ ಶಿವನಾಮ ಸ್ಮರಣೆಯೊಂದಿಗೆ ಶ್ರದ್ಧಾಭಕ್ತಿಯೊಂದಿಗೆ ಭಕ್ತರು ವ್ರತಾಚರಣೆಯ ಮೂಲಕ ಅಲ್ಲಲ್ಲಿ ರಾತ್ರಿಯಿಡೀ ಜಾಗರಣೆ ನಡೆಸಿದರು. ಗ್ರಾಮೀಣ ಪ್ರದೇಶಗಳಲ್ಲಿ ವೇಷಗಳನ್ನು ತೊಟ್ಟು ಮಕ್ಕಳು ಮನೆ ಮನೆಗೆ ಸುತ್ತಿ ಶಿವನಾಮದೊಂದಿಗೆ ಭಿಕ್ಷಾಟನೆ ಮೂಲಕ ಮಹಾ ಶಿವರಾತ್ರಿಯನ್ನು ಕಳೆದರು.
ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ, ಶ್ರೀ ವೀರಭದ್ರಸ್ವಾಮಿ ಸನ್ನಿಧಿ, ಮಹದೇವಪೇಟೆ ಬಸವೇಶ್ವರ, ಮುನೇಶ್ವರ, ಉಕ್ಕುಡ ಶ್ರೀ ರಾಜರಾಜೇಶ್ವರಿ ಸನ್ನಿಧಿಗಳಲ್ಲಿಯೂ ಅದ್ಧೂರಿಯ ಮಹಾ ಶಿವರಾತ್ರಿ ನೆರವೇರಿತು. ಇಲ್ಲಿನ ಪ್ರಜಾಪಿತ ಬ್ರಹ್ಮ ಕುಮಾರಿ ಸಂಸ್ಥೆ ಕೂಡ ಪ್ರತಿ ವರ್ಷದಂತೆ ವಿಶೇಷ ಕೈಂಕರ್ಯಗಳೊಂದಿಗೆ ಶಿವರಾತ್ರಿ ಆಚರಣೆಯನ್ನು ‘ವೈಟ್ಹೌಸ್’ನಲ್ಲಿ ಹಮ್ಮಿಕೊಂಡಿತ್ತು.
ಶ್ರೀ ಓಂಕಾರೇಶ್ವರ ಸನ್ನಿಧಿಯಲ್ಲಿ ನಿತ್ಯ ಪೂಜಾಧಿಗಳೊಂದಿಗೆ ರುದ್ರಹೋಮ, ಬಿಲ್ವಾರ್ಚನೆ, ಎಳನೀರು ಅಭಿಷೇಕ, ಕ್ಷೀರಾಭಿಷೇಕ ಗಳೊಂದಿಗೆ ಮಹಾಪೂಜೆ ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯ ಭಕ್ತರು ಸರದಿಯಲ್ಲಿ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು.
ಅಖಂಡ ಜ್ಯೋತಿ: ಮೈಸೂರಿನ ಎನ್.ಆರ್. ಸಮೂಹ ಸೈಕಲ್ ಪ್ಯೂರ್ ಅಗರ್ಬತ್ತಿ ಸಂಸ್ಥೆಯ ನಿರ್ದೇಶಕ ಅರ್ಜುನ್ರಂಗ ಸಮ್ಮುಖ ಶ್ರೀ ಓಂಕಾರೇಶ್ವರ ಸನ್ನಿಧಿಯಲ್ಲಿ 6 ಅಡಿ ಎತ್ತರದ ಅಗರ್ಬತ್ತಿಯ ಅಖಂಡ ಜ್ಯೋತಿಯನ್ನು ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಬೆಳಗಿದರು.
