ಭಾರತ ವಾಸಿಗಳು ಪ್ರತಿ ವರ್ಷ ಶಿವರಾತ್ರಿಯನ್ನು ಆಚರಿಸುತ್ತಾರೆ. ಆದರೆ ಇದು ಭಾರತದ ಅತಿ ದೊಡ್ಡ ಹಬ್ಬವೆಂಬುದನ್ನು ಅವರು ಮರೆತಿದ್ದಾರೆ. ಶಿವರಾತ್ರಿಯ ವಾಸ್ತವಿಕ ಮಹತ್ವವನ್ನು ಅರಿತು ಸಾರ್ಥಕ ರೂಪದಲ್ಲಿ ಅದನ್ನು ಆಚರಿಸುವ ಅವಶ್ಯಕತೆ ಇದೆ. ಶಿವನು ಯಾರು ಮತ್ತು ರಾತ್ರಿಯ ಜೊತೆ ಅವನ ಸಂಬಂಧವೇನು ಎಂಬದನ್ನೂ ಕೂಡ ತಿಳಿಯಬೇಕಿದೆ.
ಪರಮಾತ್ಮನ ಹೆಸರು ಶಿವ. ಶಿವನ ಅರ್ಥಕಲ್ಯಾಣಕಾರಿ ಎಂದು. ಶಿವನಿಗೆ ಬಿಂದು ಎಂದೂ ಹೇಳಲಾಗುತ್ತದೆ. ಪರಮಾತ್ಮನು ಈ ಕಲ್ಪವೃಕ್ಷದ ವೃಕ್ಷಪತಿಯಾಗಿದ್ದಾನೆ. ನಿಮಿತ್ತನೂ ಆಗಿದ್ದಾನೆ. ಕೇವಲ ಪರಮಾತ್ಮ ಮಾತ್ರ ಎಲ್ಲ ಸುಖಗಳ ಅಕ್ಷಯ ಭಂಡಾರನೂ ವಿಶ್ವ ಕಲ್ಯಾಣಕಾರಿಯೂ ಸರ್ವರ ಗತಿ ಸದ್ಗತಿದಾತನೂ ಆಗಿದ್ದಾನೆ. ಆದ್ದರಿಂದ ಶಿವ ಎಂಬುದು ಪರಮಾತ್ಮನಿಗೆ ಇರುವ ಪರ್ಯಾಯ ವಾಚಕ ನಾಮ.
ಭಾರತದಲ್ಲಿ ಶಿವನ ಪ್ರತಿಮೆಯು ಶಿವಲಿಂಗದ ರೂಪದಲ್ಲಿ ಅನೇಕ ಮಂದಿರಗಳಲ್ಲಿ ಕಾಣಬರುತ್ತದೆ. ಇದರಲ್ಲಿ ಮುಖ್ಯವಾಗಿ ಅಮರನಾಥ, ಸೋಮನಾಥ, ವಿಶ್ವೇಶ್ವರ, ಪಾಪಕಟೇಶ್ವರ, ಮುಕ್ತೇಶ್ವರ, ಮಹಾಕಾಳೇಶ್ವರ ಇವುಗಳು ಪ್ರಸಿದ್ಧವಾಗಿವೆ. ಇವುಗಳು ಪರಮಾತ್ಮನ ಯಾವದಾದರೊಂದು ಗುಣ ಅಥವಾ ದಿವ್ಯ ಕರ್ತವ್ಯದ ಸೂಚಕವಾಗಿದೆ. ದಕ್ಷಿಣದಲ್ಲಿರುವ ರಾಮೇಶ್ವರ, ಬೃಂದಾವನದಲ್ಲಿರುವ ಗೋಪೇಶ್ವರ ಎಂಬ ಮಂದಿರಗಳು ಶ್ರೀ ರಾಮ ಮತ್ತು ಶ್ರೀ ಕೃಷ್ಣರಿಗೂ ಪರಮ ಪ್ರೀತನಾಗಿದ್ದನು ಎಂದು ಹೇಳುತ್ತವೆ.
