ಮಡಿಕೇರಿ, ಫೆ. 14: ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್ ಸೂಚನೆ ನೀಡಿದರು.ಮಡಿಕೇರಿ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ನಿರ್ದೇಶನ ನೀಡಿದರು.ಗ್ರಾಮೀಣ ಭಾಗದ ಜನತೆಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು. ಈ ವೇಳೆ ಮಾತನಾಡಿದ ನೀರು ಮತ್ತು ನೈರ್ಮಲ್ಯ ಇಲಾಖೆಯ ನೂತನ ಅಧಿಕಾರಿ ಸುರೇಶ್, ಕುಡಿಯುವ ನೀರಿಗೆ ಈ ಬಾರಿ ಅನುದಾನ ಇಲ್ಲ. ರಾಜ್ಯದ ಇತರೆಡೆ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದರೂ, ಕೊಡಗು ಜಿಲ್ಲೆಗೆ ಬಿಡುಗಡೆಯಾಗಿಲ್ಲ ಎಂದರು. ಶಾಸಕರ ಗಮನಕ್ಕೆ ತಂದು ಅನುದಾನ ಬಿಡುಗಡೆಗೊಳಿಸಲು ಕ್ರಮಕೈಗೊಂಡು ಸಮಸ್ಯೆ ಆಗದಂತೆ ನೋಡಿ ಕೊಳ್ಳುವಂತೆ ಅಧ್ಯಕ್ಷರು ಸೂಚನೆ ನೀಡಿದರು.

(ಮೊದಲ ಪುಟದಿಂದ) ಆಹಾರ ಇಲಾಖೆಯ ಅಧಿಕಾರಿ ಸದಾನಂದ ಮಾತನಾಡಿ ಬಿಪಿಎಲ್ ಪಡಿತರ ಚೀಟಿಗಾಗಿ 5361 ಅರ್ಜಿಗಳು ಸಲ್ಲಿಕೆಯಾಗಿದ್ದು, 1814 ಪಡಿತರ ಚೀಟಿಗೆ ಅನುಮೋದನೆ ಆಗಿದೆ. ಹೊಸದಾಗಿ 974 ಅರ್ಜಿಗಳು ಮತ್ತೆ ಸಲ್ಲಿಕೆಯಾಗಿವೆ ಎಂದರು.

ಕೆಲವೆಡೆ ಹಳೇ ಪಡಿತರ ಚೀಟಿಗೆ ಆಹಾರ ಸಾಮಾಗ್ರಿಗಳು ಸಿಗುತ್ತಿಲ್ಲ ಎಂದು ಶೋಭಾ ಅಧಿಕಾರಿಗಳ ಗಮನಕ್ಕೆ ತಂದರು. ಪರಿಶೀಲಿಸುವದಾಗಿ ಅಧಿಕಾರಿ ಭರವಸೆ ನೀಡಿದರು.

ವಿದ್ಯುತ್ ಸಮಸ್ಯೆ ತಪ್ಪಿಸಲು ತಾಲೂಕಿನಲ್ಲಿ 20 ಟ್ರಾನ್ಸ್‍ಫಾರ್ಮರ್ ಬಿಡುಗಡೆಯಾಗಿದೆ. ವಿದ್ಯುತ್ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸೆಸ್ಕ್ ಅಧಿಕಾರಿ ಸಭೆಯ ಗಮನಕ್ಕೆ ತಂದರು.

ತಾಲೂಕಿನಲ್ಲಿ 1032 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರೂ.10,47,000 ಬ್ಯಾಂಕ್‍ಗೆ ಜಮಾ ಮಾಡಲಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೇಳಿದರು.

ವಿಶೇಷ ತರಗತಿ : ಮಾ.23ರಿಂದ ಏ.15ರವರೆಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು, ಉತ್ತಮ ಫಲಿತಾಂಶ ಪಡೆಯುವ ಸಲುವಾಗಿ ವಿದ್ಯಾರ್ಥಿಗಳಿಗೆ ಸಂಜೆ ವಿಶೇಷ ತರಗತಿಗಳು ಆರಂಭವಾಗಿವೆ. ಆದರೆ ಮುಸಲ್ಮಾನ ವಿದ್ಯಾರ್ಥಿಗಳು ಬೆಳಿಗ್ಗೆ ಮದ್ರಸ ತರಗತಿ, ಹಗಲು ಶಾಲೆ ಮತ್ತೆ ಸಂಜೆ ವಿಶೇಷ ತರಗತಿಗೆ ಹಾಜರಾಗಲು ಕಷ್ಟವಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಅಧ್ಯಕ್ಷರ ಗಮನಕ್ಕೆ ತಂದರು.

ಈ ಸಂದರ್ಭ ಅಧ್ಯಕ್ಷೆ ಶೋಭಾ ಅವರು ಶಾಸಕರು ಮತ್ತು ಸಚಿವರ ಗಮನಕ್ಕೆ ತಂದು ವಿಶೇಷ ತರಗತಿಗೆ ಹಾಜರಾಗಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಬಗ್ಗೆ ಗಮನಕ್ಕೆ ತರುವದಾಗಿ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜೀವನ್ ಕುಮಾರ್ ಇದ್ದರು.

ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ಬಗ್ಗೆ ಸಭೆಯ ಗಮನಕ್ಕೆ ತಂದರು.