ಶ್ರೀ ಬ್ರಹ್ಮಕುಮಾರಿ: ನಗರದ ದಾಸವಾಳದಲ್ಲಿರುವ ಶ್ರೀ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ‘ವೈಟ್ಹೌಸ್’ನಲ್ಲಿ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಆಚರಿಸ ಲಾಯಿತು. ಮಹಾ ಶಿವರಾತ್ರಿ ಪ್ರಯುಕ್ತ ತೆರೆದ ಅಲಂಕೃತ ಮಂಟಪದೊಂದಿಗೆ ಶಿವಲಿಂಗವಿರಿಸಿ ವಿಶ್ವ ಶಾಂತಿಗಾಗಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಶ್ರೀ ವೀರಭದ್ರ ಗುಡಿ: ನಗರದ ದಾಸವಾಳ ಬೀದಿಯ ಶ್ರೀ ಮುನೀಶ್ವರ ವೀರಭದ್ರ ಗುಡಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಮೃತ್ಯುಂಜಯ ಹೋಮ, ವಿಶೇಷ ಅಲಂಕಾರ ಪೂಜಾಧಿ ಗಳೊಂದಿಗೆ ಧಾರ್ಮಿಕ ಕೈಂಕರ್ಯ ನಡೆಸಲಾಯಿತು. 1501 ವೀಳ್ಯದೆಲೆ ಹಾಗೂ 108 ಅಡಿಕೆ ಮಾಲೆಯೊಂದಿಗೆ ದೇವರಿಗೆ ಅಲಂಕಾರ ಭಕ್ತರ ಗಮನಸೆಳೆಯಿತು.
ಶ್ರೀ ಬಸವೇಶ್ವರ: ಇಲ್ಲಿನ ಮಹದೇವಪೇಟೆಯ ಪುರಾತನ ಶ್ರೀ ಬಸವೇಶ್ವರ ದೇವಾಲಯ ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ಸನ್ನಿಧಿಗಳಲ್ಲಿಯೂ ಮಹಾ ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಶ್ರೀ ರಾಜರಾಜೇಶ್ವರಿ: ಮಡಿಕೇರಿ ಬಳಿ ಶ್ರೀ ಉಕ್ಕುಡ ರಾಜರಾಜೇಶ್ವರಿ ಸನ್ನಿಧಿ, ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯಗಳಲ್ಲಿಯೂ ಮಹಾ ಶಿವರಾತ್ರಿ ಆಚರಣೆಯೊಂದಿಗೆ ದೇವತಾ ಕಾರ್ಯಗಳನ್ನು ಆಯೋಜಿಸಲಾಗಿತ್ತು. ಸದ್ಭಕ್ತರಿಗೆ ತೀರ್ಥ ಪ್ರಸಾದದೊಂದಿಗೆ ಅನ್ನಸಂತರ್ಪಣೆಯೂ ದೇಗುಲಗಳಲ್ಲಿ ನೆರವೇರಿತು.
ಭಾಗಮಂಡಲ: ಶಿವರಾತ್ರಿಯ ಪುಣ್ಯ ದಿನದಲ್ಲಿ ಭಾಗಮಂಡಲ ಭಗಂಡೇಶ್ವರ ಸನ್ನಿದಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಬೆಳಿಗ್ಗೆ 6.30 ಗಂಟೆಯಿಂದ ಶತರುದ್ರಾಭಿಷೇಕ ಹೋಮ 9 ಗಂಟೆಯವರೆಗೂ ನಡೆಯಿತು. ಮೈಸೂರಿನ ಪ್ರಕಾಶ್ ಭಟ್ ತಂಡದವರು ರುದ್ರ ಹೋಮವನ್ನು ನಡೆಸಿಕೊಟ್ಟರು. ಶತರುದ್ರಾಭಿಷೇಕ ಪೂಜಾ ಕಾರ್ಯಕ್ರಮವನ್ನು ಬಂಟ್ವಾಳದ ಸುದರ್ಶನ ಮಯ್ಯ ತಂಡದವರು ನಡೆಸಿಕೊಟ್ಟರು. ಮಹಾ ಪೂಜೆಯ ನಂತರ ದೇವ ಬಲಿ ಕಾರ್ಯಕ್ರಮ ನಡೆಯಿತು.
ಕಳೆದ 25 ವರ್ಷದಿಂದ ನಾಪೋಕ್ಲು, ಕೊಳಕೇರಿ, ಪಾರಾಣೆ, ಕಡೆಯಿಂದ ಕಾವೇರಿ ಬೈವಾಡ್ ಈ ವರ್ಷವೂ ಅಧಿಕ ಮಂದಿ ಬಂದು ಕಾವೇರಿ ಮಾತೆಯ ಕೃಪೆಗೆ ಪಾತ್ರರಾದರು. ಸಂಜೆ 5 ಗಂಟೆಯ ಮೇಲೆ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾನ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ವಹಿಸಿದ್ದರು.