ಪರಮಾತ್ಮನ ಪ್ರತಿಮೆ
ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಆದ್ದರಿಂದ ಸಾಕಾರಿ ಮತ್ತು ಆಕಾರಿ ದೇವತೆಗಳ ಹೋಲಿಕೆಯಲ್ಲಿ ಅವನಿಗೆ ನಿರಾಕಾರ ಎಂದು ಹೇಳಲಾಗುತ್ತದೆ. ಪರಮಾತ್ಮನ ಜ್ಯೋತಿರ್ಬಿಂದು ಸ್ವರೂಪದ ಸಾಕ್ಷಾತ್ಕಾರವು ಕೇವಲ ದಿವ್ಯದೃಷ್ಟಿಯಿಂದ ಮಾತ್ರ ಆಗಬಲ್ಲದು. ಶಿವಲಿಂಗಕ್ಕೆ ಯಾವದೇ ಶಾರೀರಿಕ ರೂಪವಿಲ್ಲ. ಇದು ಪರಮಾತ್ಮನ ಸಾಂಕೇತಿಕ ಚಿಹ್ನೆಯಾಗಿದೆ. ಇಂದು ಅಧಿಕಾಂಶ ಜನರು ಲಿಂಗ ಎಂಬ ಶಬ್ದದ ಅರ್ಥವನ್ನು ಸರಿಯಾಗಿ ತಿಳಿದಿಲ್ಲದ ಕಾರಣ ಅದರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ವಾಸ್ತವಿಕವಾಗಿ ಪರಮಾತ್ಮ ಶಿವನು ಜ್ಯೋತಿ ಸ್ವರೂಪವಾಗಿರುವ ಕಾರಣ ಅವರ ಪ್ರತಿಮೆಯಾಗಿ ಜ್ಯೋತಿರ್ಲಿಂಗ ಅಥವಾ ಶಿವಲಿಂಗ ಎಂದು ಕರೆಯಲಾಗುತ್ತದೆ.
ವಿಶ್ವವ್ಯಾಪಿಯಾಗಿದೆ
ಅನ್ಯ ಧರ್ಮದ ಜನರೂ ಕೂಡ ಪರಮಾತ್ಮ ತತ್ವಕ್ಕೆ ತಮ್ಮ ತಮ್ಮ ರೀತಿಯಲ್ಲಿ ಮಾನ್ಯತೆ ನೀಡುತ್ತಾರೆ. ಇಸ್ಲಾಂನಲ್ಲಿಯೂ ಏಕತ್ವ, ನಿರಾಕಾರ ತತ್ವಗಳಿಗೆ ಒತ್ತು ನೀಡಲಾಗಿದೆ. ಜಪಾನಿನ ಬಹುತೇಕ ಬೌದ್ಧ ಧರ್ಮಾವಲಂಬಿಗಳು ಇಂದಿಗೂ ಕೂಡ ಶಿವಲಿಂಗದ ಆಕಾರದ ಕಲ್ಲನ್ನು ಎದುರಿಟ್ಟು ಧ್ಯಾನ ಮಾಡುತ್ತಾರೆ. ಏಸು ಕ್ರಿಸ್ತನು ಪರಮಾತ್ಮನನ್ನು ದಿವ್ಯಜ್ಯೋತಿ ಎಂದು ಕರೆದಿದ್ದಾನೆ. ಇಟಲಿ ಮತ್ತು ಫ್ರಾನ್ಸ್‍ನ ಗಿರಿಜನರು ತಮ್ಮ ಮನೆಗಳಲ್ಲಿ ಶಿವಲಿಂಗದ ಪ್ರತಿಮೆಗಳನ್ನು ಇಟ್ಟುಕೊಂಡಿದ್ದಾರೆ. ರೋಮ್‍ನಲ್ಲಿ ಶಿವಲಿಂಗಕ್ಕೆ ಪ್ರಿಯಪಸ್ ಎಂದು ಕರೆಯುತ್ತಾರೆ. ಶಂಕರಾಚಾರ್ಯರೂ ಕೂಡ ಶಿವಲಿಂಗದ ಮಠಗಳನ್ನು ಸ್ಥಾಪನೆ ಮಾಡಿದ್ದಾರೆ. ಗುರುನಾನಕರೂ ಪರಮಾತ್ಮನನ್ನು ಓಂಕಾರನೆಂದು ಕರೆದರು. ಜ್ಯೋತಿ ಸ್ವರೂಪ ಶಿವಪರಮಾತ್ಮನ ಒಂದು ಪ್ರಸಿದ್ಧ ಮಂದಿರದ ಹೆಸರೂ ಕೂಡ ಓಂಕಾರೇಶ್ವರಎಂಬುದಾಗಿದೆ. ಗುರು ಗೋವಿಂದ ಸಿಂಹರವರ ‘ದೇ ಶಿವ ವರ್ ಮೋಹೆ’ ಶಬ್ದವು ಅವರು ಪರಮಾತ್ಮ ಶಿವನಿಂದ ವರದಾನವನ್ನು ಬೇಡುವ ನೆನಪನ್ನು ನೀಡುತ್ತದೆ. ಇದರಿಂದ ಪರಮಾತ್ಮ ಶಿವನು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿ ಪೂಜಿತನಾಗುತ್ತಿಲ್ಲ. ಆದರೆ ವಿಶ್ವದ ಎಲ್ಲ ಆತ್ಮಗಳಿಗೂ ಪರಮ ಪೂಜ್ಯನೂ ಪರಮಾತ್ಮನೂ ಆಗಿದ್ದಾನೆ.