ನಾಪೆÇೀಕ್ಲು: ಮಹಾಶಿವರಾತ್ರಿ ಪ್ರಯುಕ್ತ ಪೇರೂರು ಗ್ರಾಮದ ಬಲ್ಲತ್ತನಾಡು ಪೆರ್ಮೆ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿಶೇಷ ಪೂಜೆ ನಡೆಯಿತು.
ಮೂರು ಇಗ್ಗುತ್ತಪ್ಪ ದೇವಾಲಯಗಳಲ್ಲಿ ಒಂದಾದ ಪೇರೂರು ಗ್ರಾಮದ ಬಲ್ಲತ್ತನಾಡು ಪೆರ್ಮೆ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕೋತ್ಸವ, ತುಲಾಭಾರ ಸೇವೆ, ರುದ್ರಾಭಿಷೇಕ, ಮಹಾಪೂಜೆ ನಡೆಯಿತು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ, ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ ನಡೆಯಿತು. ಬಳಿಕ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿಯ ಪ್ರದರ್ಶನ ಮತ್ತು ನೃತ್ಯೋತ್ಸವ ನಡೆಯಿತು.
ದೇವಾಲಯದ ಅರ್ಚಕ ಗಿರೀಶ್ ನೇತೃತ್ವದಲ್ಲಿ ದೇವತಾ ವಿಧಿವಿಧಾನಗಳು ಜರುಗಿದವು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
ಸೋಮವಾರಪೇಟೆ: ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಅರ್ಚಕ ಪ್ರಸನ್ನ ಅವರ ನೇತೃತ್ವದಲ್ಲಿ ಶಕ್ತಿ ಪಾರ್ವತಿ ದೇವಿಗೆ ರಜತ ಕವಚ ಧಾರಣೆ ನಡೆಯಿತು. ಈಶ್ವರ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೆ ಅರ್ಚನೆ, ಅಷ್ಟೋತ್ರ ಅಭಿಷೇಕ ನಡೆಯಿತು. ಇದರೊಂದಿಗೆ ದೇವಾಲಯದಲ್ಲಿ ದುರ್ಗಾಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಜರುಗಿತು.
ಸಂಜೆ ಸೋಮೇಶ್ವರ ದೇವರಿಗೆ ಅಭಿಷೇಕ, ಶಿವಸಹಸ್ರನಾಮಾರ್ಚನೆ, ಮಹಾಮಂಗಳಾರತಿ, ಕಾರ್ಕಳದ ಆರ್ಟ್ ಆಫ್ ಲಿವಿಂಗ್ನ ಸುದರ್ಶನ್, ದೇವಾಲಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ತಾ. 14 ರಂದು ಬೆಳಿಗ್ಗೆ ರುದ್ರಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಮಧ್ಯಾಹ್ನ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್.ಸೋಮೇಶ್, ಪದಾಧಿಕಾರಿಗಳಾದ ರಾಮ್ ಪ್ರಸಾದ್, ಮಧುಸೂಧನ್ ಮತ್ತಿತರರು ಇದ್ದರು.
ಸಮೀಪದ ಯಡೂರು ಶ್ರೀ ಸೋಮೇಶ್ವರ ದೇವಾಲಯದಲ್ಲೂ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಅರ್ಚಕ ಸರ್ವೇಶ್ ಭಟ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಗ್ರಾಮಸ್ಥರು ಹಾಗೂ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಇದರೊಂದಿಗೆ ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯ, ಕಿಬ್ಬೆಟ್ಟ ಬಸವೇಶ್ವರ ದೇವಾಲಯ, ಗೌಡಳ್ಳಿ ನವದುರ್ಗಾಪರಮೇಶ್ವರಿ, ಕೂಗೂರು ಪಂಚಲಿಂಗೇಶ್ವರ, ಹಿರಿಕರ ಮಲ್ಲೇಶ್ವರ, ದೊಡ್ಡಮಳ್ತೆಯ ಬಸವೇಶ್ವರ, ಮಾಲಂಬಿ ಮಳೆಮಲ್ಲೇಶ್ವರ, ಶಾಂತಳ್ಳಿ ಕುಮಾರಲಿಂಗೇಶ್ವರ, ಪಟ್ಟಣದ ಬಸವೇಶ್ವರ, ಕಟ್ಟೆ ಬಸವೇಶ್ವರ, ರಾಮಮಂದಿರ ಸೇರಿದಂತೆ ಬಹುತೇಕ ದೇವಾಲಯದಲ್ಲಿ ಶಿವರಾತ್ರಿ ಪೂಜೆ ನೆರವೇರಿತು.
ವೀರಾಜಪೇಟೆ: ಇಲ್ಲಿನ ಒಂದನೇ ಪೆರುಂಬಾಡಿಯ ಪಂಚಲಿಂಗೇಶ್ವರ ಮತ್ತು ಭಗವತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವವನ್ನು ಆಚರಿಸಲಾಯಿತು.
ಶಿವರಾತ್ರಿ ಅಂಗವಾಗಿ ರಾತ್ರಿ ಮಹಾ ಪೂಜಾ ಸೇವೆ ನಂತರ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು. ಬಳಿಕ ಕೇರಳದ ಕ್ಯಾಲಿಕಟ್ನ ದಿಲ್ ಸೆ ಮ್ಯುಸಿಕಲ್ ಬ್ಯಾಂಡ್ ತಂಡದವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವೀರಾಜಪೇಟೆ: ವೀರಾಜಪೇಟೆ ವಿವಿಧೆಡೆಗಳಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಶಿವರಾತ್ರಿ ಉತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಹೋಮ, ವಿಧಿ ವಿಧಾನಗಳ ಸಾಂಪ್ರದಾಯಿಕ ಪೂಜೆ, ರಾತ್ರಿ ಭಜನೆ ಜಾಗರಣೆ ಜರುಗಿದವು.
ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ಈಶ್ವರ ದೇವಾಲಯ, ಶನೀಶ್ವರ ದೇವಾಲಯ, ಮಗ್ಗುಲದ ಶನೀಶ್ವರ ಮತ್ತು ನವಗ್ರಹ ದೇವಾಲಯ, ಮಾರಿಯಮ್ಮ ಮತ್ತು ಅಂಗಾಳಪರಮೇಶ್ವರಿ ದೇವಾಲಯ, ಅಪ್ಪಯ್ಯ ಸ್ವಾಮಿ ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನ, ಜೈನರಬೀದಿಯ ಬಸವೇಶ್ವರ ದೇವಸ್ಥಾನ, ಗಣಪತಿ ದೇವಸ್ಥಾನ, ಬೇಟೋಳಿ ಗ್ರಾಮದ ಮಾದೇವರ ದೇವಸ್ಥಾಮ, ಕೊಟ್ಟೋಳಿ ಗ್ರಾಮದ ಧಾರಾ ಮಹೇಶ್ವರ ದೇವಸ್ಥಾನ ಸೇರಿದಂತೆ ಸುತ್ತ ಮುತ್ತಲಿನ ದೇವಾಲಯಗಳಲ್ಲಿ ಶಿವರಾತ್ರಿ ಉತ್ಸವವನ್ನು ಆಚರಿಸಲಾಯಿತು.
ಮಹಾಶಿವರಾತ್ರಿಯ ಪ್ರಯುಕ್ತ ಇಲ್ಲಿನ ತೆಲುಗರ ಬೀದಿಯ ಮಾರಿಯಮ್ಮ ಮತ್ತು ಅಂಗಾಳಪರಮೇಶ್ವರಿ ದೇವಾಲಯದ ವತಿಯಿಂದ ಧ್ವಜಸ್ತಂಭ ಪೂಜೆ, ಕಲಶ ಪೂಜೆ ಹಾಗೂ ಕಾವಲು ದೇವತೆಗಳಿಗೆ ಪೂಜೆ, ತಲಕಾವೇರಿಯಿಂದ ಪವಿತ್ರ ಕಾವೇರಿ ತೀರ್ಥದಿಂದ ದೇವರಿಗೆ ಅಭಿಷೇಕ ನಂತರ ಚಂಡೆ ವಾದ್ಯದೊಂದಿಗೆ ಶಕ್ತಿ ದೇವತೆಯ ಮೆರವಣಿಗೆ ನಡೆಯಿತು.
ವೀರಾಜಪೇಟೆ: ಭಾರತ ದೇಶ ವಿಶಿಷ್ಟ ಸಂಸ್ಕøತಿಯನ್ನು ಹೊಂದಿದ್ದು, ಶೇ. 80 ರಷ್ಟು ಗ್ರಾಮೀಣ ಪ್ರದೇಶವನ್ನು ಹೊಂದಿ ಕ್ರೀಡಾ ಸೊಗಡುಗಳ ಆಗರವಾಗಿದೆ. ಕ್ರೀಡೆಗೆ ಸಂಬಂಧಿಸಿದ ಮೂಲ ಸೌಲಭ್ಯಗಳ ಕೊರತೆಯಿಂದ ಗ್ರಾಮಾಂತರ ಪ್ರದೇಶದ ಕ್ರೀಡಾ ಪ್ರತಿಭೆಗಳು ವಂಚಿತಗೊಂಡು ಮೂಲೆ ಗುಂಪಾಗುವ ಪರಿಸ್ಥಿತಿ ಒದಗಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ಬಿಟ್ಟಂಗಾಲ ಪೆಗ್ಗರಿಕಾಡು ನವೋದಯ ಯುವಕ ಸಂಘದಿಂದ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಮನ್ವಯತೆ ಹಾಗೂ ಕ್ರೀಡಾ ಕೂಟ ಉದ್ಘಾಟನೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಹಾಗೂ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ರೆ.ಫಾ. ಮದಲೈಮುತ್ತು ಮಾತನಾಡಿ, ಧಾರ್ಮಿಕತೆಯ ಆಚರಣೆ, ಪಾಲನೆಯಿಂದ ಸಮಾಜದ ಪ್ರತಿಯೊಬ್ಬರು ದೈವ ಶಕ್ತಿಯನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಕ್ರೀಡಾ ಕೂಟವನ್ನು ಉದ್ಘಾಟಿಸಿದ ವೀರಾಜಪೇಟೆ ಕಾವೇರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ, ಅಂತರ್ರಾಷ್ಟ್ರೀಯ ಗಾಲ್ಫ್ ಆಟಗಾರ್ತಿ ನಿಹಾರಿಕ ಮಾತನಾಡಿ ಕ್ರೀಡೆಯಲ್ಲಿ ಗ್ರಾಮಾಂತರ ಮಟ್ಟದಿಂದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಗೆ ಅವಕಾಶ ದೊರಕಿರುವದು ಸಂತಸ ತಂದಿದೆ. ಗ್ರಾಮಾಂತರ ಪ್ರದೇಶದ ಕ್ರೀಡಾ ಪ್ರತಿಭೆಗಳು ಅಂತರ್ರಾಷ್ಟ್ರೀಯ ಮಟ್ಟಕ್ಕೇರಬೇಕೆಂದು ನನ್ನ ಆಕಾಂಕ್ಷೆ ಎಂದು ಹೇಳಿದರು.
ಸಮಾರಂಭದಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಸದಸ್ಯ ಎಂ.ಬೋಪಯ್ಯ ಹಾಗೂ ನಿಹಾರಿಕ ತಂಗಮ್ಮಳನ್ನು ಸನ್ಮಾನಿಸಲಾಯಿತು. ಬಿ.ಎಂ. ದಿನೇಶ್ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಟಿ.ಎ. ಪ್ರದೀಶ್ ವಹಿಸಿ ಮಾತನಾಡಿದರು. ಸಂಘಟನೆಯ ಪಿ.ಎನ್. ವಿನೋದ್ ಸ್ವಾಗತಿಸಿ ನಿರೂಪಿಸಿದರು. ಟಿ.ಎನ್. ಅಜಿತ್ ವಂದಿಸಿದರು. ಸಮಾರಂಭದ ನಂತರ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಕೂಟಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಿದ್ದಾಪುರ: ವೀರಾಜಪೇಟೆಯ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ-ಗೌರಿ ದೇವಾಲಯದಲ್ಲಿ ಶಿವರಾತ್ರಿ ಉತ್ಸವವನ್ನು ಆಚರಿಸಲಾಯಿತು. ಬೆಳಗ್ಗಿನಿಂದಲೇ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಸೇವೆಗಳು ನಡೆದವು. ನಂತರ ರಾತ್ರಿ ವೀರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ಗುರುಗಳಾದ ಡಿ.ಎಸ್. ದಿಲಿಕುಮಾರ್ ಹಾಗೂ ಡಿ. ಅಪೂರ್ವ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿಗೀತೆಗಳನ್ನು ಹಾಡಿದರು.