ದಿವ್ಯತೆ
ಶಿವಲಿಂಗದ ಮೇಲೆ ಇರುವ ತ್ರಿಪುಂಡ ಹಾಗೂ ಶಿವನ ಮೇಲೆ ಅರ್ಪಿಸಲಾಗುವ ಮೂರು ಎಲೆಗಳುಳ್ಳ ಬಿಲ್ವಪತ್ರೆಯು ಪರಮಾತ್ಮನ ಮುಖ್ಯ ಮೂರು ಕರ್ತವ್ಯಗಳನ್ನು ಸಿದ್ಧ ಮಾಡುತ್ತವೆ. ಆದ್ದರಿಂದ ಶಿವನಿಗೆ ತ್ರಿಮೂರ್ತಿ, ತ್ರಿಕಾಲದರ್ಶಿ ಮತ್ತು ತ್ರಿಲೋಕಿನಾಥ ಎಂಬ ಹೆಸರುಗಳು ಬಂದಿವೆ. ಜ್ಯೋತಿರ್ಬಿಂದು ಪರಮಾತ್ಮ ಶಿವನು ಬ್ರಹ್ಮ, ವಿಷ್ಣು, ಶಂಕರರ ರಚಯಿತನಾಗಿರುವದರಿಂದ ತ್ರಿಮೂರ್ತಿ ಸ್ವರೂಪನಾಗಿ ಅವರುಗಳ ಮೂಲಕ ಕ್ರಮಶಃ ಹೊಸ ಸತ್ಯಯುಗ ಸೃಷ್ಟಿಯ ಸ್ಥಾಪನೆ, ಪಾಲನೆ ಮತ್ತು ಕಲಿಯುಗಿ ಪ್ರಪಂಚದ ವಿನಾಶವನ್ನು ಮಾಡುವ ಸ್ವಾಮಿಯಾಗಿದ್ದಾನೆ.
ಆಧ್ಯಾತ್ಮಿಕ ರಹಸ್ಯ
ಶಿವರಾತ್ರಿಯನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುದರ್ಶಿಯಂದು ಅಮಾವಾಸ್ಯೆಯ ಒಂದು ದಿನ ಮುಂಚಿತವಾಗಿ ಆಚರಿಸಲಾಗುತ್ತದೆ. ಪಾಲ್ಗುಣ ಮಾಸವು ವರ್ಷದ ಅಂತ್ಯದ ದ್ಯೋತಕವಾಗಿದೆ. ಚತುದರ್ಶಿ ರಾತ್ರಿಯು ಘೋರ ಅಂಧಕಾರದ ಗುರುತಾಗಿದೆ. ಪರಮಾತ್ಮ ಶಿವನು ಕಲ್ಪಾಂತ್ಯದ ಘೋರ ಅಜ್ಞಾನರೂಪಿ ರಾತ್ರಿಯ ಸಮಯದಲ್ಲಿ ಹಳೆಯ ಸೃಷ್ಟಿಯ ವಿನಾಶದ ಸ್ವಲ್ಪ ಮೊದಲು ಅವತರಿತರಾಗಿ ತಮೋ ಪ್ರಧಾನ ಮತ್ತು ಪಾಪಚಾರದ ವಿನಾಶವನ್ನು ಮಾಡಿ ದು:ಖ ಅಶಾಂತಿಯನ್ನು ಸಂಪೂರ್ಣವಾಗಿ ಸಮಾಪ್ತಿ ಮಾಡುವದರಿಂದ ಈ ದಿನವನ್ನು ಶಿವರಾತ್ರಿ ಎಂದು ಆಚರಣೆ ಮಾಡಲಾಗುತ್ತದೆ. ಜ್ಯೋತಿರ್ಬಿಂದು ಗಂಗಾಧರ ಪರಮಾತ್ಮ ಶಿವನು ಕಲಿಯುಗದ ಅಂತ್ಯ ಹಾಗೂ ಸತ್ಯಯುಗದ ಆದಿಯ ಸಂಧಿಕಾಲದಲ್ಲಿ ಅಥವಾ ಸಂಗಮದ ಸಮಯದಲ್ಲಿ ಬ್ರಹ್ಮ ದೇವನ ಶರೀರ ಅಥವಾ ಭಾಗ್ಯಶಾಲಿ ಶರೀರವೆಂಬ ರಥವನ್ನು ಪ್ರವೇಶ ಮಾಡಿ ಈಶ್ವರೀಯ ಜ್ಞಾನವನ್ನು ನೀಡುತ್ತಾರೆ. ಬ್ರಹ್ಮ ದೇವನ ಮೂಲಕ ಯಾವ ಮಾತೆಯರು ಮತ್ತು ಕನ್ಯೆಯರು ಪರಮಾತ್ಮ ಶಿವನಿಂದ ಜ್ಞಾನ ಸುಧೆಯ ಅಮೃತ ಪಾನವನ್ನು ಮಾಡುತ್ತಾರೋ ಅವರನ್ನು ಶಿವ ಶಕ್ತಿಯರು ಎಂದು ಕರೆಯಲಾಗು ತ್ತದೆ. ಈ ಚೈತನ್ಯ ಮಾತೆಯರು ಭಾರತದ ಜನರಿಗೆ ಶಿವನ ಮೂಲಕ ಜ್ಞಾನವನ್ನು ಪ್ರಾಪ್ತಿ ಮಾಡಿಸಿ ಪಾವನ ಮಾಡುತ್ತಾರೆ. ಆದ್ದರಿಂದಲೇ ಶಿವರಾತ್ರಿಯು ಭಾರತದ ಅತಿ ದೊಡ್ಡ ಹಬ್ಬವಾಗಿದೆ.
ಈಶ್ವರೀಯ ಸಂದೇಶ
ಈಗ ಪರಮಾತ್ಮ ಶಿವನ ಆದೇಶವೇನೆಂದರೆ - ‘ನನ್ನ ಪ್ರಿಯ ಭಕ್ತರೇ, ನೀವು ಜನ್ಮ ಜನ್ಮಾಂತರಗ ಳಿಂದ ನನ್ನನ್ನು ಸರಿಯಾಗಿ ಅರ್ಥೈಸಿ ಕೊಳ್ಳದೇ ನನ್ನ ಜಡ ಪ್ರತಿಮೆಯ ಪೂಜೆ ಮಾಡುತ್ತಾ ಜಾಗರಣೆ ಮತ್ತು ಉಪವಾಸ ಇತ್ಯಾದಿ ಆಚರಣೆಗಳ ಮೂಲಕ ಶಿವರಾತ್ರಿಯನ್ನು ಆಚರಿಸುತ್ತಿದ್ದೀರಿ. ಈಗ ಈ ನಿಮ್ಮ ಅಂತಿಮ ಜನ್ಮದಲ್ಲಿ ಮಹಾ ವಿನಾಶದ ಮೊದಲು ನನ್ನ ಜ್ಞಾನದ ಮೂಲಕ ಅಜ್ಞಾನ ನಿದ್ರೆಯಿಂದ ಜಾಗೃತರಾಗಿ ನನ್ನ ಜೊತೆಯಲ್ಲಿ ಯೋಗ ಯುಕ್ತರಾಗಿ ಸತ್ಯ ಉಪವಾಸವನ್ನು ಮಾಡಿರಿ. ಈ ಜ್ಞಾನ ಮತ್ತು ಯೋಗದ ಬಲದಿಂದ ಮಹಾ ವಿನಾಶದವರೆಗೆ ಪರಿಶುದ್ಧತೆಯ ವ್ರತವನ್ನು ಪಾಲನೆ ಮಾಡಿರಿ. ಇದೇ ಸತ್ಯವಾದ ಮಹಾವ್ರತ ಅಥವಾ ಶಿವ ವ್ರತವಾಗಿದೆ.
- ಬ್ರಹ್ಮಾ ಕುಮಾರೀಸ್, ಲೈಟ್ ಹೌಸ್, ಮಡಿಕೇರಿ.
ಮೊಬೈಲ್: 9449239750.