ಈ ಸಂದರ್ಭ ಶ್ರೀ ಬಸವೇಶ್ವರ-ಗೌರಿ ದೇವಾಲಯದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿದರು. ಹಿರಿಯರಾದ ಉಮಾದೇವಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ದೇವಾಲಯದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
ಸಿದ್ದಾಪುರ: ಇತಿಹಾಸ ಪ್ರಸಿದ್ಧ, ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ದೇವಾಲಯದಲ್ಲಿ ಗಣಪತಿ ಹೋಮ, ರುದ್ರಹೋಮ, ಮಹಾಪೂಜೆ, ಏಕಾದಶಿ ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ಬೆಳಗ್ಗಿನಿಂದಲೇ ನೂರಾರು ಭಕ್ತರು ದೇವರ ದರ್ಶನ ಪಡೆದು, ತಮ್ಮ ಹರಕೆಗಳನ್ನು ಒಪ್ಪಿಸಿದರು. ಶಿವರಾತ್ರಿಯ ಪ್ರಯುಕ್ತ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಪ್ರಮುಖರಾದ ಬೋಸ್ ಸುಬ್ಬಯ್ಯ, ಪಟ್ಟಡ ಅಶೋಕ್, ಮಂಡೇಪಂಡ ರಮೇಶ್, ರಾಮಚಂದ್ರರಾವ್ ಸೇರಿದಂತೆ ಇತರರು ಇದ್ದರು.
ಸಿದ್ದಾಪುರ: ಶಿವರಾತ್ರಿ ಪ್ರಯುಕ್ತ ಯುವ ಬ್ರಿಗೇಡ್, ರಾಯಲ್ ಯುವಕ ಸಂಘ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಸಿದ್ದಾಪುರದ ಹಿಂದೂ ರುದ್ರಭೂಮಿಯನ್ನು ಸ್ವಚ್ಛಗೊಳಿಸುವ ಮುಖಾಂತರ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು.
ಸಂಘದ ಪ್ರಮುಖರಾದ ಲತೀಶ್ ರೈ, ಅಕ್ಷಯ್, ಪ್ರಜೀತ್, ಗಿರೀಶ್ ನವೀನ್ ಇತರರು ಆಗಮಿಸಿದ್ದರು.
ಆಲೂರುಸಿದ್ದಾಪುರ: ಸಮೀಪದ ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟದಲ್ಲಿರುವ ಶ್ರೀ ಮಳೆಮಲ್ಲೇಶ್ವರ ದೇವಾಲಯದಲ್ಲಿ ಸಡಗರ-ಸಂಭ್ರಮದಿಂದ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ದೇವಾಲಯದಲ್ಲಿ ಮಲ್ಲೇಶ್ವರನಿಗೆ ಹಾಗೂ ಶ್ರೀ ಗಣಪತಿ ಮತ್ತು ಶ್ರೀ ಬಸವಣ್ಣ ದೇವರಿಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭ ದೇವಾಲಯದ ಹಿಂಭಾಗದಲ್ಲಿರುವ ಶ್ರೀ ವೀರಭದ್ರಸ್ವಾಮಿಗೆ ಪೂಜೆಯನ್ನು ಸಲ್ಲಿಸಲಾಯಿತು. ಭಕ್ತಾಧಿಗಳಿಗೆ ದೇವಾಲಯ ಸಮಿತಿ ವತಿಯಿಂದ ಕುಡಿಯುವ ನೀರು, ಮಜ್ಜಿಗೆ ಮತ್ತು ಅನ್ನದಾನವನ್ನು ಏರ್ಪಡಿಸಲಾಗಿತ್ತು. ದೇವಾಲಯದ ಅರ್ಚಕರುಗಳಾದ ನಂಜುಂಡಯ್ಯ, ಚಂದ್ರಪ್ಪ ಪೂಜಾ ವಿದಿವಿಧಾನವನ್ನು ನೆರವೇರಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಪ್ರಮುಖರಾದ ಎಚ್.ಪಿ.ಶೇಷಾದ್ರಿ, ಹೆಚ್.ಕೆ. ಹಾಲಪ್ಪ, ಹೆಚ್.ಕೆ. ಸದಾಶಿವ, ಎಚ್.ಪಿ. ಮೋಹನ್, ಹೆಚ್.ವಿ. ದಿವಾಕರ್, ಎಚ್.ವಿ. ಸುರೇಶ್, ಎಸ್.ಸಿ. ಶರತ್ಶೇಖರ್, ಮಹಾಂತೇಶ್, ಎಚ್.ಆರ್. ಮುತ್ತಣ್ಣ ಮುಂತಾದವರು ಇದ್ದರು.
ಸೋಮವಾರಪೇಟೆ ಸಿವಿಲ್ ನ್ಯಾಯಾಲಯದ ಕಿರಿಯ ನ್ಯಾಯದೀಶ ಶ್ಯಾಮ್ಪ್ರಕಾಶ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಕುಶಾಲನಗರ ಡಿವೈಎಸ್ಪಿ ಮುರುಳೀಧರ್ ವಿಶೇಷ ಪೂಜೆ ಸಲ್ಲಿಸಿದರು.
ಆಲೂರುಸಿದ್ದಾಪುರ/ಒಡೆಯನಪುರ: ಬೆಸೂರು ಗ್ರಾ.ಪಂ.ಗೆ ಸೇರಿದ ಆಗಳಿ ಗ್ರಾಮದ ಏಕಶಿಲೆಯ ಬೆಟ್ಟದ ಕೆಳಭಾಗ ಗುಹೆಯೊಳಗಿರುವ ಗವಿಸಿದ್ದೇಶ್ವರದಲ್ಲಿ ಮಹಾಶಿವ ರಾತ್ರಿ ಪ್ರಯುಕ್ತ ವಿಶೇಷ ಪೊಜೆಯನ್ನು ಸಲ್ಲಿಸಲಾಯಿತು. ದೇವಾಲಯ ಸಮಿತಿಯಿಂದ ಭಕ್ತಾಧಿಗಳಿಗೆ ಅನ್ನದಾನ ಏರ್ಪಡಿಸಲಾಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಪ್ರಸನ್ನ, ಪ್ರಮುಖರಾದ ಎ.ಎಸ್. ಸುಬ್ಬಯ್ಯ ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು.
ಕುಶಾಲನಗರ: ಕುಶಾಲನಗರ ಗಣಪತಿ ದೇವಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾತ್ರಿ ಪೂರ್ತಿ ಸ್ಫಟಿಕ ಶಿವಲಿಂಗವನ್ನು ಪೂಜಿಸಿ ಪವಿತ್ರ ಜಲಾಭಿಷೇಕ ನಡೆಸಲಾಯಿತು.
ಸಂಜೆ 6 ಗಂಟೆಯಿಂದ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರ ತಂಡವಾದ ಸುದರ್ಶನ ಮತ್ತು ಬಳಗದಿಂದ ಭಜನಾ ಕಾರ್ಯಕ್ರಮ, ನಂತರ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ ನಿರಂತರ ನಡೆಯಿತು. ಮಕ್ಕಳಿಂದ ಭಕ್ತಿ ಪ್ರಧಾನ ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರ ದೇವಾಲಯಗಳ ಒಕ್ಕೂಟದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟ ಸಮಿತಿ ಅಧ್ಯಕ್ಷರಾದ ಎಂ.ಕೆ. ದಿನೇಶ್ ಮತ್ತು ದೇವಾಲಯಗಳ ಪ್ರತಿನಿಧಿಗಳು ಹಾಗೂ ವಿವಿಧ ಉಪಸಮಿತಿಗಳ ಪ್ರಮುಖರಾದ ಕೆ.ಎನ್. ದೇವರಾಜ್, ಕೆ.ಎಸ್. ನಾಗೇಶ್, ಡಿ.ವಿ. ರಾಜೇಶ್, ವಿ.ಎಸ್. ಆನಂದಕುಮಾರ್ ಮತ್ತಿತರರು ಇದ್ದರು.
ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರ: ಕುಶಾಲನಗರದ ಸೇರಿದಂತೆ ಸುತ್ತಮುತ್ತ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿತರಣೆ ನಡೆಯಿತು. ರಾತ್ರಿಯಿಡೀ ಪೂಜೆ ನಡೆಯಿತು. ಕುಶಾಲನಗರದೇವಾಲಯ ಒಕ್ಕೂಟಗಳ ಪ್ರತಿನಿಧಿಗಳು ಸೋಮೇಶ್ವರದೇವಾಲಯಕ್ಕೆ ತೆರಳಿ ಸಾಮೂಹಿಕವಾಗಿ ಫಲಪುಷ್ಪ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕುಶಾಲನಗರ ಭಜನಾ ಮಂಡಳಿ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮಗಳು ಜರುಗಿದವು. ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಗಣಪತಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇವಾಲಯ, ಶ್ರೀ ಆಂಜನೇಯ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ನಂಜರಾಯಪಟ್ಟಣದ ಶ್ರೀ ನಂಜುಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ಎಲ್ಲಾ ದೇವಾಲಯಗಳಲ್ಲಿ ಭಕ್ತಾದಿಗಳು ಭಕ್ತಿ ಭಾವಗಳಿಂದ ಶಿವನ ಆರಾಧನೆಯಲ್ಲಿ ತೊಡಗಿಸಿಕೊಂಡ ದೃಶ್ಯಕಂಡುಬಂತು.
ಶಿವರಾತ್ರಿ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ, ಭಕ್ತಿ ಪ್ರಧಾನ ನೃತ್ಯ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರ ಮುಳ್ಳುಸೋಗೆ ಗ್ರಾಮದ ಬಯಲು ಬಸವೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ 9ನೇ ವರ್ಷದ ಮಹಾ ಶಿವರಾತ್ರಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಬಡಾವಣೆಯ ಬಯಲು ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮ ನಡೆದು ಸ್ಥಳೀಯ ನಿವಾಸಿಗಳ ನಡುವೆ ಆಟೋಟ ಸ್ಪರ್ಧೆಗಳು ಜರುಗಿದವು. ಸಮೀಪದ ಕೊಪ್ಪಗ್ರಾಮದ ಸಿಡಿಲು ಮಲ್ಲಿಕಾರ್ಜುನ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು, ಅನ್ನಸಂತರ್ಪಣೆ ನಡೆಯಿತು.ಕಾವೇರಿ ನದಿ ಮಧ್ಯಭಾಗದಲ್ಲಿ 7 ಹೊಳೆ ಬಳಿ ಉದ್ಭವಗೊಂಡ ಶಿವಲಿಂಗಕ್ಕೆ ಅಭಿಷೇಕ ಕಾರ್ಯಕ್ರಮಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿದರು.
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೋಳ್ಳುರು ಗ್ರಾಮದ ಶ್ರೀಮುನೇಶ್ವರ ಗುಡಿಯಲ್ಲಿ ಪ್ರತಿವರ್ಷ ಶಿವರಾತ್ರಿಯ ಮರು ದಿನ ವಿವಿಧ ಪೂಜಾಕಾರ್ಯವನ್ನು ನಡೆಸಲಾಗುತ್ತದೆ. ಅದೇ ರೀತಿ ಈ ಬಾರಿಯು ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಸಂದÀರ್ಭ ಸತ್ಯನಾರಾಯಣ ಪೂಜೆ ನಡೆಸಲಾಯಿತು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಸಮೀತಿ ಅಧ್ಯಕ್ಷ ಶಶಿ, ಉಪಾಧ್ಯಕ್ಷ ಕುಡೆಕ್ಕಲ್ ಗುರುಪ್ರಸಾದ್, ಪ್ರತ್ಯು, ಗಣೇಶ್, ಬಿ.ಎನ್, ರಮೇಶ್, ಜಿ.ಎಂ. ಸಲಿ, ಗ್ರಾಮಸ್ಥರು ಮತ್ತು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಮುಂತಾದವರು ಹಾಜರಿದ್ದರು.